ADVERTISEMENT

ರಾಮನಗರ: ಸೆಳೆಯುವ ಕಲಾಕೃತಿ, ರೈತರಿಗೆ ಮಾಹಿತಿ

ರಾಮನಗರದಲ್ಲಿ ಜನಾಕರ್ಷಣೆಯ ಫಲ-ಪುಷ್ಪ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 14:01 IST
Last Updated 26 ಜನವರಿ 2020, 14:01 IST
ಪ್ರದರ್ಶನದ ಆಕರ್ಷಣೆಯಾಗಿರುವ ಮಾಗಡಿಯ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಮಾದರಿ
ಪ್ರದರ್ಶನದ ಆಕರ್ಷಣೆಯಾಗಿರುವ ಮಾಗಡಿಯ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಮಾದರಿ   

ರಾಮನಗರ: ಹೂವಿನಿಂದ ಮಾಡಿದ ನಾನಾ ವಿಧದ ಅಲಂಕಾರ, ಕಣ್ಮನ ಸೆಳೆಯುವ ಮಾದರಿಗಳು, ಪಾರಂಪರಿಕ ಕೃಷಿಯನ್ನು ಬಿಂಬಿಸುವ ಸಿರಿಧಾನ್ಯ ಮೇಳ. ರೈತರಿಗೆ ಉಪಯುಕ್ತವಾದ ಪ್ರಾತ್ಯಕ್ಷಿಕೆಗಳು.

ಇಲ್ಲಿನ ಜೂನಿಯರ್‌ ಕಾಲೇಜು ಮೈದಾನದಲ್ಲಿ ಭಾನುವಾರ ಆರಂಭಗೊಂಡ ಫಲಪುಷ್ಪ ಪ್ರದರ್ಶನವು ಹೀಗೆ ನಾನಾ ವಿಧದ ಆಕರ್ಷಣೆಗಳ ಮೂಲಕ ನೋಡುಗರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ, ಕೃಷಿ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಸಹಯೋಗದಲ್ಲಿ ಆರಂಭಗೊಂಡ ಈ ಮೇಳವು ಫಲಪುಷ್ಪ ಪ್ರದರ್ಶನದ ಜತೆಗೆ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಮೊದಲಾದ ಇಲಾಖೆಯಲ್ಲಿನ ನಾನಾ ಯೋಜನೆಗಳನ್ನು ಕಣ್ಮುಂದೆ ತಂದು ನಿಲ್ಲಿಸಿದೆ.

ADVERTISEMENT

ಮಾಗಡಿ ತಾಲ್ಲೂಕಿನ ತಿರುಮಲೆ ರಂಗನಾಥಸ್ವಾಮಿ ದೇವಸ್ಥಾನದ ಕಲಾಕೃತಿಯು ಮೇಳದ ಪ್ರಮುಖ ಆಕರ್ಷಣೆಯಾಗಿದೆ. ಸೇವಂತಿಗೆ ಮತ್ತು ಗುಲಾಬಿ ಹೂವುಗಳಿಂದ ಈ ದೇಗುಲದ ಮಾದರಿಯನ್ನು ಅಲಂಕರಿಸಲಾಗಿದೆ. ಇದಲ್ಲದೆ ಬಗೆಬಗೆಯ ಹೂವುಗಳಿಂದ ಅಲಂಕರಿಸಿದ ಬಟರ್‌ಫ್ಲೈ, ಜಿರಾಫೆ, ಹಂಸ, ಪೆಂಗ್ವಿನ್‌, ನವಿಲು ಇತರೆ ಆಕೃತಿಗಳು ಸೆಳೆಯುತ್ತಿವೆ.

ಜತೆಗೆ ರೇಷ್ಮೆ ಕೃಷಿಯನ್ನು ಬಿಂಬಿಸುವ ಚಿತ್ರಣ, ಬಣ್ಣದ ಮೆಣಸಿನಕಾಯಿಂದ ಅಲಂಕರಿಸಿದ ಹಳ್ಳಿ ಮನೆ, ಹೈಡ್ರೋಫೋನಿಕ್ ಕೃಷಿ ಪ್ರದರ್ಶನಗಳು ಗಮನ ಸೆಳೆಯುತ್ತಿವೆ.

ತೆಂಗು ಅಭಿವೃದ್ಧಿ ಮಂಡಳಿಯು ತೆಂಗು ಬೆಳೆಯ ರೋಗಬಾಧೆಯ ನಿರ್ವಹಣೆ ಕುರಿತು ಕಾರ್ಯಾಗಾರ, ಮಾವಿನ ಸುಧಾರಿತ ಬೇಸಾಯ ಕ್ರಮ, ರೋಗ ನಿರ್ವಹಣೆ, ಕೊಯ್ಲು, ಹಣ್ಣು ಮಾಗಿಸುವಿಕೆ ಮೊದಲಾದ ವಿಷಯಗಳ ಕುರಿತ ನೀಡಲಾಗುತ್ತಿದೆ. ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತು ಕೃಷಿ ವಿ.ವಿ.ಯ ವಿಜ್ಞಾನಿಗಳು ಮಾಹಿತಿ ನೀಡಲಾಗುತ್ತಿದೆ. ಕೈ ತೋಟದ ಪ್ರಾಮುಖ್ಯತೆ ಕುರಿತು ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯುತ್ತಿದೆ.
ಕೃಷಿ ಇಲಾಖೆಯ ವತಿಯಿಂದ ಸಿರಿಧಾನ್ಯಗಳನ್ನು ಒಳಗೊಂಡ ರಾಶಿಯನ್ನು ನಿರ್ಮಿಸಲಾಗಿದೆ. ನವಣೆ, ಸೀಮೆ, ಬರಗು ಸಹಿತ ನಾನಾ ಬಗೆಯ ಧಾನ್ಯಗಳ ರಾಶಿ ನಮ್ಮ ಪಾರಂಪರಿಕ ಕೃಷಿಯ ಚಿತ್ರಣ ಕಟ್ಟಿಕೊಡುತ್ತಿದೆ.

ವಿವಿಧ ಇಲಾಖೆಗಳಿಂದ ಪ್ರಾತ್ಯಕ್ಷಿಕೆ: ಸರ್ಕಾರದ ವಿವಿಧ ಇಲಾಖೆಗಳು ತಮ್ಮಲ್ಲಿನ ಯೋಜನೆಗಳು, ಪ್ರಯೋಗಗಳ ಪ್ರದರ್ಶನಕ್ಕೆ ಈ ಮೇಳವನ್ನು ಬಳಸಿಕೊಂಡಿವೆ. ಕೃಷಿ, ತೋಟಗಾರಿಕೆ ಇಲಾಖೆಯಲ್ಲಿ ದೊರೆಯುವ ನಾನಾ ಯೋಜನೆಗಳು, ನರೇಗಾ ಸದ್ಬಳಕೆ, ಹನಿ ನೀರಾವರಿ ಮೊದಲಾದವುಗಳ ಬಗ್ಗೆ ಪ್ರಾತ್ಯಕ್ಷಿಕೆ ನಿರ್ಮಾಣ ಮಾಡಲಾಗಿದೆ. ರೇಷ್ಮೆ ಇಲಾಖೆಯು ಹುಳು ಸಾಕಣೆ, ಗೂಡು ಕಟ್ಟುವ ಪ್ರಕ್ರಿಯೆಗಳ ಮಾದರಿ ಜೊತೆಗೆ ತೋಟಗಳ ನಿರ್ವಹಣೆ, ರೈತರಿಗೆ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡುತ್ತಿದೆ.

ಪಶುಪಾಲನಾ ಇಲಾಖೆಯು ದೇಸಿ ತಳಿಗಳ ಜಾನುವಾರು, ಕುರಿಗಳನ್ನು ಪ್ರದರ್ಶನಕ್ಕೆ ಇಟ್ಟಿದೆ. ಜಾನುವಾರುಗಳಲ್ಲಿನ ರೋಗಬಾಧೆ ನಿಯಂತ್ರಣದ ಮಾಹಿತಿ ಹಂಚಿಕೊಂಡಿದೆ.

ಅರಣ್ಯ ಇಲಾಖೆಯು ಕಾಡಿನ ಮಾದರಿಯನ್ನು ನಿರ್ಮಿಸುವ ಮೂಲಕ ಅರಣ್ಯ ಸಂರಕ್ಷಣೆಯ ಮಹತ್ವ ಸಾರಿದೆ. ತೋಟಗಾರಿಕೆ ಇಲಾಖೆಯಿಂದ ನಾನಾ ಬಗೆಯ ಸಸಿಗಳ ಪ್ರದರ್ಶನವಿದೆ, ಮೀನುಗಾರಿಕೆ ಇಲಾಖೆಯು ಕೃತಕ ಮೀನು ಕೊಳ ನಿರ್ಮಿಸಿ ಮೀನು ಸಾಕಣೆ ಬಗ್ಗೆ ರೈತರಿಗೆ ವಿವರ ಕೊಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.