ADVERTISEMENT

ಕನಿಷ್ಠ ₹50 ಸಾವಿರ ಪರಿಹಾರಕ್ಕೆ ಒತ್ತಾಯ

ನೆರವು ನೀಡುವಲ್ಲಿಯೂ ತಾರತಮ್ಯ: ಎಸ್‌ಡಿಪಿಐ ಆರೋಪ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 3:48 IST
Last Updated 9 ಸೆಪ್ಟೆಂಬರ್ 2022, 3:48 IST
ಸುದ್ದಿಗೋಷ್ಠಿಯಲ್ಲಿ ಎಸ್‍ಡಿಪಿಐನ ರಾಜ್ಯ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಎಸ್‍ಡಿಪಿಐನ ರಾಜ್ಯ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಮಾತನಾಡಿದರು   

ರಾಮನಗರ: ನಗರದಲ್ಲಿ ಅತಿವೃಷ್ಟಿಯಿಂದ ನಷ್ಟ ಅನುಭವಿಸಿದವರಿಗೆ ಯಾವುದೇ ತಾರತಮ್ಯ ಇಲ್ಲದೇ ಪರಿಹಾರ ನೀಡಬೇಕು ಎಂದು ಎಸ್‍ಡಿಪಿಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಜಿಲ್ಲಾಡಳಿತ ಹಾಗೂ ಸರ್ಕಾರವನ್ನು ಆಗ್ರಹಿಸಿದರು.

‘ಈ ಹಿಂದೆ ಕೊಡಗು ಜಿಲ್ಲೆಯಲ್ಲಿ ಮಳೆಯಿಂದಾಗಿ ಹಾನಿಯಾದ ಸಂತ್ರಸ್ತರಿಗೆ ಸರ್ಕಾರ ₹50ಸಾವಿರ ಪರಿಹಾರ ನೀಡಿತ್ತು. ಆದರೆ ರಾಮನಗರದಲ್ಲಿ ನೆರೆಯಿಂದ ತೊಂದರೆಗೆ ಒಳಗಾದವರಿಗೆ ಕೇವಲ ₹10 ಸಾವಿರ ನೀಡುತ್ತಿರುವುದು ತಾರತಮ್ಯದಿಂದ ಕೂಡಿದೆ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಅರ್ಕಾವತಿ ಬಡಾವಣೆ, ಟಿಪ್ಪು ನಗರ, ಜಿಯಾವುಲ್ಲಾ ಬ್ಲಾಕ್ ಮೊದಲಾದ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ.
ಆದರೆ ಸಂತ್ರಸ್ತರಿಗೆ ಪರಿಹಾರರೂಪದಲ್ಲಿ ನೀಡುತ್ತಿರುವ ಹಣ ಸಾಕಾಗುವುದಿಲ್ಲ.ಈವರೆಗೆ ಶೇ 20ರಷ್ಟು ಜನರಿಗೆ ಮಾತ್ರ ಪರಿಹಾರ ದೊರೆತಿದೆ. ಕೂಡಲೇ ₹50ಸಾವಿರ ಪರಿಹಾರ ನೀಡಬೇಕು ಎಂದರು.

ADVERTISEMENT

ಭಕ್ಷಿ ಕೆರೆ ಭರ್ತಿಯಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಸಂಬಂಧಪಟ್ಟವರಿಗೆ ದೂರು ನೀಡಿದ್ದರು. ಆದರೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲಿಲ್ಲ. ಕೆರೆ ಕೋಡಿ ಒಡೆದು ನಗರ ಜಲಾವೃತಗೊಂಡಿತು. ಮುಖ್ಯಮಂತ್ರಿಯಿಂದ ಹಿಡಿದು ಶಾಸಕರವರೆಗೆ ಜನಪ್ರತಿನಿಧಿಗಳು ಕೆಲವು ಪ್ರದೇಶಗಳಿಗಷ್ಟೇ ಭೇಟಿ ನೀಡಿದ್ದಾರೆ ಎಂದು ದೂರಿದರು.

ಮಳೆಯಿಂದಾಗಿ ಮನೆಗಳಿಗೆ ಮಣ್ಣು ನುಗ್ಗಿದೆ. ಗೃಹ ಉಪಯೋಗಿ ಪದಾರ್ಥಗಳು ನೀರು ಪಾಲಾಗಿದೆ. 150ಕ್ಕೂ ಹೆಚ್ಚು ಮನೆಗಳುಹಾನಿಯಾಗಿದೆ. ರೇಷ್ಮೆ ಉದ್ಯಮ ನಷ್ಟ ಅನುಭವಿಸಿದೆ. ತಕ್ಷಣವೇ ನಷ್ಟ ಪರಿಹಾರವನ್ನು ಒದಗಿಸಿಕೊಡಬೇಕು ಎಂದು ಹೇಳಿದರು. ಎಸ್‍ಡಿಪಿಐನ ಕಾರ್ಯಕರ್ತರು ನೆರೆ ಪೀಡಿತ ಪ್ರದೇಶಗಳ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವುದಾಗಿ ತಿಳಿಸಿದರು.

ಎಸ್‍ಡಿಪಿಐನ ಪದಾಧಿಕಾರಿಗಳಾದ ಸಯ್ಯದ್ ಅಲಿ, ಸಯ್ಯದ್‌ ಅಸಾದ್ದುಲ್ಲಾ, ಆರೀಫ್ ಪಾಷ, ಫೈರೋಜ್ ಅಲಿಖಾನ್, ಅಬ್ದುಲ್ ಪಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.