ADVERTISEMENT

ರಾಮನಗರ: ಲೋಕಾಯುಕ್ತ ಎಸ್‌ಪಿ ಸ್ನೇಹಗೆ ‘ಐಪಿಎಸ್’ ಬಡ್ತಿ

ಪ್ರೌಢಶಾಲೆ ಶಿಕ್ಷಕಿ ಹುದ್ದೆಯಿಂದ ‘ಐಪಿಎಸ್‌’ವರೆಗೆ ಸ್ನೇಹ ಪಯಣ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 2:50 IST
Last Updated 25 ಅಕ್ಟೋಬರ್ 2025, 2:50 IST
ಪಿ.ವಿ. ಸ್ನೇಹ
ಪಿ.ವಿ. ಸ್ನೇಹ   

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಪಿ.ವಿ. ಸ್ನೇಹ ಅವರಿಗೆ ರಾಜ್ಯ ಸರ್ಕಾರ ಐಪಿಎಸ್‌ಗೆ (ಭಾರತೀಯ ಪೊಲೀಸ್ ಸೇವೆ) ಬಡ್ತಿ ನೀಡಿದೆ. ರಾಜ್ಯದಲ್ಲಿ ಈ ಬಾರಿ ಐಪಿಎಸ್‌ಗೆ ಬಡ್ತಿ ಪಡೆದಿರುವ ಇಬ್ಬರು ಪೊಲೀಸರ ಪೈಕಿ ಸ್ನೇಹ ಕೂಡ ಒಬ್ಬರು.

ಮಂಡ್ಯದ ಗಾಂಧಿನಗರದ ಪಿ.ಕೆ. ವೆಂಕಟೇಶ್ ಮತ್ತು ಪಿ.ವಿ. ಲಲಿತಮ್ಮ ದಂಪತಿ ಪುತ್ರಿಯಾದ ಸ್ನೇಹ ಅವರು 1978ರಲ್ಲಿ ಜನಿಸಿದರು. ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ಸ್ನೇಹ, 2004ರಲ್ಲಿ ಪ್ರೌಢಶಾಲೆ ಶಿಕ್ಷಕಿಯಾಗಿ ನೇಮಕಗೊಂಡು ಪಾಂಡವಪುರ ತಾಲ್ಲೂಕಿನ ಚಿಕ್ಕಬ್ಯಾಡರಹಳ್ಳಿ ಶಾಲೆಯಲ್ಲಿ ಸೇವೆ ಸಲ್ಲಿಸಿದರು. 2006ರಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ನೇಮಕವಾಗಿ, ಎಂ.ಕೆ. ದೊಡ್ಡಿ ಪಿಯು ಕಾಲೇಜಿನಲ್ಲಿ ಬೋಧನೆ ಮಾಡಿದರು.

2012ರಲ್ಲಿ ‌ಪೊಲೀಸ್ ಇಲಾಖೆ ಸೇರಿದ ಸ್ನೇಹ ಅವರು, ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿ (ಕೆಪಿಎ) ಮತ್ತು ಚಾಮರಾಜನಗರದಲ್ಲಿ ಪ್ರೊಬೇಷನರಿ ಡಿವೈಎಸ್ಪಿಯಾಗಿ ತಲಾ ಒಂದು ವರ್ಷ ಕಾರ್ಯ ನಿರ್ವಹಿಸಿದರು. 2014ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ಉಪ ವಿಭಾಗದ ಡಿವೈಎಸ್ಪಿಯಾಗಿ, 2015ರಲ್ಲಿ ಕೆಪಿಎ ಹಾಗೂ 2016ರಲ್ಲಿ ಕೊಳ್ಳೇಗಾಲ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸಿದರು.

ADVERTISEMENT

2017ರಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಡ್ತಿ ಪಡೆದು, ಮೈಸೂರಿನಲ್ಲಿ ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡಿದರು. 2018ರಿಂದ 2020ರವರೆಗೆ ಮೈಸೂರು ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ, 2020ರಿಂದ 2021ರವರೆಗೆ ಮೈಸೂರಿನಲ್ಲಿ ಲೋಕಾಯುಕ್ತ ಎಸ್‌ಪಿ ಹಾಗೂ 2021–24ರವರೆಗೆ ಬೆಳಗಾವಿ ಪೊಲೀಸ್ ಕಮಿಷನರೇಟ್‌ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದರು.

ಸದ್ಯ ಬೆಂಗಳೂರು ದಕ್ಷಿಣ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಸ್ನೇಹ ಅವರು ಬರವಣಿಯಲ್ಲಿ ಆಸಕ್ತಿ ಹೊಂದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಂಪನ್ಮೂಲ ವ್ಯಕ್ತಿಯೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.