ADVERTISEMENT

ಡಾ. ಅಂಕನಹಳ್ಳಿ ಪಾರ್ಥಗೆ ‘ಡಾ. ಎಚ್.ಎನ್. ಪ್ರಶಸ್ತಿ’

ಜಿಲ್ಲೆಯ ಸಾಹಿತಿ, ಪ್ರಕಾಶಕನಿಗೆ ರಾಜ್ಯಮಟ್ಟದ ಪ್ರಶಸ್ತಿಯ ಗೌರವ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 15:55 IST
Last Updated 3 ಜನವರಿ 2026, 15:55 IST
<div class="paragraphs"><p>ಅಂಕನಹಳ್ಳಿ ಪಾರ್ಥ</p></div>

ಅಂಕನಹಳ್ಳಿ ಪಾರ್ಥ

   

ರಾಮನಗರ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಶಿಕ್ಷಣ ತಜ್ಞ ಹಾಗೂ ವಿಚಾರವಾದಿ ಡಾ. ಎಚ್. ನರಸಿಂಹಯ್ಯ ಅವರ ಹೆಸರಿನಲ್ಲಿ ನೀಡುವ 2025ನೇ ಸಾಲಿನ ರಾಜ್ಯಮಟ್ಟದ ‘ಡಾ. ಎಚ್.ಎನ್. ಪ್ರಶಸ್ತಿ’ಗೆ ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ. ಅಂಕನಹಳ್ಳಿ ಪಾರ್ಥ ಅವರು ಭಾಜನರಾಗಿದ್ದಾರೆ.

ಕಲ್ಯಾಣ ಕರ್ನಾಟಕದ ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಪರಿಷತ್ ಹಮ್ಮಿಕೊಂಡಿದ್ದ ಮೂರು ದಿನಗಳ ವೈಜ್ಞಾನಿಕ ಸಮ್ಮೇಳನದಲ್ಲಿ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಸೇರಿದಂತೆ ವಿವಿಧ ಗಣ್ಯರು ಪಾರ್ಥ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ADVERTISEMENT

ತಾಲ್ಲೂಕಿನ ಕೈಲಾಂಚ ಹೋಬಳಿಯ ಅಂಕನಹಳ್ಳಿಯವರಾದ ಪಾರ್ಥ ಅವರು ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಸಾಹಿತಿ, ಸಂಶೋಧಕ ಹಾಗೂ ಪ್ರಕಾಶಕರೂ ಆಗಿರುವ ಅವರು 10 ಪುಸ್ತಕಗಳನ್ನು ಬರೆದಿದ್ದು, 3 ಕೃತಿಗಳನ್ನು ಸಂಪಾದಿಸಿದ್ದಾರೆ.

ಕಥಾ ಸಂಕಲನಗಳಾದ ‘ಹೆಣದ ಮುಂದೆ’, ‘ಹೊನ್ನೇದುಂಬಿ’, ‘ಗಾಜಿನ ಕೊಳ’ ಮಕ್ಕಳ ಕಥಾ ಸಂಕಲನ, ‘ಗಂಡು ಭೈರವ–ಹೆಣ್ಣು ಭೈರವ’, ‘ರಾಮನಗರ ಒಂದು ಸಾಂಸ್ಕೃತಿಕ ಅಧ್ಯಯನ’, ‘ರಾಮನಗರ ಜಿಲ್ಲೆಯ ಜಾತ್ರೆಗಳು’, ‘ರಾಮನಗರ ಜಿಲ್ಲೆಯ ಜನಪದ ಆಟಗಳು’, ‘ರಾಮನಗರ ಜಿಲ್ಲೆಯ ಸಂಸ್ಕೃತಿ’, ವಿಮರ್ಶಾ ಸಂಕಲನ ‘ಬಿರಿವ ನೆಲದಲ್ಲಿ ಪುಟಿವ ಮೊಳಕೆ’ ಹಾಗೂ ‘ಒಡಲೊಳಗಣ ಕಿಚ್ಚು’ ಕವನ ಸಂಕಲನ ಹೊರತಂದಿದ್ದಾರೆ.

‘ನಲ್ಲಿಗುಡ್ಡದ ಕೆರೆ ತಪ್ಪಲಲಿ’, ‘ಕಾಳಂಜಿ ಕಣಗಳು’ ಹಾಗೂ ‘ಸಾಹಿತ್ಯ ಕಲವರ’ ಪಾರ್ಥ ಅವರ ಸಂಪಾದಿತ ಕೃತಿಗಳು. ತಮ್ಮ ಅಂಕನಹಳ್ಳಿ ಪ್ರಕಾಶನದಿಂದ ಕಥೆ, ಕವನ, ಕಾದಂಬರಿ, ಸಂಶೋಧನಾ ಪ್ರಬಂಧ, ನಾಟಕ ಸೇರಿದಂತೆ 100ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ರಾಮನಗರ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಪಾರ್ಥ ಅವರು, ಜಾನಪದ ವಿಶ್ವವಿದ್ಯಾಲಯದ ಗ್ರಾಮ ಚರಿತ್ರೆ ಕೋಶದ ಜಿಲ್ಲಾ ಸದಸ್ಯನಾಗಿ ಕೆಲಸ ಮಾಡಿದ್ದಾರೆ.

ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟಕರು ಆಗಿರುವ ಪಾರ್ಥ ಅವರು, ಹಲವು ಸಾಹಿತ್ಯಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಅವರ ಸೇವೆಯನ್ನು ಗುರುತಿಸಿ ರಾಜ್ಯದ ವಿವಿಧ ಸಂಘ–ಸಂಸ್ಥೆ ಹಾಗೂ ಟ್ರಸ್ಟ್‌ಗಳಿಂದ 12ಕ್ಕೂ ಹೆಚ್ಚು ಪ್ರಶಸ್ತಿ–ಪುರಸ್ಕಾರಗಳ ಗೌರವ ಸಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.