
ಚನ್ನಪಟ್ಟಣ: ಅಮರಶಿಲ್ಪಿ ಜಕಣಾಚಾರಿ ದೇವಾಲಯಗಳನ್ನು ನಿರ್ಮಿಸಿ ನಾಡಿನ ಇತಿಹಾಸದಲ್ಲಿ ಅಜರಾಮರಾಗಿದ್ದಾರೆ ಎಂದು ತಹಶೀಲ್ದಾರ್ ಬಿ.ಎನ್.ಗಿರೀಶ್ ಅಭಿಪ್ರಾಯಪಟ್ಟರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ಜಕಣಾಚಾರಿ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.
ಅಮರಶಿಲ್ಪಿ ಜಕಣಾಚಾರಿ ಬೇಲೂರು, ಹಳೆಬೀಡು ಸೇರಿದಂತೆ ಹಲವೆಡೆ ಹೊಯ್ಸಳ ಶಿಲ್ಪಕಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ದೇಶದ ಭವ್ಯ ಪರಂಪರೆ ಇತಿಹಾಸ ಸಾರುವ ದೇವಾಲಯಗಳ ನಿರ್ಮಾಣ ಮಾಡಿದ್ದಾರೆ. ಅವರ ಕಲಾಪ್ರತಿಭೆಗೆ ಬೇಲೂರು ಚೆನ್ನಕೇಶವ ದೇವಾಲಯ, ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ, ಸೋಮನಾಥಪುರ ಚೆನ್ನಕೇಶವ ದೇವಾಲಯಗಳೇ ಸಾಕ್ಷಿ ಎಂದರು.
ಸರ್ಕಾರ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿವೆ. ಸಮುದಾಯವು ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು. ಜತೆಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸಮಾಜದ ಉನ್ನತ ವ್ಯಕ್ತಿಗಳನ್ನಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನಗರಸಭೆ ಪೌರಾಯುಕ್ತ ಮಹೇಂದ್ರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಅಪರ್ಣಾ, ಶಿಶು ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರಮೀಳ, ಶಿರಸ್ತೇದಾರ ಹರೀಶ್, ವಿಶ್ವಕರ್ಮ ಸಮುದಾಯದ ಮುಖಂಡ ರಾಜಣ್ಣ, ತಾಲ್ಲೂಕು ಮಟ್ಟದ ಅಧಿಕಾರಿಗಳು ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.