ಕನಕಪುರ: ಉಪ ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲೇ, ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಇದರ ಬಗ್ಗೆ ಸ್ವತಃ ಡಿಸಿಎಂ ಸೂಕ್ತ ತನಿಖೆ ನಡೆಸಬೇಕೆಂದು ಶ್ರೀರಾಮ ಸೇನೆ ದಕ್ಷಿಣ ಕರ್ನಾಟಕ ಪ್ರಮುಖ ಸುಂದರೇಶ್ ನರಗಲ್ ಆಗ್ರಹಿಸಿದರು.
ಇಲ್ಲಿನ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಶ್ರೀರಾಮ ಸೇನೆ ವತಿಯಿಂದ ವಸತಿ ಯೋಜನೆ ಅಡಿ ನಡೆದಿರುವ ಅಕ್ರಮದ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯಿಸಿ ಬುಧವಾರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಗರಸಭೆ ವ್ಯಾಪ್ತಿಯಲ್ಲಿ 1881 ಮನೆಗಳು ಮಂಜೂರಾಗಿದ್ದು, ಈ ಯೋಜನೆಯು ನೈಜ ಫಲಾನುಭವಿಗಳಿಗೆ ತಲುಪಿಲ್ಲ. ಯೋಜನೆಯಲ್ಲಿ ಶ್ರೀಮಂತರಿಗೆ ಮನೆಗಳನ್ನು ಕಟ್ಟಿಕೊಡಲಾಗುತ್ತಿದೆ ಎಂದು ಆರೋಪಿಸಿದರು.
ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು ಕ್ರಮಬದ್ಧವಾಗಿ ಮತ್ತು ಗುಣಮಟ್ಟದಲ್ಲಿ ಕಾಮಗಾರಿಗಳನ್ನು ಮಾಡದೆ ಹಲವು ಮನೆಗಳನ್ನು ಪ್ರಾರಂಭಿಸಿ ಅರ್ಧಕ್ಕೆ ನಿಲ್ಲಿಸಿದ್ದಾರೆ, ಸಣ್ಣಪುಟ್ಟ ಗುಡಿಸಲು, ಮನೆಗಳಲ್ಲಿ ವಾಸವಿದ್ದ ಜನತೆ ಈಗ ತೀರ ಬೀದಿಗೆ ಬಿದ್ದಿದ್ದಾರೆ ಎಂದು ದೂರಿದರು.
ದಲಿತರು ಹಾಗೂ ಹಿಂದುಳಿದ ವರ್ಗದ ಬಡವರಿಗೆ ಅನ್ಯಾಯವಾಗುತ್ತಿದೆ. ಈ ಅಕ್ರಮದ ವಿರುದ್ಧ ಶ್ರೀರಾಮ ಸೇನೆ ವತಿಯಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಧರಣಿ ನಡೆಸಲು ತೀರ್ಮಾನಿಸಲಾಗಿತ್ತು, ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರತಿಭಟನಾ ಧರಣಿಯನ್ನು ಕೈಬಿಟ್ಟಿದ್ದು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಬಡವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದರು.
ಒಂದು ತಿಂಗಳ ಅವಧಿಯಲ್ಲಿ ಸರ್ಕಾರವು ಈ ಪ್ರಕರಣವನ್ನು ಸಿಬಿಐ ಇಲ್ಲವೇ ಇಡಿಗೆ ವಹಿಸಿ ತನಿಖೆ ನಡೆಸಬೇಕು. ಅರ್ಹ ಫಲಾನುಭವಿಗಳಿಗೆ ಶೀಘ್ರವಾಗಿ ಮನೆ ನಿರ್ಮಾಣ ಮಾಡಿಕೊಡಬೇಕು. ಅಕ್ರಮ ನಡೆಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಶ್ರೀರಾಮ ಸೇನೆ ಉಪಾಧ್ಯಕ್ಷ ಅರುಣ್, ಕಾರ್ಯದರ್ಶಿ ನವೀನ್, ತಾಲ್ಲೂಕು ಅಧ್ಯಕ್ಷ ಮಹೇಶ್ ಗೌಡ, ಪದಾಧಿಕಾರಿಗಳಾದ ದುರ್ಗೇಶ್, ರಾಜೇಶ್, ಕುಮಾರ್, ಶರತ್, ಸುಹಾಸ್, ಶೇಖರ್ ಸೇರಿದಂತೆ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.