ADVERTISEMENT

ರಾಮನಗರ: ರಿವ್ಯೂ ಹೆಸರಲ್ಲಿ ₹8.15 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 2:17 IST
Last Updated 20 ಆಗಸ್ಟ್ 2025, 2:17 IST
<div class="paragraphs"><p>&nbsp;ವಂಚನೆ–ಪ್ರಾತಿನಿಧಿಕ ಚಿತ್ರ</p></div>

 ವಂಚನೆ–ಪ್ರಾತಿನಿಧಿಕ ಚಿತ್ರ

   

ರಾಮನಗರ: ಮನೆಯಲ್ಲೇ ಕುಳಿತು ಹೋಟೆಲ್ ರಿವ್ಯೂ (ಅಭಿಪ್ರಾಯ) ಮಾಡುವ ಮೂಲಕ ಕೈತುಂಬಾ ಹಣ ಗಳಿಸಬಹುದು ಎಂದು ಚನ್ನಪಟ್ಟಣ ತಾಲ್ಲೂಕಿನ ಗೃಹಿಣಿಯೊಬ್ಬರಿಗೆ ಆಸೆ ತೋರಿಸಿದ ಆನ್‌ಲೈನ್‌ ವಂಚಕರು, ಹೆಚ್ಚಿನ ಲಾಭದಾಸೆ ತೋರಿಸಿ ಬರೋಬ್ಬರಿ ₹8.15 ಲಕ್ಷ ವಂಚಿಸಿದ್ದಾರೆ. ಈ ಕುರಿತು ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಜಾಲತಾಣ ಟೆಲಿಗ್ರಾಂ ಮೂಲಕ ಗೃಹಿಣಿಗೆ ವರ್ಕ್ ಫ್ರಂ ಹೋಂ ಕೆಲಸದ ಆಫರ್‌ ಹೆಸರಿನಲ್ಲಿ ವಂಚಕರು ಸಂದೇಶ ಕಳಿಸಿದ್ದಾರೆ. ಅದನ್ನು ಗಮನಿಸಿದ ಗೃಹಿಣಿ ಕೆಲಸ ಮಾಡಲು ಆಸಕ್ತಿ ಇರುವುದಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರತಿಯಾಗಿ ವಂಚಕರು, ಕೆಲ ಹೋಟೆಲ್‌ಗಳ ಕುರಿತು ರಿವ್ಯೂ ನೀಡಿದರೆ ನಿಮಗೆ ಹಣ ಪಾವತಿಸುವುದಾಗಿ ಹೇಳಿದ್ದಾರೆ.

ADVERTISEMENT

ಅದರಂತೆ ಕೆಲ ಹೋಟೆಲ್‌ಗಳ ಕುರಿತು ಗೃಹಿಣಿ ನೀಡಿದ ಪ್ರತಿ ರಿವ್ಯೂಗೆ ₹200 ಪಾವತಿಸಿದ್ದಾರೆ. ಅಲ್ಲದೆ, ನೀವು ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸುತ್ತೀರಿ ಎಂದು ಆಮಿಷ ತೋರಿಸಿದ್ದಾರೆ. ಅದರಂತೆ ಮಹಿಳೆಯಿಂದ ಆನ್‌ಲೈನ್ ಮೂಲಕ ₹800 ಹೂಡಿಕೆ ಮಾಡಿಸಿಕೊಂಡು ಪ್ರತಿಯಾಗಿ ₹1,040 ಮರು ಪಾವತಿಸಿದ್ದಾರೆ. ಇದೇ ರೀತಿ ಹೆಚ್ಚೆಚ್ಚು ಹೂಡಿಕೆ ಮಾಡಿದಂತೆಲ್ಲಾ ಹೆಚ್ಚು ಲಾಭ ಗಳಿಸುತ್ತೀರಿ ಎಂದು ವಂಚಕರು ಆಸೆ ತೋರಿಸಿದ್ದಾರೆ.

ಅವರ ಮಾತನ್ನು ನಂಬಿದ ಗೃಹಣಿ, ವಂಚಕರು ಹೇಳಿದ ವಿವಿಧ ಯಪಿಐಡಿ ಮತ್ತು ಬ್ಯಾಂಕ್ ಖಾತೆಗಳಿಗೆ ಕನಿಷ್ಠ ₹1 ಸಾವಿರದಿಂದ ಆರಂಭಿಸಿ ಹಂತ ಹಂತವಾಗಿ ಹೂಡಿಕೆ ಹೆಸರಿನಲ್ಲಿ ಒಟ್ಟು ₹8,15,502 ಹಣ ವರ್ಗಾವಣೆ ಮಾಡಿದ್ದಾರೆ. ಲಾಭಾಂಶ ಕೇಳಿದಾಗ, ವಂಚಕರು ಹೆಚ್ಚಿನ ಲಾಭಕ್ಕಾಗಿ ಮತ್ತಷ್ಟು ಹೂಡಿಕೆ ಮಾಡುವಂತೆ ಉತ್ತೇಜಿಸುತ್ತಿದ್ದರು. ಕಡೆಗೆ ಮಹಿಳೆಗೆ ಅನುಮಾನ ಬಂದು ಹಣ ವರ್ಗಾವಣೆ ಮಾಡುವುದನ್ನು ನಿಲ್ಲಿಸಿದರು.

ಕಡೆಗೆ ಮಹಿಳೆಯ ಸಂಪರ್ಕಕ್ಕೆ ಸಿಗದಾದರು. ಆಗ ಮಹಿಳೆಗೆ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಯಿತು. ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.