ADVERTISEMENT

ಒಳ ಮೀಸಲಾತಿ ಸಮೀಕ್ಷೆ: ರಾಮನಗರ ಜಿಲ್ಲೆಯಲ್ಲಿದ್ದಾರೆ 1.98 ಲಕ್ಷ ಪರಿಶಿಷ್ಟರು

ಓದೇಶ ಸಕಲೇಶಪುರ
Published 21 ಜುಲೈ 2025, 2:27 IST
Last Updated 21 ಜುಲೈ 2025, 2:27 IST
<div class="paragraphs"><p> ಒಳ ಮೀಸಲಾತಿಗೆ ಸಂಬಂಧಿಸಿದಂತೆ ಪರಿಶಿಷ್ಟರ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದ ಶಿಕ್ಷಕರು</p></div>

ಒಳ ಮೀಸಲಾತಿಗೆ ಸಂಬಂಧಿಸಿದಂತೆ ಪರಿಶಿಷ್ಟರ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದ ಶಿಕ್ಷಕರು

   

(ಸಂಗ್ರಹ ಚಿತ್ರ)

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ 54,475 ಕುಟುಂಬಗಳಿದ್ದು, ಒಟ್ಟು 1,98, 632 ಸದಸ್ಯರಿದ್ದಾರೆ. ಪರಿಶಿಷ್ಟರಿಗೆ ಒಳ ಮೀಸಲಾತಿ ಕಲ್ಪಿಸುವುದಕ್ಕಾಗಿ ರಾಜ್ಯ ಸರ್ಕಾರ ನಿಯೋಜಿಸಿರುವ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ನೇತೃತ್ವದ ಆಯೋಗ ನಡೆಸಿರುವ ‘ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ’ಯಲ್ಲಿ ಈ ಅಂಶ ಗೊತ್ತಾಗಿದೆ.

ಆಯೋಗವು ಮೇ 5ರಿಂದ ಜೂನ್ 30ರವರೆಗೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿರುವ ಪರಿಶಿಷ್ಟ ಜಾತಿಯವರ ಸಮೀಕ್ಷೆಯನ್ನು ಕೈಗೊಂಡಿತ್ತು. ಶಾಲಾ ಶಿಕ್ಷಕರಿಂದ ಮನೆ ಭೇಟಿ ಮೂಲಕ, ನಾಗರೀಕ ಸೇವಾ ಕೇಂದ್ರಗಳಾದ ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳು, ಬಾಪೊಜಿ ಸೇವಾ ಕೇಂದ್ರ ಹಾಗೂ ಆನ್‌ಲೈನ್‌ನಲ್ಲಿ ಸ್ವಯಂ ಘೋಷಣೆ ಮೂಲಕವೂ ನಡೆದಿದ್ದ ಸಮೀಕ್ಷೆಯಲ್ಲಿ ಜಿಲ್ಲೆಯ ಶೇ 92ರಷ್ಟು ಪರಿಶಿಷ್ಟರು ಭಾಗಿಯಾಗಿದ್ದಾರೆ.

ADVERTISEMENT

ಕನಕಪುರದಲ್ಲೇ ಹೆಚ್ಚು:

ಸಮೀಕ್ಷೆ ಪ್ರಕಾರ ಕನಕಪುರ ಕ್ಷೇತ್ರದಲ್ಲಿ ಪರಿಶಿಷ್ಟ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಾಲ್ಲೂಕಿನಲ್ಲಿ 14,276 ಪರಿಶಿಷ್ಟರ ಕುಟುಂಬಗಳಿದ್ದು ಒಟ್ಟು 52,043 ಸದಸ್ಯರಿದ್ದಾರೆ. ಎರಡನೇ ಸ್ಥಾನದಲ್ಲಿರುವ ಮಾಗಡಿಯಲ್ಲಿ 13,836 ಕುಟುಂಬಗಳಿದ್ದು 50,419 ಜನರಿದ್ದಾರೆ. ಮೂರನೇ ಸ್ಥಾನದಲ್ಲಿರುವ ರಾಮನಗರದಲ್ಲಿ 13,624 ಕುಟುಂಬಗಳಿದ್ದು, 49,114 ಜನರಿದ್ದಾರೆ. ಕಡೆಯ ಚನ್ನಪಟ್ಟಣ ಕ್ಷೇತ್ರದಲ್ಲಿ12,739 ಪರಿಶಿಷ್ಟರ ಕುಟುಂಬಗಳಿದ್ದು ಒಟ್ಟು 47,326 ಸದಸ್ಯರಿದ್ದಾರೆ.

‘ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿರುವ ಸಮುದಾಯದ ಶೇ 92ರಷ್ಟು ಮಂದಿ ಭಾಗವಹಿಸಿದ್ದಾರೆ. ಜೂನ್ 30ರವರೆಗೆ ಸಮೀಕ್ಷೆ ನಡೆದಿದ್ದು, 27ರವರೆಗಿನ ಮಾಹಿತಿ ಮಾತ್ರ ನಮಗೆ ಲಭ್ಯವಾಗಿದೆ. ಉಳಿದ ಮೂರು ದಿನದ ಮಾಹಿತಿ ಸಿಕ್ಕಿಲ್ಲ. ಅಂತಿಮ ವರದಿಯಲ್ಲಿ ಅದರ ಮಾಹಿತಿ ಸಿಗಲಿದ್ದು, ಆಗ ಈ ಅಂಕಿಅಂಶದಲ್ಲಿ ಸ್ವಲ್ಪ ಏರುಪೇರಾಗಲಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ವಿ. ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಖ್ಯಾಬಲದ ಲೆಕ್ಕಾಚಾರ:

ಸಮೀಕ್ಷೆ ಬೆನ್ನಲ್ಲೇ ಜಿಲ್ಲೆಯಲ್ಲಿ ಎಡ (ಮಾದಿಗ ಸಂಬಂಧಿತ ಜಾತಿಗಳು) ಮತ್ತು ಬಲ (ಹೊಲೆಯ ಸಂಬಂಧಿತ ಜಾತಿಗಳು) ಸಮುದಾಯಗಳಲ್ಲಿ ಯಾರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂಬ ಸಂಖ್ಯಾಬಲದ ಚರ್ಚೆ ಶುರುವಾಗಿದೆ. ಸಮೀಕ್ಷೆಗೆ ಮುಂಚೆಯೇ ಎಡ ಮತ್ತು ಬಲ ಸಮುದಾಯದ ಮುಖಂಡರು ತಮ್ಮವರ ಸಭೆ ನಡೆಸಿದ್ದರು.

ಜಿಲ್ಲೆಯಲ್ಲಿ ತಮ್ಮ ಸಮುದಾಯದವರ ಸಂಖ್ಯೆಯೇ ಹೆಚ್ಚಾಗಿರುವುದಾಗಿ ಸಭೆಯಲ್ಲಿ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸಮೀಕ್ಷೆ ಸಂದರ್ಭದಲ್ಲಿ ಸಮುದಾಯದವರು ತಪ್ಪದೆ ಭಾಗವಹಿಸಿ ತಮ್ಮ ಪ್ರಾತಿನಿಧಿಕ ಜಾತಿಯ ಕೋಡ್ ನಮೂದಿಸುವಂತೆ ಜಾಗೃತಿ ಮೂಡಿಸಿದ್ದರು. ಸಮೀಕ್ಷೆ ಪೂರ್ಣಗೊಳಿಸಿರುವ ಆಯೋಗವು ಅಂತಿಮ ವರದಿ ಬಿಡುಗಡೆಗೊಳಿಸಿದ ಬಳಿಕ ಯಾವ ಜಾತಿಯವರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದು ನಿಖರವಾಗಿ ಗೊತ್ತಾಗಲಿದೆ.

ಒಳಮೀಸಲಾತಿಗೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಪರಿಶಿಷ್ಟರ ಸಮೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲಾಗಿದೆ. ಸಮುದಾಯದ ಶೇ 92ರಷ್ಟು ಮಂದಿ ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ಹಂಚಿಕೊಂಡಿದ್ದಾರೆ
– ಎಂ.ವಿ. ಶಿವಕುಮಾರ್ ಜಂಟಿ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆ

ಎಂ.ವಿ. ಶಿವಕುಮಾರ್, ಜಂಟಿ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ

ಕುಟುಂಬಗಳು ಏರಿಕೆ; ಜನಸಂಖ್ಯೆ ಇಳಿಕೆ
ಒಳಮೀಸಲಾತಿಗಾಗಿ ಆಯೋಗವು 2025ರಲ್ಲಿ ನಡೆಸಿರುವ ಪರಿಶಿಷ್ಟರ ಸಮೀಕ್ಷೆಯನ್ನು 2011ರ ಜನಗಣತಿಯ ಅಂಕಿಅಂಶಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಸದ್ಯ ಪರಿಶಿಷ್ಟರ ಕುಟುಂಬಗಳು ಏರಿಕೆಯಾಗಿವೆ. ಆದರೆ ಜನಸಂಖ್ಯೆ ಇಳಿಕೆಯಾಗಿದೆ. 2011ರಲ್ಲಿ 47769 ಇದ್ದ ಪರಿಶಿಷ್ಟ ಕುಟುಂಬಗಳ ಸಂಖ್ಯೆಯು ಸಮೀಕ್ಷೆ ಸಂದರ್ಭದಲ್ಲಿ 54475ಕ್ಕೆ ಏರಿಕೆಯಾಗಿದೆ. ಆದರೆ 2011ರಲ್ಲಿದ್ದ 203819 ಜನಸಂಖ್ಯೆಯು 2025ರಲ್ಲಿ 198632ಕ್ಕೆ ಕುಸಿದಿರುವುದು ಅಂಕಿಅಂಶಗಳಿಂದ ಗೊತ್ತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.