ಮಾಗಡಿ: ಪಟ್ಟಣದ ಹೊಸಪೇಟೆ ವೃತ್ತಕ್ಕೆ ಗ್ಯಾರಂಟಿ ಅನುಷ್ಠಾನದ ರಾಜ್ಯ ಅಧ್ಯಕ್ಷ ಎಚ್.ಎಂ ರೇವಣ್ಣ ಹೆಸರು ನಾಮಕರಣ ಮಾಡುವ ಬಗ್ಗೆ ಸಭೆಯಲ್ಲಿ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸರ್ಕಾರದ ನಿಯಮ ಹಾಗೂ ಗ್ರಾಮಸ್ಥರ ತೀರ್ಮಾನದಂತೆ ಆಗಲಿ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಸಲಹೆ ನೀಡಿದರು.
ಪಟ್ಟಣದ ಪುರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪಟ್ಟಣದ ಪ್ರಮುಖ ರಸ್ತೆ ಮತ್ತು ವೃತ್ತಗಳಿಗೆ ಮಹನೀಯರ ಹೆಸರು ನಾಮಕರಣ ಮಾಡುವ ಬಗ್ಗೆ ಚರ್ಚೆ ನಡೆಯಿತು. ಎಚ್.ಎಂ.ರೇವಣ್ಣ ಅವರ ಹೆಸರು ಹೊಸಪೇಟೆ ವೃತ್ತಕ್ಕೆ ನಾಮಕರಣ ಮಾಡಬೇಕೆಂಬ ವಿಷಯದಲ್ಲಿ ಕೆಲ ಸದಸ್ಯರು ಬದುಕಿರುವ ನಾಯಕರ ಹೆಸರು ಯಾವುದೇ ವೃತ್ತ, ರಸ್ತೆಗಳಿಗೆ ನಾಮಕರಣ ಮಾಡಬಾರದೆಂಬ ನಿಯಮವಿದೆ ಎಂದು ಸಭೆಗೆ ತಿಳಿಸಿದರು.
ಹಾಲಿ ಶಾಸಕರ ಹೆಸರು ತಿರುಮಲೆ ರಸ್ತೆಯಲ್ಲಿರುವ ಉದ್ಯಾನಕ್ಕೆ ನಾಮಕರಣ ಮಾಡಲಾಗಿದೆ ಎಂದು ಕೆಲ ಸದಸ್ಯರು ತಿಳಿಸಿದಾಗ, ಇದಕ್ಕೆ ಬಾಲಕೃಷ್ಣ ಪ್ರತಿಕ್ರಿಯಿಸಿ, ‘ನನ್ನ ಹೆಸರು ಬೇಡ ಎಂದು ಹೇಳಿದ್ದೆ. ಇಂದಿಗೂ ಹೆಸರು ಮುಂದುವರಿಸುವುದು ಬೇಡ. ಉದ್ಯಾನಕ್ಕೆ ಬೇರೆ ಹೆಸರು ಸೂಚಿಸಿ’ ಎಂದು ಅಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಸಲಹೆ ನೀಡಿದರು.
ಸರ್ಕಾರದ ನಿಯಮ ಜತೆಗೆ ಹೊಸಪೇಟೆ ವೃತ್ತಕ್ಕೆ ಬನ್ನಿರಾಯಸ್ವಾಮಿ ಹೆಸರಿಡುವಂತೆ ಮನವಿ ಬಂದಿರುವ ಹಿನ್ನೆಲೆಯಲ್ಲಿ ಹೊಸಪೇಟೆ ಗ್ರಾಮಸ್ಥರು ಯಾವ ಹೆಸರು ಇಡಬೇಕೆಂಬುದನ್ನು ತೀರ್ಮಾನಿಸಿದ ನಂತರ ಈ ಬಗ್ಗೆ ಅಂತಿಮಗೊಳಿಸೋಣ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಅಭಿವೃದ್ಧಿ ಹೆಸರಿನಲ್ಲಿ ಎನ್ಇಎಸ್ ವೃತ್ತದಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಳಾಂತರಕ್ಕೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಸದಸ್ಯ ಎಂ.ಎನ್.ಮಂಜುನಾಥ್ ಆಕ್ಷೇಪಿಸಿದರು.
ಪುರಸಭೆ ಪಕ್ಕದಲ್ಲಿರುವ ಶಿಕ್ಷಣಾಧಿಕಾರಿ ಕಚೇರಿಯನ್ನು ಕೂಡ ಎನ್.ಇ.ಎಸ್ ವೃತ್ತಕ್ಕೆ ಸ್ಥಳಾಂತರಿಸಲಾಗುತ್ತಿದೆ. ಆ ಜಾಗದಲ್ಲಿ ಅತ್ಯುತ್ತಮವಾದ ಮಾಲ್ ನಿರ್ಮಿಸಿ ಪುರಸಭೆಗೆ ಹೆಚ್ಚು ಆದಾಯ ತರುವ ಉದ್ದೇಶ ಹೊಂದಲಾಗಿದೆ. ಐಡಿಎಸ್ಎಂಸಿ ಬಡಾವಣೆ ಕೆಲ ನಿವೇಶನ ಮತ್ತು ಜ್ಯೋತಿನಗರದ ಕೆಲ ನಿವೇಶನಗಳನ್ನು ಸರ್ಕಾರ ರದ್ದು ಮಾಡಿದ್ದು ಅವುಗಳನ್ನು ಹರಾಜಿನಲ್ಲಿಟ್ಟು ಬರುವ ಹಣದಲ್ಲಿ ಪುರಸಭೆ ಆದಾಯ ಹೆಚ್ಚಾಗಲಿದೆ ಎಂದು ಸದಸ್ಯರ ಗಮನಕ್ಕೆ ಶಾಸಕರು ತಂದರು.
ಸದಸ್ಯರಾದ ಅಶ್ವಥ್, ಎಚ್.ಜೆ.ಪುರುಷೋತ್ತಮ್ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ರಮ್ಯ ನರಸಿಂಹಮೂರ್ತಿ, ಉಪಾಧ್ಯಕ್ಷ ರಿಯಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ಎಂ.ಎನ್.ಮಂಜುನಾಥ್, ಕೆ.ವಿ.ಬಾಲು, ರಂಗಹಮಯ್ಯ, ಜಯರಾಮ್ ವಿಜಯ ರೂಪೇಶ್, ಭಾಗ್ಯಮ್ಮ, ರಹಮತ್, ಕಾಂತರಾಜು ಮಮತಾ, ಅನಿಲ್ ಕುಮಾರ್, ಉಷಾರಾಣಿ, ರಾಮು, ಫಿರ್ದೋಸ್ ಅಂಜುಂ, ರೇಖಾ ನವೀನ್, ಶಿವರುದ್ರಮ್ಮ, ಶಬ್ಬೀರ್ ಪಾಷಾ, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಹಾಗೂ ಅಧಿಕಾರಿಗಳು ನಾಮನಿರ್ದೇಶಿತ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.