ADVERTISEMENT

ಜಾನಪದ ಲೋಕಕ್ಕೆ ಬೇಕಿದೆ ಅನುದಾನದ ಶಕ್ತಿ: ನಟ ಟಿ.ಎಸ್. ನಾಗಾಭರಣ

ಎರಡು ದಿನಗಳ ವಿದ್ಯಾರ್ಥಿ ಜಾನಪದ ಲೋಕೋತ್ಸವಕ್ಕೆ ಅದ್ಧೂರಿ ಚಾಲನೆ; ಗಮನ ಸೆಳೆದ ಜಾನಪದ ಕಲಾ ಪ್ರದರ್ಶನಗಳು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 3:22 IST
Last Updated 8 ಫೆಬ್ರುವರಿ 2026, 3:22 IST
<div class="paragraphs"><p>ರಾಮನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಮ್ಮಿಕೊಂಡಿರುವ ಎರಡು ದಿನಗಳ ವಿದ್ಯಾರ್ಥಿ ಜಾನಪದ ಲೋಕೋತ್ಸವವನ್ನು&nbsp;ಸಿನಿಮಾ ನಿರ್ದೇಶಕ ಟಿ.ಎಸ್. ನಾಗಾಭರಣ ಉದ್ಘಾಟಿಸಿದರು.</p></div>

ರಾಮನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಮ್ಮಿಕೊಂಡಿರುವ ಎರಡು ದಿನಗಳ ವಿದ್ಯಾರ್ಥಿ ಜಾನಪದ ಲೋಕೋತ್ಸವವನ್ನು ಸಿನಿಮಾ ನಿರ್ದೇಶಕ ಟಿ.ಎಸ್. ನಾಗಾಭರಣ ಉದ್ಘಾಟಿಸಿದರು.

   

ರಾಮನಗರ: ‘ನಮ್ಮ ನೆಲದ ಸಂಸ್ಕೃತಿ ಮತ್ತು ಸಾಂಸ್ಕೃತಿಕತೆ ಪೋಷಿಸಿ ಬೆಳೆಸುವ ಕೆಲಸ ಮಾಡುತ್ತಿರುವ ಜಾನಪದ ಲೋಕಕ್ಕೆ ಸರ್ಕಾರ ಹೆಚ್ಚಿನ ಅನುದಾನದ ಶಕ್ತಿ ಒದಗಿಸಬೇಕು. ಸರ್ಕಾರವಷ್ಟೇ ಅಲ್ಲದೆ ಕಾರ್ಪೋರೇಟ್ ಸಂಸ್ಥೆಗಳೂ ಈ ದಿಸೆಯಲ್ಲಿ ಮುಂದಾಗಬೇಕು’ ಎಂದು ಸಿನಿಮಾ ನಿರ್ದೇಶಕ ಹಾಗೂ ನಟ ಟಿ.ಎಸ್. ನಾಗಾಭರಣ ಹೇಳಿದರು.

ನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಎರಡು ದಿನಗಳ ‘ವಿದ್ಯಾರ್ಥಿ ಜಾನಪದ ಲೋಕೋತ್ಸವ-2026’ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

ಎಲ್ಲಿ ಸಂಸ್ಕೃತಿ ಗಟ್ಟಿಯಾಗಿರುತ್ತದೋ ಅಲ್ಲಿನ ಸಮಾಜವೂ ಗಟ್ಟಿಯಾಗಿರುತ್ತದೆ. ಆ ನಿಟ್ಟಿನಲ್ಲಿ ಜಾನಪದ ಲೋಕ ಮಾಡುತ್ತಿದೆ ಎಂದರು.

‘ಮನುಷ್ಯನ ಶರೀರ ಅರಿವಿಲ್ಲದೆ ಜನಪದ ವಾದ್ಯಗಳಿಗೆ ಪ್ರತಿಕ್ರಿಯಿಸುತ್ತದೆ. ಎಲ್ಲಿ ಕ್ರಿಯೆ ಇರುವುದಿಲ್ಲವೋ ಅಲ್ಲಿ ಪ್ರತಿಕ್ರಿಯೆ ಹಾಗೂ ಬದುಕು ಇರುವುದಿಲ್ಲ. ಎಚ್.ಎಲ್. ನಾಗೇಗೌಡರಿದ್ದಾಗ ನಾನು ಮೂರು ವರ್ಷ ಜಾನಪದ ಲೋಕದ ಸದಸ್ಯನಾಗಿದ್ದೆ. ಆಗ ಜಾನಪದದ ಬಗೆಗಿನ ನನ್ನ ಅರಿವು ವಿಸ್ತಾರವಾಯಿತು’ ಎಂದು ನೆನೆದರು.‌

‘ಜಾನಪದ ಲೋಕ ಸೃಷ್ಟಿಸಿ, ಜಾನಪದ ಸಂಸ್ಕೃತಿಯನ್ನು ಒಂದು ಪಠ್ಯವಾಗಿಸಿ, ಜಾನಪದ ಕಲೆಗಳನ್ನು ಶೈಕ್ಷಣಿಕ ಸಾಮಗ್ರಿಯಾಗಿ ಹಾಗೂ ಶೈಕ್ಷಣಿಕ ಪಠ್ಯವನ್ನಾಗಿ ರೂಪಿಸಿದ ಕೀರ್ತಿ ನಾಗೇಗೌಡರಿಗೆ ಸಲ್ಲುತ್ತದೆ. ಜಾನಪದವು ಹೇಗೆ ಬೆಳವಣಿಗೆಯಾಗುತ್ತಿರುತ್ತದೆಯೋ ಹಾಗೆ ವಿಸ್ತಾರವಾಗುತ್ತಿರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರದ ಕೆ.ವಿ. ಪ್ರಭಾಕರ್ ಮಾತನಾಡಿ, ‘ಜನಪದದಲ್ಲಿ ಜನ ವಿರೋಧಿಯಾದದ್ದು, ಸಮಾಜ ವಿರೋಧಿಯಾದದ್ದು ಎಂಬುದಿಲ್ಲ. ಆದ್ದರಿಂದಲೇ ಜನಪದ ಎಂದರೆ ಜನಪರವಾದುದು. ನಮ್ಮ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಿ, ಮುಂದಿನ ತಲೆಮಾರಿಗೆ ದಾಟಿಸುವ ಕೆಲಸ ವಿದ್ಯಾರ್ಥಿಗಳಿಂದ ಆಗಬೇಕಿದೆ’ ಎಂದರು.

‘ಜಾನಪದ ಕಲೆಗಳು ಸಾಮಾಜಿಕ ಐಕ್ಯತೆಯಲ್ಲೂ ಶ್ರಮಿಕ ಜನಸಮುದಾಯಗಳನ್ನು ಜಾತಿ-ಮತದ ಭೇದವಿಲ್ಲದೆ ಒಂದುಗೂಡಿಸುತ್ತವೆ. ಊರಿನ ಹಬ್ಬಗಳು, ಜಾತ್ರೆಗಳಲ್ಲಿ ನಡೆಯುವ ಡೊಳ್ಳು ಕುಣಿತ, ವೀರಗಾಸೆ ಅಥವಾ ಕೋಲಾಟಗಳು ಸಾಮೂಹಿಕ ಶಕ್ತಿಯನ್ನು ಮತ್ತು ಸೌಹಾರ್ದತೆಯನ್ನು ಎತ್ತಿ ಹಿಡಿಯುತ್ತವೆ’ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು ಮಾತನಾಡಿ, ‘‌ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಾವು ಜಾನಪದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದೇವೆ. ಆಧುನಿಕ ಕಾಲದಲ್ಲೂ ಅದೂ ಉಳಿದಿದೆ ಎಂದರೆ ಅದು ಜಾನಪದಕ್ಕಿರುವ ಗಟ್ಟಿತನಕ್ಕೆ ಸಾಕ್ಷಿ. ಜಾನಪದ ಕಲೆಗಳನ್ನು ಪೋಷಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ’ ಎಂದರು.

ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಅತಿಥಿಗಳನ್ನು ಸ್ವಾಗತಿಸಿದರು. ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶ ಅನ್ನದಾನೇಶ್ವರನಾಥ ಸ್ವಾಮೀಜಿ, ಆಡಳಿತ ಮಂಡಳಿ ಸದಸ್ಯರಾದ ಸುಜಾತ ವಿಶುಕುಮಾರ್, ಪರಿಷತ್ತಿನ ಬೆಂಗಳೂರು ನಗರ ಘಟಕದ ಅಧ್ಯಕ್ಷ ಟಿ. ತಿಮ್ಮೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಸೇರಿದಂತೆ ಕಲಾವಿದರು ಹಾಗೂ ಇತರರು ಇದ್ದರು.

ಲೋಕೋತ್ಸವದಲ್ಲಿ ಗಮನ ಸೆಳೆದ ಜಾನಪದ ಕಲಾ ಪ್ರದರ್ಶನ
ಲೋಕೋತ್ಸವದಲ್ಲಿ ಪ್ರದರ್ಶನ ನೀಡಲು ತಮ್ಮ ಸರದಿಗಾಗಿ ಕಾದು ಕುಳಿತಿದ್ದ ವಿದ್ಯಾರ್ಥಿ ಜಾನಪದ ಕಲಾವಿದರು
ಲೋಕೋತ್ಸವದಲ್ಲಿ ಜಾನಪದ ಕಲಾವಿದರೊಬ್ಬರ ನೃತ್ಯ ಗಮನ ಸೆಳೆಯಿತು
ಲೋಕೋತ್ಸವದಲ್ಲಿ ಗಮನ ಸೆಳೆದ ಜಾನಪದ  ನೃತ್ಯ
ಮನಸೂರೆಗೊಳಿಸಿದ ಯಕ್ಷಗಾನ ನೃತ್ಯ ಪ್ರದರ್ಶನ
ಲೋಕೋತ್ಸವದಲ್ಲಿ ಪ್ರದರ್ಶನ ನೀಡಲು ಕಾದು ಕುಳಿತಿದ್ದ ಜಾನಪದ ಕಲಾವಿದರು
ಲೋಕೋತ್ಸವದಲ್ಲಿ ಜಾನಪದ ಕಲಾ ಪ್ರದರ್ಶನವನ್ನು ಕಣ್ತುಂಬಿಕೊಂಡ ಜನ
ಲೋಕೋತ್ಸವದಲ್ಲಿ ವಿದ್ಯಾರ್ಥಿನಿಯರ ಜಾನಪದ ನೃತ್ಯ ಗಮನ ಸೆಳೆಯಿತು
ಜಾನಪದ ಅಂದರೆ ಜನಪರ. ಜಾನಪದ ಕಲೆಗಳು ಕೇವಲ ಮನೋರಂಜನೆಯ ಮಾಧ್ಯಮವಲ್ಲ.ಅವು ನಮ್ಮ ನೆಲದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕನ್ನಡಿಗಳು. ಜಾನಪದ ಲೋಕಕ್ಕೆ ಅನುದಾನ ಹೆಚ್ಚಿಸುವ ವಿಚಾರವನ್ನು ಸಿ.ಎಂ ಗಮನಕ್ಕೆ ತರಲಾಗುವುದು
ಕೆ.ವಿ. ಪ್ರಭಾಕರ್ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ

‘ಅತಂತ್ರ ಸ್ಥಿತಿಯಲ್ಲಿ ಅಲೆಮಾರಿ ಕಲಾ ಪ್ರಕಾರ’

‘ಸುಮಾರು 90 ಅಲೆಮಾರಿ ಕಲಾ ಪ್ರಕಾರಗಳು ಈಗ ಅತಂತ್ರ ಸ್ಥಿತಿಯಲ್ಲಿವೆ. ಈ ಪ್ರಕಾರಗಳನ್ನು ಜಾನಪದ ಕಲೆಗಳಿಗೆ ಜೋಡಿಸಿ ಶಿಕ್ಷಣ ರೂಪಕ್ಕೆ ತರಬೇಕಿದೆ. ನಾಗೇಗೌಡರು ಅಂದು ಹಾಕಿಕೊಟ್ಟ ಪಠ್ಯಕ್ರಮವೇ ಇಂದು ವಿಶ್ವಸಂಸ್ಥೆಯು ಜಾನಪದ ಲೋಕವನ್ನು ಗುರುತಿಸಿ ಗೌರವಿಸಲು ಸಾಧ್ಯವಾಗಿದೆ. ಜಾನಪದವು ಪಠ್ಯಕ್ರಮಗಳನ್ನು ನಾವು ಹೆಚ್ಚು ರೂಪಿಸಿ ಅದರಲ್ಲಿ ಅಲೆಮಾರಿ ಕಲಾ ಪ್ರಕಾರಗಳನ್ನು ಸೇರಿಸಬೇಕು. ವಿದ್ಯಾರ್ಥಿಗಳು ಜಾನಪದದ ಪ್ರಕಾರಗಳನ್ನು ತಮ್ಮದಾಗಿಸಿಕೊಂಡು ಕಲೆಗಳನ್ನು ಉಳಿಸಿ ಬೆಳೆಸಬೇಕು’ ಎಂದು ಟಿ.ಎಸ್. ನಾಗಾಭರಣ ಸಲಹೆ ನೀಡಿದರು.

ಜಾನಪದ ಕಲೆಗಳ ರಸದೌತಣ ಉದ್ಘಾಟನಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಮಧ್ಯಾಹ್ನ ಶುರುವಾದ ವಿವಿಧ ಜಾನಪದ ಕಲಾ ಪ್ರದರ್ಶನಗಳು ಪ್ರೇಕ್ಷಕರಿಗೆ ರಸದೌತಣ ಬಡಿಸಿದವು. ನಗಾರಿ ಮೇಳ ವೀರಾಗಾಸೆ ಕುಣಿತ ಸೋಮನ ಕುಣಿತ ಕಂಗಿಲು ಕುಣಿತ ತಮಟೆ ವಾದನ ಬುಡಕಟ್ಟು ಹಾಡಿಗೆ ನೃತ್ಯ ಸಂಬಾಳ ವಾದನ ಪೂಜಾ ಕುಣಿತ ಕೋಲಾಟ ಕರಪಾಲ ಮೇಳ ಗಾರುಡಿಗೊಂಬೆ ಕೊಂಬು ಕಹಳೆ ಗೊರವರ ಕುಣಿತ ವೀರಭದ್ರ ಕುಣಿತ ನೀಲಗಾರರ ಪದ ಯಕ್ಷಗಾನ ವೇಷ ಪಟ ಕುಣಿತ ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಬಂದಿದ್ದ ವಿದ್ಯಾರ್ಥಿಗಳ ತಂಡಗಳು ನೀಡಿದ ಜಾನಪದ ಕಲಾ ಪ್ರದರ್ಶನವು ಪ್ರೇಕ್ಷಕರಿಗೆ ಮುದ ನೀಡಿತು.

ಲೋಕೋತ್ಸವದಲ್ಲಿ ಇಂದು

* ಬೆಳಿಗ್ಗೆ 10.30: ಯುವಜನರಲ್ಲಿ ಜಾನಪದ ಗಾಯನ ಮತ್ತು ಕಲೆಗಳ ಸಂವರ್ಧನೆ’ ಎಂಬ ವಿಷಯ ಕುರಿತು ಚರ್ಚೆ-ಸಂವಾದ ಗೋಷ್ಠಿ

* ಮಧ್ಯಾಹ್ನ 1.30: ಜಾನಪದ ಗೀತ ಗಾಯನೋತ್ಸವ

* ಸಂಜೆ 4: ಬುಡಕಟ್ಟು ಕಲೆಗಳಾದ ಸಿದ್ದಿಯರ ಡಮಾಮಿ ನೃತ್ಯ ಮತ್ತು ಸೋಲಿಗರ ನೃತ್ಯ ಪ್ರದರ್ಶನ 

* ಸಂಜೆ 4.30: ಜನಪ್ರಿಯ ಗಾಯಕರಿಂದ ಜಾನಪದ ಗೀತ ಸಂಭ್ರಮ

* ಸಂಜೆ 5.30: ಜಾನಪದ ಕಲಾವಿದರು ಮತ್ತು ವಿದ್ವಾಂಸರಿಗೆ ಪ್ರಶಸ್ತಿ ಪ್ರದಾನ

* ರಾತ್ರಿ 7.30: ಮಕ್ಕಳ ಮೂಡಲಪಾಯ ಯಕ್ಷಗಾನ ‘ಕರ್ಣಾರ್ಜುನರ ಕಾಳಗ’ ಪ್ರಸಂಗ ಪ್ರದರ್ಶನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.