ADVERTISEMENT

ಜೆ.ಬ್ಯಾಡರಹಳ್ಳಿ ಗ್ರಾ.ಪಂ.ಕಚೇರಿಗೆ ಬೀಗ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 2:47 IST
Last Updated 17 ಜುಲೈ 2025, 2:47 IST
ಚನ್ನಪಟ್ಟಣ ತಾಲ್ಲೂಕಿನ ಜೆ.ಬ್ಯಾಡರಹಳ್ಳಿ ಗ್ರಾ.ಪಂ.ನಲ್ಲಿ ಅವ್ಯವಹಾರ ನಡೆದಿದೆ ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಗ್ರಾ.ಪಂ.ಸದಸ್ಯರು ಗ್ರಾ.ಪಂ.ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು
ಚನ್ನಪಟ್ಟಣ ತಾಲ್ಲೂಕಿನ ಜೆ.ಬ್ಯಾಡರಹಳ್ಳಿ ಗ್ರಾ.ಪಂ.ನಲ್ಲಿ ಅವ್ಯವಹಾರ ನಡೆದಿದೆ ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಗ್ರಾ.ಪಂ.ಸದಸ್ಯರು ಗ್ರಾ.ಪಂ.ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು   

ಚನ್ನಪಟ್ಟಣ: ಜೆ.ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯರು ಬುಧವಾರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಹಣಕಾಸು ಯೋಜನೆಯಲ್ಲಿ ನಕಲಿ ಕಾಮಗಾರಿ ಮತ್ತು ಕ್ರಿಯಾ ವರದಿ ತಯಾರಿಸಿ ಲಕ್ಷಾಂತರ ರೂಪಾಯಿ ಅನುದಾನ ದುರುಪಯೋಗ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕೆಂದು ಗ್ರಾ.ಪಂ.ಮಾಜಿ ಅಧ್ಯಕ್ಷರಾದ ರಾಮಚಂದ್ರು, ಪೂರ್ಣಿಮಾ, ಸದಸ್ಯರಾದ ಜ್ಯೋತಿ, ಬಸವರಾಜು, ರಂಗ, ಗಂಗಾಧರಮೂರ್ತಿ, ಲಕ್ಷ್ಮಿ, ಗುರುವಯ್ಯ, ಸಿದ್ದಪ್ಪ ಇತರರು ಆಗ್ರಹಿಸಿದರು.

ಗ್ರಾ.ಪಂ.ಗೆ ಬಂದಿರುವ 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಕಾಮಗಾರಿ ನಡೆಯದಿದ್ದರೂ ನಕಲಿ ಕಾಮಗಾರಿಗಳನ್ನು ತೋರಿಸಿ ಬಿಲ್ ಮಾಡಲಾಗಿದೆ. ಸದಸ್ಯರು ಈ ಬಗ್ಗೆ ಮಾಹಿತಿ ಕೇಳಿದರೆ ಸಬೂಬು ಹೇಳುತ್ತಿದ್ದಾರೆ. ಸಾಮಾನ್ಯ ಸಭೆ ನಡೆದು ನಾಲ್ಕು ತಿಂಗಳಾದರೂ ಅಧ್ಯಕ್ಷರು ಹಾಗೂ ಪಿಡಿಒ ಲೆಕ್ಕಪತ್ರಗಳನ್ನು ನೀಡುತ್ತಿಲ್ಲ. ಇದರ ಜೊತೆಗೆ ಪಂಚಾಯಿತಿಯಲ್ಲಿ ಸಂಗ್ರಹವಾದ ಕಂದಾಯ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಈ ಬಗ್ಗೆ ತಾ.ಪಂ. ಇಒ, ಸಿಇಒ ಹಾಗೂ ಶಾಸಕರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ADVERTISEMENT

ಕಳೆದ ಒಂದು ವರ್ಷದಿಂದ ಇಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಗ್ರಹಣ ಹಿಡಿದಿದೆ. ಜೊತೆಗೆ ಅವ್ಯವಹಾರ ನಡೆದಿದೆ. ಈ ಬಗ್ಗೆ ಶಾಸಕರು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರು ಗಮನಹರಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಸ್ಥಳಕ್ಕೆ ಗ್ರಾ.ಪಂ.ಅಧ್ಯಕ್ಷ ಹಾಗೂ ಪಿಡಿಒ ಬಾರದ ಕಾರಣ ಪ್ರತಿಭಟನಾಕಾರರು ಈ ಬಗ್ಗೆ ಶಾಸಕರು, ಜಿ.ಪಂ. ಸಿಇಒ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿ ಕಚೇರಿ ಬೀಗ ತೆಗೆದು ಸ್ಥಳದಿಂದ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.