ADVERTISEMENT

ರೈತರ ಸಂಕಷ್ಟ ಪರಿಹರಿಸಲು ಒತ್ತಾಯ

ಜಿಲ್ಲಾ ಸಂಕೀರ್ಣದ ಮುಂಭಾಗ ರೈತ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 4:42 IST
Last Updated 27 ಜೂನ್ 2021, 4:42 IST
ರೈತ ಮುಖಂಡರು ತಹಶೀಲ್ದಾರ್ ನರಸಿಂಹಮೂರ್ತಿ ಅವರಿಗೆ ಮನವಿ ಸಲ್ಲಿಸಿದರು
ರೈತ ಮುಖಂಡರು ತಹಶೀಲ್ದಾರ್ ನರಸಿಂಹಮೂರ್ತಿ ಅವರಿಗೆ ಮನವಿ ಸಲ್ಲಿಸಿದರು   

ರಾಮನಗರ: ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ವಿವಿಧ ಇಲಾಖೆಯ ಮುಖ್ಯಸ್ಥರ ಜೊತೆ ರೈತರ ಸಭೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ರಾಮನಗರ ತಹಶೀಲ್ದಾರ್ ನರಸಿಂಹಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ರಾಗಿ ಖರೀದಿ ಮಾಡಿ ಮೂರ್ನಾಲ್ಕು ತಿಂಗಳಾದರೂ ಇನ್ನೂ ರೈತರಿಗೆ ಹಣ ಪಾವತಿಸಿಲ್ಲ. ಕೂಡಲೇ ಬಾಕಿ ಹಣ ಪಾವತಿ ಮಾಡಬೇಕು. ರೈತರನ್ನು ಮುಂಚೂಣಿ ವಾರಿಯರ್‌ಗಳು ಎಂದು ಪರಿಗಣಿಸಿ, ಕೋವಿಡ್‌ನಿಂದ ಸಾವನ್ನಪ್ಪಿದ ರೈತರ ಕುಟುಂಬದವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ರೈತರಿಗೆ ಉಚಿತ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಜೊತೆಗೆ ಕೃಷಿ ಯಂತ್ರಧಾರೆ ಮುಖಾಂತರ ಕೃಷಿ ಪರಿಕರವನ್ನು ಉಚಿತವಾಗಿ ಪೂರೈಕೆ ಮಾಡಬೇಕು. ಹೊಸ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವ ಆಮಿಷವೊಡ್ಡಿ ಪ್ರತಿ ರೈತನಿಂದ ₹ 20 ಸಾವಿರಕ್ಕೂ ಹೆಚ್ಚು ವಸೂಲಿ ಮಾಡಲಾಗಿದೆ. ಆದಾಗ್ಯೂ ಹಳೆಯ ಪರಿವರ್ತಕಗಳನ್ನು ತೆರವುಗೊಳಿಸಿ ಹೊಸದನ್ನು ಅಳವಡಿಸದೇ ರೈತರಿಗೆ ಮೋಸ ಮಾಢಿರುವ ಬೆಸ್ಕಾಂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಅನುಸೂಯಮ್ಮ, ಜಿಲ್ಲಾ ಅಧ್ಯಕ್ಷ ಭೈರೇಗೌಡ, ಕಾರ್ಯಾಧ್ಯಕ್ಷ ಉಮೇಶ್, ಪ್ರಮುಖರಾದ ಗೋವಿಂದರಾಜು, ಕೃಷ್ಣಪ್ಪ, ಶಿವಕುಮಾರಸ್ವಾಮಿ, ಲೋಕೇಶ್, ಸಯ್ಯದ್‌ ಉಲ್ಲಾ ಖಾನ್, ನಾಗಮ್ಮ, ರಾಮಚಂದ್ರಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.