ADVERTISEMENT

ಚನ್ನಪಟ್ಟಣಕ್ಕೆ 3 ಸಾವಿರ ಮನೆ ಮಂಜೂರು ಚುನಾವಣಾ ಗಿಮಿಕ್: ಎಚ್‌ಡಿಕೆ

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 5:52 IST
Last Updated 18 ನವೆಂಬರ್ 2022, 5:52 IST
ಚನ್ನಪಟ್ಟಣ ನಗರದ ಸೈಯದ್ ವಾಡಿಗೆ ಆಗಮಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಇಲ್ಲಿನ ಅಖಿಲ್ ಶಾ ಖಾದ್ರಿ ಬೋಗ್ದಾದಿ ಸಮಾಧಿಗೆ ಪೂಜೆ ಸಲ್ಲಿಸಿದರು
ಚನ್ನಪಟ್ಟಣ ನಗರದ ಸೈಯದ್ ವಾಡಿಗೆ ಆಗಮಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಇಲ್ಲಿನ ಅಖಿಲ್ ಶಾ ಖಾದ್ರಿ ಬೋಗ್ದಾದಿ ಸಮಾಧಿಗೆ ಪೂಜೆ ಸಲ್ಲಿಸಿದರು   

ಚನ್ನಪಟ್ಟಣ: ‘ವಸತಿ ಸಚಿವ ಸೋಮಣ್ಣ ಅವರು ಚನ್ನಪಟ್ಟಣಕ್ಕೆ ಮೂರು ಸಾವಿರ ಮನೆಗಳನ್ನು ಮಂಜೂರು ಮಾಡಿರುವುದು ಕೇವಲ ಬಿಜೆಪಿಯ ಚುನಾವಣಾ ಗಿಮಿಕ್’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.

ನಗರದ ಸೈಯದ್ ವಾಡಿಯಲ್ಲಿ ನಡೆಯುತ್ತಿರುವ ಅಖಿಲ್ ಶಾ ಖಾದ್ರಿ ಬೋಗ್ದಾದಿ ಗಂಧ ಮಹೋತ್ಸವದ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿಗೆ ಆಗಮಿಸಿ ಅಖಿಲ್ ಶಾ ಖಾದ್ರಿ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಚನ್ನಪಟ್ಟಣಕ್ಕೆ ಮೂರು ಸಾವಿರ ಮನೆಗಳನ್ನು ಮಂಜೂರು ಮಾಡುವಂತೆ ಸಚಿವ ಸೋಮಣ್ಣ ಅವರಿಗೆ ನಾನು ಪತ್ರ ಬರೆದಿದ್ದು ನಿಜ. ಅದಕ್ಕೆ ಅವರು ಯಾವ ರೀತಿ ಸ್ಪಂದಿಸಿದರು ಅನ್ನೊದು ಗೊತ್ತು. ಇದೇ ಕಾರಣಕ್ಕೆ ಅವರನ್ನು ಸುಳ್ಳಿನ ಸೋಮಣ್ಣ ಎಂದು ಕರೆಯುವುದು’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಈ ಮೂರು ಸಾವಿರ ಮನೆಗಳ ನಿರ್ಮಾಣಕ್ಕೆ ₹50 ರಿಂದ ₹60 ಕೋಟಿ ಹಣದ ಅಗತ್ಯವಿದೆ. ಬರೀ ಚುನಾವಣೆಗಾಗಿ ಘೋಷಣೆ ಮಾಡಿದ್ದಾರೋ ಅಥವಾ ಹಣ ಬಿಡುಗಡೆ ಮಾಡುತ್ತಾರೆಯೇ ಎಂದುನೋಡೋಣ. ಮುಂದಿನ ಆರು ತಿಂಗಳ ಕಾಲ ಈ ರೀತಿಯ ಪತ್ರದ ಮೂಲಕ ಯೋಜನೆ ಬರುತ್ತವೆ. ಆದರೆ ಎಷ್ಟು ಕಾರ್ಯಗತವಾಗುತ್ತವೆ ಎನ್ನುವುದನ್ನು ನೋಡಬೇಕಿದೆ’ ಎಂದು ಇತ್ತೀಚೆಗೆ ಚನ್ನಪಟ್ಟಣಕ್ಕೆ ಮೂರು ಸಾವಿರ ಮನೆ ಮಂಜೂರು ಮಾಡಿರುವುದಾಗಿ ತಮಗೆ ಸಚಿವ ಸೋಮಣ್ಣ ಬರೆದ ಪತ್ರದ ಬಗ್ಗೆ ಲೇವಡಿ ಮಾಡಿದರು.

ಮುಂದಿನ ಬಾರಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ಎಷ್ಟೇ ಕುತಂತ್ರ ಮಾಡಿದರೂ ಅಧಿಕಾರಕ್ಕೆ ಬರುವುದಿಲ್ಲ. ಜನರ ನಾಡಿಮಿಡಿತ ಅರ್ಥ ಮಾಡಿಕೊಂಡಿದ್ದೇನೆ. 123 ಕ್ಷೇತ್ರಗಳಲ್ಲಿ ಗೆಲುವಿನ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಸರ್ಕಾರ ಯಾರು ರಚನೆ ಮಾಡುತ್ತಾರೆ ಎನ್ನುವುದು ವಿಧಿ ಲಿಖಿತ. ಜೆಡಿಎಸ್ ಪಕ್ಷ ಖಂಡಿತವಾಗಿ ಅಧಿಕಾರಕ್ಕೆ ಬರುತ್ತದೆ ಎಂದು ನನಗೆ ತಿಳಿದಿದೆ ಎಂದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ನಗರಸಭೆ ಅಧ್ಯಕ್ಷ ಪ್ರಶಾಂತ್, ಸದಸ್ಯರಾದ ಸತೀಶ್ ಬಾಬು, ಲಿಯಾಕತ್, ಗೋವಿಂದಹಳ್ಳಿ ನಾಗರಾಜು, ಕರಿಯಪ್ಪ, ಅತಿಕ್ ಮುನಾವರ್, ಅಮಿತ್ ಮುನಾವರ್, ಎಂಜಿಕೆ ಪ್ರಕಾಶ್, ಇತರರು ಇದ್ದರು.

ಎಲ್ಲ ಅಕ್ರಮ ಬಯಲಿಗೆಳೆಯುತ್ತೇನೆ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ರಚನೆ ಮಾಡಲಿದೆ. ಆಗ ಎಲ್ಲ ಅಕ್ರಮಗಳನ್ನು ಬಯಲಿಗೆಳೆದು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಬಿಎಂಎಸ್ ಶಿಕ್ಷಣ ಸಂಸ್ಥೆ ಹಗರಣ ವಿಚಾರದಲ್ಲಿ ಮುಖ್ಯಮಂತ್ರಿಗಳು ಪಲಾಯನವಾದ ಮಾಡಿದ್ದಾರೆ. ಆದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳು ಎಲ್ಲೂ ಹೋಗುವುದಿಲ್ಲ. ಎಂಥದ್ದೇ ದುಷ್ಟ ಶಕ್ತಿಗಳು ಇರಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಯಾವುದೇ ರಾಜಿ ಇಲ್ಲ ಇದಕ್ಕೆಲ್ಲಾ ಉತ್ತರ ಕೊಡುತ್ತೇನೆ ಎಂದು ಹೇಳಿದರು.

ಇಬ್ರಾಹಿಂ ಸ್ಪರ್ಧೆ ಇಲ್ಲ

‘ಸಿದ್ದರಾಮಯ್ಯ ನನ್ನಿಂದಲೇ ಗೆದ್ದರು ಎಂದು ನಾನು ಹೇಳಿಲ್ಲ. ಎರಡು ಬಾರಿ ನನ್ನಿಂದ ತಪ್ಪಾಗಿತ್ತು. ಈ ಬಾರಿ ಚುನಾವಣೆಗೆ ನಿಲ್ಲಲು ಅವರು ಗೊಂದಲ ಮಾಡಿಕೊಳ್ಳಬಾರದು. ಒಂದು ಕ್ಷೇತ್ರವನ್ನು ಘೋಷಿಸಲಿ ಎಂದಷ್ಟೇ ಹೇಳಿದ್ದೆ. ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ ನಮ್ಮ ಅಭ್ಯರ್ಥಿಯನ್ನು ಘೋಷಿಸಿದ್ದೇವೆ. ಅಲ್ಲಿ ಸಿ.ಎಂ. ಇಬ್ರಾಹಿಂ ಸ್ಪರ್ಧಿಸುವುದಿಲ್ಲ. ಬೇರೆ ಪಕ್ಷಗಳಿಂದ ಯಾರೇ ನಿಂತರೂ ಶ್ರೀನಾಥ್‌ ಅವರೇ ನಮ್ಮ ಅಭ್ಯರ್ಥಿ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.