ADVERTISEMENT

ಗಣಿ ಶೋಧಕ್ಕೆ ಮುಂದಾದ ರಾಮನಗರ ಜಿಲ್ಲಾಡಳಿತ

ಅವಘಡದಿಂದ ಕಲ್ಲು ಗಣಿಗಾರಿಕೆ ಮೇಲೆ ಕರಿನೆರಳು l ಸುರಕ್ಷತೆ ಪರಿಶೀಲನೆಗೆ ತಂಡ ರಚನೆ

ಆರ್.ಜಿತೇಂದ್ರ
Published 25 ಫೆಬ್ರುವರಿ 2021, 4:11 IST
Last Updated 25 ಫೆಬ್ರುವರಿ 2021, 4:11 IST
ಮಾಗಡಿ ತಾಲ್ಲೂಕಿನ ಕಲ್ಲು ಗಣಿಯೊಂದರಲ್ಲಿ ನಡೆದಿರುವ ಗಣಿಗಾರಿಕೆ
ಮಾಗಡಿ ತಾಲ್ಲೂಕಿನ ಕಲ್ಲು ಗಣಿಯೊಂದರಲ್ಲಿ ನಡೆದಿರುವ ಗಣಿಗಾರಿಕೆ   

ರಾಮನಗರ: ಶಿವಮೊಗ್ಗ, ಚಿಕ್ಕಬಳ್ಳಾಪುರ ಗಣಿಗಳಲ್ಲಿನ ಅವಘಡದಿಂದ ಜಿಲ್ಲೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಕಲ್ಲು ಗಣಿಗಾರಿಕೆ ನಡೆಯುವ ಕಡೆಗಳಲ್ಲಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.

ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ನೇತೃತ್ವದ ಟಾಸ್ಕ್‌ಫೋರ್ಸ್‌ ಸಮಿತಿ ಸಭೆ ನಡೆಸಿದೆ. ಎಲ್ಲೆಲ್ಲಿ ಕಲ್ಲು ಗಣಿಗಾರಿಕೆ ಸಂದರ್ಭ ಸ್ಫೋಟಕಗಳನ್ನು ಬಳಸಲಾಗುತ್ತಿದೆಯೋ ಅಲ್ಲಿಗೆ ಭೇಟಿ ಕೊಟ್ಟು, ಯಾವ ಪ್ರಮಾಣದಲ್ಲಿ ದಾಸ್ತಾನು ಸಂಗ್ರಹ ಮಾಡಲಾಗಿದೆ? ಸ್ಫೋಟ ನಡೆಸುವಾಗ ಯಾವ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂಬುದರ ಮಾಹಿತಿಯನ್ನು ಪರಿಶೀಲಿಸಲಿದೆ. ಲೋಪ ಕಂಡುಬಂದಲ್ಲಿ ಪ್ರಕರಣವೂ ದಾಖಲಾಗಲಿದೆ. ಕಂದಾಯ ಇಲಾಖೆ ಜೊತೆಗೆ ಪೊಲೀಸ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಈ ಪರಿಶೀಲನಾ ತಂಡದಲ್ಲಿ ಇರಲಿದ್ದಾರೆ.

ತಿಳಿವಳಿಕೆ ಪತ್ರ: ದುರ್ಘಟನೆಗಳ ಹಿನ್ನೆಲೆಯಲ್ಲಿ, ಗಣಿಗಳಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಎಲ್ಲ ಗಣಿಗಳ ಮಾಲೀಕರಿಗೆ ತಿಳಿವಳಿಕೆ ಪತ್ರ ನೀಡಲಿದ್ದಾರೆ. ಸ್ಫೋಟದ ಸಂದರ್ಭ ಯಾವ ಕ್ರಮಗಳನ್ನು ಅನುಸರಿಸಬೇಕು? ನಿಯಮ ಉಲ್ಲಂಘನೆ ಆದಲ್ಲಿ ಯಾವ ರೀತಿ ಪ್ರಕರಣಗಳು ದಾಖಲಾಗಲಿವೆ ಎಂಬ ಎಚ್ಚರಿಕೆಯ ಮಾಹಿತಿಯೂ ಅದರಲ್ಲಿ ಇರಲಿದೆ.

ADVERTISEMENT

ಮೂರೇ ಏಜೆನ್ಸಿ: ಸರ್ಕಾರದಿಂದ ಅನುಮತಿ ಪಡೆದ ಏಜೆನ್ಸಿಗಳ ಉಸ್ತುವಾರಿಯಲ್ಲಿಯೇ ಕ್ವಾರಿಗಳಲ್ಲಿ ಸ್ಫೋಟ ನಡೆಸಬೇಕು ಎಂಬ ನಿಯಮ ಇದೆ. ಜಿಲ್ಲೆಯಲ್ಲಿ ಕೇವಲ ಮೂರು ಏಜೆನ್ಸಿಗಳು ಮಾತ್ರ ಇದಕ್ಕೆ ಅನುಮತಿ ಪಡೆದಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ.

ಜಿಲೆಟಿನ್‌ ಮೊದಲಾದ ಸ್ಫೋಟಕಗಳನ್ನು ತರಬೇತಿ ಪಡೆದವರು ಮಾತ್ರ ಬಳಸಬೇಕು. ‘ಬ್ಲಾಸ್ಟರ್‌’ಗಳ ಮೂಲಕವೇ ಈ ಕಾರ್ಯ ನಿರ್ವಹಿಸಬೇಕು ಎಂಬ ನಿಯಮ ಇದೆ. ಆದರೆ ಕೇವಲ ಹೆಸರಿಗೆ ಮಾತ್ರ ಏಜೆನ್ಸಿ ನೆರವು ತೋರಿಸಿ, ಕುಶಲಿಗರಲ್ಲದ ಸಾಮಾನ್ಯ ಕಾರ್ಮಿಕರಿಂದಲೇ ಈ ಕೆಲಸ ಮಾಡಿಸಲಾಗುತ್ತಿದೆ. ಅದರಲ್ಲೂ 25–35 ವಯಸ್ಸಿನ ಯುವಕರನ್ನೇ ಈ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂಬ ಆರೋಪಗಳಿವೆ.

ಜಿಲ್ಲೆಯಲ್ಲಿ 84 ಕಲ್ಲು ಗಣಿಗಳಿವೆ. ಇದರಲ್ಲಿ 22 ಅಲಂಕಾರಿಕ ಶಿಲೆಯನ್ನು ಹೊಂದಿರುವ ಗಣಿಗಳಿದ್ದು, ಇಲ್ಲಿ ನಾಜೂಕಿನಿಂದ ಕಲ್ಲುಗಳನ್ನು ತೆಗೆಯುವ ಕಾರಣ ಹೆಚ್ಚು ಸ್ಫೋಟಕ ಬಳಸುವಂತಿಲ್ಲ. ಆದರೆ, ಉಳಿದ ಕಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಫೋಟಕ ಬಳಕೆ ಆಗುತ್ತಿದೆ. ಯಾವ ಪ್ರಮಾಣದಲ್ಲಿ ಇವುಗಳ ಸಂಗ್ರಹ ಇದೆ ಎಂಬುದರ ಮಾಹಿತಿ ಇಲ್ಲ. ಮುಖ್ಯವಾಗಿ ಸಂಜೆ 5ರ ನಂತರವಷ್ಟೇ ಬ್ಲಾಸ್ಟಿಂಗ್ ಮಾಡಬೇಕು ಎಂಬ ನಿಯಮ ಇದೆ. ಆದರೆ ಸಾಕಷ್ಟು ಕಡೆಗಳಲ್ಲಿ ಹಗಲು ಹೊತ್ತಿನಲ್ಲೇ ಕಲ್ಲು ಬಂಡೆಗಳು ಸಿಡಿಯುತ್ತಿದ್ದು, ಸುತ್ತಲಿನ ಊರುಗಳ ಮನೆಗಳ ಗೋಡೆಗಳು ಬಿರುಕು ಬಿಟ್ಟ ದೃಶ್ಯ ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.