ರಾಮನಗರ: ‘ಸಂಕಷ್ಟದಲ್ಲಿರುವ ಜಿಲ್ಲೆಯ ಅನಾಥ, ಏಕ ಪೋಷಕ, ಅನಾರೋಗ್ಯ ಪೀಡಿತ ಹಾಗೂ ಜೈಲಿನಲ್ಲಿರುವವರ ಮಕ್ಕಳನ್ನು ಗುರುತಿಸಿ ಅವರಿಗೆ ನೆರವು ನೀಡಬೇಕು. ಈ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಸಂಘ–ಸಂಸ್ಥೆಗಳು ಸಮನ್ವಯದಿಂದ ಕಾರ್ಯಪ್ರವೃತ್ತವಾಗಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ವಿಶೇಷ ಪಾಲನಾ ಯೋಜನೆಯಡಿ ರಾಮನಗರ ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 1ರಿಂದ 4ನೇ ಕಂತಿನ ಅನುದಾನ ಈಗಾಗಲೇ ಬಿಡುಗಡೆಯಾಗಿದೆ. ಫಲಾನುಭವಿಗಳಿಗೆ ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಮಾಡಲಾಗಿದೆ’ ಎಂದರು.
‘ಪ್ರಾಯೋಜಿತ ಕಾರ್ಯಕ್ರಮದಡಿ 2023-24ನೇ ಸಾಲಿನ 1ರಿಂದ 4ನೇ ಕಂತಿನ ಒಟ್ಟು 154 ಫಲಾನುಭವಿಗಳಿಗೆ ಅನುದಾನ ಬೇಡಿಕೆಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. 2024-25ನೇ ಸಾಲಿನ ಏಪ್ರಿಲ್ ತಿಂಗಳಲ್ಲಿ ಹೊಸದಾಗಿ 25 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಸದ್ಯ ಪರಿಶೀಲನಾ ಹಂತದಲ್ಲಿವೆ’ ಎಂದು ತಿಳಿಸಿದರು.
‘ವಲಸೆ ಬಂದ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಮತ್ತು ಬಾಲನ್ಯಾಯ ಕಾಯ್ದೆ-2015, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿಯ ಕಾರ್ಯವೈಖರಿ, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಪೋಕ್ಸೊ ಕಾಯ್ದೆ, ದತ್ತು ಪ್ರಕ್ರಿಯೆ ಹಾಗೂ ಮಾಸಾಚರಣೆ, ಮಕ್ಕಳ ಸಹಾಯವಾಣಿ ಕುರಿತು ತರಬೇತಿ ನೀಡಲಾಗಿದೆ’ ಎಂದು ಹೇಳಿದರು.
‘ದತ್ತು ಕಾರ್ಯಕ್ರಮದಡಿ 6 ಮಕ್ಕಳಿಗೆ ಜಿಲ್ಲಾಧಿಕಾರಿಯಿಂದ ದತ್ತು ಆದೇಶ ಪಡೆಯಲಾಗಿದೆ. ಈ ವರ್ಷದ ಜನವರಿಯಿಂದ ಏಪ್ರಿಲ್‌ವರೆಗೆ 46 ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ಬಾಲನ್ಯಾಯ ನಿಧಿ ಬಳಕೆಯಲ್ಲಿ 15 ಫಲಾನುಭವಿಗಳಿಗೆ ಬಾಲನ್ಯಾಯ ನಿಧಿಯ ಅನುದಾನವನ್ನು ನೀಡುವುದು ಪ್ರಗತಿಯಲ್ಲಿದೆ’ ಎಂದು ತಿಳಿಸಿದರು.
ಸಭೆಯಲ್ಲಿ ಡಿವೈಎಸ್‌ಪಿ ದಿನಕರ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಸವರಾಜು, ಮಕ್ಕಳ ರಕ್ಷಣಾಧಿಕಾರಿ ರಜನಿ, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.