
ವತ್ಸಲ, ನವೀನ್ ಕುಮಾರ್
ರಾಮನಗರ: ಕೌಟುಂಬಿಕ ಕಲಹದಿಂದಾಗಿ ವ್ಯಕ್ತಿಯೊಬ್ಬರು ತನ್ನ ಪತ್ನಿಯನ್ನು ಕೊಲೆ ಮಾಡಿ, ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಹಾಲಗಹಳ್ಳಿ ಗ್ರಾಮದಲ್ಲಿ ನಡೆದಿದೆ. ಪತ್ನಿ ವತ್ಸಲಾ (30) ಅವರ ಮೇಲೆ ಹಲ್ಲೆ ನಡೆಸಿ, ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿರುವ ನವೀನ್ ಕುಮಾರ್ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಮೈಲನಾಯ್ಕನಹಳ್ಳಿಯ ವತ್ಸಲ ಅವರನ್ನು 8 ವರ್ಷದ ಹಿಂದೆ ಮದುವೆಯಾಗಿದ್ದ ನವೀನ್ ಅವರಿಗೆ, 7 ವರ್ಷದ ಪುತ್ರಿ ಇದ್ದು ರಾಮನಗರದ ಪ್ರತಿಷ್ಠಿತ ಶಾಲೆಯೊಂದರಲ್ಲಿ ಓದುತ್ತಿದ್ದಾಳೆ. ಏಕೈಕ ಪುತ್ರನಾಗಿದ್ದ ನವೀನ್ ಅವರ ತಂದೆ ತೀರಿಕೊಂಡಿದ್ದು, ವಯಸ್ಸಾದ ತಾಯಿ ಇದ್ದಾರೆ. ಇದೀಗ ಪುತ್ರಿ ಮತ್ತು ತಾಯಿಗೆ ಯಾರೂ ದಿಕ್ಕಿಲ್ಲದಂತಾಗಿದೆ.
ಹೋಟೆಲ್ ನಡೆಸುತ್ತಿದ್ದರು: ಬಿಡದಿಯಲ್ಲಿ ಮಾಂಸಾಹಾರದ ಹೋಟೆಲ್ ಇಟ್ಟುಕೊಂಡಿದ್ದ ನವೀನ್, ಕುಟುಂಬದೊಂದಿಗೆ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅನ್ಯೋನ್ಯವಾಗಿದ್ದ ದಂಪತಿ ನಡುವೆ ಸಂಸಾರದ ವಿಷಯದಲ್ಲಿ ಮನಸ್ತಾಪ ಉಂಟಾಗಿತ್ತು ಎಂದು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.
ಹೊಟೇಲ್ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ನವೀನ್, ಕುಟುಂಬ ನಿರ್ವಹಣೆ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪತ್ನಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಬದಲಾದ ಪತಿಯ ಸ್ವಭಾವದಿಂದ ಬೇಸತ್ತಿದ್ದ ವತ್ಸಲ ಅವರು ಬಿಡದಿಯಲ್ಲಿರುವ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.
ಅದಕ್ಕೆ ನವೀನ್, ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಕಂಪನಿ ಬಳಿಯೂ ಹೋಗಿ ಜಗಳವಾಡಿದ್ದರು. ಜಗಳ ವಿಕೋಪಕ್ಕೆ ಹೋದಾಗಲೆಲ್ಲಾ ವತ್ಸಲ ಅವರು, ತವರು ಮನೆಗೆ ಬಂದು ಕೆಲ ದಿನ ಇದ್ದು ಹೋಗುತ್ತಿದ್ದರು. ದಿನದಿಂದ ದಿನಕ್ಕೆ ದಂಪತಿ ನಡುವೆ ಕಲಹ ಹೆಚ್ಚುತ್ತಲೇ ಇತ್ತು ಎಂದು ಪೊಲೀಸರು ತಿಳಿಸಿದರು.
ಠಾಣೆ ಮೆಟ್ಟಿಲೇರಿದ್ದ ಪತ್ನಿ: ಪತಿ ವರ್ತನೆಗೆ ಬೇಸತ್ತ ವತ್ಸಲ ಅವರು, ಕೆಲ ದಿನಗಳ ಹಿಂದೆ ರಾಮನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಪೊಲೀಸರು ಪತಿ–ಪತ್ನಿ ಜೊತೆಗೆ ಎರಡೂ ಕಡೆಯ ಕುಟುಂಬದವರನ್ನು ಕರೆಯಿಸಿ ಅನ್ಯೋನ್ಯವಾಗಿ ಬದುಕುವಂತೆ ಬುದ್ಧಿ ಹೇಳಿ, ಎನ್‌ಸಿಆರ್ ಮಾಡಿಕೊಂಡಿದ್ದರು. ಪತ್ನಿಗೆ ಕಿರುಕುಳ ನೀಡದಂತೆ ನವೀನ್ ಅವರಿಂದ ಮುಚ್ಚಳಿಕೆ ಬರೆಯಿಸಿಕೊಂಡು ಕಳಿಸಿದ್ದರು.
ಕೌಟುಂಬಿಕ ಕಲಹವು ಪೊಲೀಸ್ ಠಾಣೆ ಮೆಟ್ಟಿಲೇರಿದರೂ ದಂಪತಿ ನಡುವೆ ಹೊಂದಾಣಿಕೆ ಇರಲಿಲ್ಲ. ವತ್ಸಲ ಅವರು ಪುತ್ರಿ ಸಮೇತ ತವರು ಮನೆಗೆ ಹೋಗಿದ್ದರು. ಇದರ ನಡುವೆಯೇ ವತ್ಸಲ ಅವರು ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು ಎನ್ನಲಾಗಿದೆ.
ಬೆಳಿಗ್ಗೆ ಪತ್ನಿಗೆ ಕರೆ ಮಾಡಿದ್ದ ನವೀನ್, ಬಿಡದಿಗೆ ಅವರನ್ನು ಕರೆಯಿಸಿಕೊಂಡು ಹಾಲಗಹಳ್ಳಿ ಮನೆಗೆ ಮಧ್ಯಾಹ್ನ 3.30ರ ಸುಮಾರಿಗೆ ಕರೆದುಕೊಂಡು ಬಂದಿದ್ದರು. ನಂತರ ಪತ್ನಿಯನ್ನು ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ವಿಷಯ ತಿಳಿದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಬಳಿಕ, ಶವಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಆತ್ಮಹತ್ಯೆಗೆ ಮುಂಚೆ ಸಂಬಂಧಿಗೆ ಕರೆ ಮನೆಯಲ್ಲಿ ಇಬ್ಬರ ನಡುವೆ ಜಗಳ ನಡೆದಾಗ ನವೀನ್ ಅವರು ವತ್ಸಲ ಅವರ ಮೇಲೆ ಹಲ್ಲೆ ನಡೆಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. ಆತ್ಮಹತ್ಯೆಗೆ ಮುಂಚೆ ತನ್ನ ಸಂಬಂಧಿಕರೊಬ್ಬರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದ ನವೀನ್ ‘ನಂದೆಲ್ಲಾ ಮುಗೀತು. ಮರ್ಯಾದೆ ಹೋಯಿತು’ ಎಂದು ದುಃಖದಿಂದ ಮಾತನಾಡಿದ್ದಾರೆ. ನವೀನ್ ಮಾತಿನ ಧಾಟಿಯಿಂದ ಆತಂಕಗೊಂಡ ಸಂಬಂಧಿಕರು ಗ್ರಾಮದ ಪಕ್ಕದ ಮನೆಯವರಿಗೆ ಕರೆ ಮಾಡಿ ನವೀನ್ ಅವರ ಆಡಿದ ಮಾತುಗಳನ್ನು ತಿಳಿಸಿ ಒಮ್ಮೆ ಮನೆಗೆ ಹೋಗಿ ಬನ್ನಿ ಎಂದಿದ್ದಾರೆ. ಅದರಂತೆ ಪಕ್ಕದ ಮನೆಯವರು ಮನೆಗೆ ಬಂದು ನೋಡಿದಾಗ ವತ್ಸಲ ಅವರು ನೆಲದಲ್ಲಿ ಶವವಾಗಿ ಬಿದ್ದಿದ್ದರು. ನವೀನ್ ಪಕ್ಕದಲ್ಲೇ ನೇಣು ಹಾಕಿಕೊಂಡಿದ್ದರು. ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಸ್ಥಳದಲ್ಲಿ ನವೀನ್ ಅವರು ಬರೆದಿಟ್ಟಿದ್ದ ಮರಣಪತ್ರ ಸಿಕ್ಕಿದೆ. ‘ಮಗಳನ್ನು ಚನ್ನಾಗಿ ನೋಡಿಕೊಳ್ಳಿ’ ಎಂದು ಡೆತ್‌ನೋಟ್‌ನಲ್ಲಿ ಬರೆದಿರುವ ನವೀನ್ ಅವರು ಪತ್ನಿ ಕುರಿತು ಕೆಲ ಆರೋಪಗಳನ್ನು ಸಹ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.