ADVERTISEMENT

ರಕ್ತನಿಧಿ ಕೇಂದ್ರ ಅವಶ್ಯಕತೆ ಹೆಚ್ಚಳ

ಚನ್ನಪಟ್ಟಣದಲ್ಲಿ ‘ಜೀವಾಮೃತ ರಕ್ತ ನಿಧಿ ಕೇಂದ್ರ’ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 13:52 IST
Last Updated 29 ಏಪ್ರಿಲ್ 2019, 13:52 IST
ಚನ್ನಪಟ್ಟಣದಲ್ಲಿ ರಕ್ತನಿಧಿ ಕೇಂದ್ರ ಉದ್ಘಾಟನೆ ಮಾಡಿದ ಜಿಲ್ಲಾಧಿಕಾರಿ ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು
ಚನ್ನಪಟ್ಟಣದಲ್ಲಿ ರಕ್ತನಿಧಿ ಕೇಂದ್ರ ಉದ್ಘಾಟನೆ ಮಾಡಿದ ಜಿಲ್ಲಾಧಿಕಾರಿ ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು   

ಚನ್ನಪಟ್ಟಣ: ಇಂದಿನ ದಿನಗಳಲ್ಲಿ ರಕ್ತನಿಧಿ ಕೇಂದ್ರಗಳ ಅವಶ್ಯಕತೆ ಹೆಚ್ಚಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ರಾಜೇಂದ್ರ ಅಭಿಪ್ರಾಯಪಟ್ಟರು.

ಪಟ್ಟಣದ ಚಂದ್ರು ಡಯಾಗ್ನಸ್ಟಿಕ್ ಕೇಂದ್ರದಲ್ಲಿ ನೂತನವಾಗಿ ಆರಂಭಗೊಂಡ ‘ಜೀವಾಮೃತ ರಕ್ತ ನಿಧಿ ಕೇಂದ್ರ’ವನ್ನು ಸೋಮವಾರ ಉದ್ಘಾಟನೆ ಮಾಡಿ ಮಾತನಾಡಿದರು.

ಜೀವನ್ಮರಣ ಹೋರಾಟದಲ್ಲಿ ಅವಶ್ಯಕವಾಗಿ ಬೇಕಾದ ರಕ್ತ ದೊರೆಯದೆ ಎಷ್ಟೋ ಪ್ರಾಣಗಳು ಹಾರಿ ಹೋಗಿವೆ. ರಕ್ತವನ್ನು ಸಂಗ್ರಹಿಸುವ ಉದ್ದೇಶದಿಂದ ತಾಲ್ಲೂಕು ಕೇಂದ್ರದಲ್ಲಿ ರಕ್ತನಿಧಿ ಪ್ರಾರಂಭವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ADVERTISEMENT

ದಾನಗಳಲ್ಲಿ ರಕ್ತದಾನ ಶ್ರೇಷ್ಠ ದಾನ. ಜೀವಾಮೃತ ರಕ್ತ ನಿಧಿ ಕೇಂದ್ರವು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಲಿ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ, ಅಸಹಾಯಕರಿಗೆ ಆಸರೆಯಾಗಿ ನಿಲ್ಲಲಿ ಎಂದು ಶುಭ ಕೋರಿದರು.

ರಾಮನಗರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ.ವಿಜಯ ನರಸಿಂಹ ಮಾತನಾಡಿ, ನಗರ ಹಾಗೂ ಗ್ರಾಮೀಣರ ಆರೋಗ್ಯದ ಹಿತದೃಷ್ಟಿಯಿಂದ ರಕ್ತನಿಧಿ ಕೇಂದ್ರ ಸ್ಥಾಪನೆ ನಿಜಕ್ಕೂ ಪ್ರಶಂಸನೀಯ ಎಂದರು.

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಹಲವಾರು ಅಪಘಾತಗಳು ನಡೆಯುತ್ತವೆ. ಎರಡು ನಗರಗಳಿಗೂ ಮಧ್ಯೆ ಇರುವ ಚನ್ನಪಟ್ಟಣದಲ್ಲಿ ಇಂತಹ ಒಂದು ರಕ್ತನಿಧಿಯ ಅವಶ್ಯಕತೆ ಇತ್ತು ಎಂದರು.

ಕೆನರಾ ಬ್ಯಾಂಕ್ ಪಟ್ಟಣ ಶಾಖೆಯ ವ್ಯವಸ್ಥಾಪಕ ವರ್ಗಿಸ್ ಚಾಕೊ ಮಾತನಾಡಿ, ‘ನಮ್ಮ ಶಾಖೆಗಳು ಇಂತಹ ಆರೋಗ್ಯಪೂರ್ಣ ಯೋಜನೆಗಳು ಸಾಕಾರಗೊಳ್ಳಲು ಆರ್ಥಿಕ ಸಹಕಾರ ನೀಡಲು ಸಿದ್ಧವಿದೆ. ಇಂತಹ ಸಮಾಜಮುಖಿ ಕಾರ್ಯಗಳ ಅವಶ್ಯಕತೆ ಇದೆ’ ಎಂದರು.

ರಕ್ತನಿಧಿ ಕೇಂದ್ರದ ಸ್ಥಾಪಕ ಚಂದ್ರೇಗೌಡ ಮಾತನಾಡಿ, ‘ಇದು ನನ್ನ ಬಹುದಿನಗಳ ಕನಸು. ಇದು ನನಸಾಗಲು ಹಲವಾರು ಮಂದಿ ಸಹಕಾರ ನೀಡಿದ್ದಾರೆ. ಕಷ್ದಲ್ಲಿರುವ ಎಲ್ಲರಿಗೆ ನೆರವಾಗುವ ಉದ್ದೇಶದಿಂದ ಇದನ್ನು ಸ್ಥಾಪಿಸಿದ್ದೇನೆ’ ಎಂದರು.

ದಂಡಿನ ಮಾರಮ್ಮ ರೈತ ಸಂಘದ ಅಧ್ಯಕ್ಷ ವಿಠೇಲನಹಳ್ಳಿ ಕೃಷ್ಣೇಗೌಡ, ಪ್ರಯೋಗಾಲಯ ಸಹಾಯಕ ಪಾರ್ಥಸಾರಥಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.