ADVERTISEMENT

ಪಂಚತಾರಾ ಹೋಟೆಲ್‌ಗಳಲ್ಲಿ ಜನಪದ ಕಲಾವಿದರಿಗೂ ಅವಕಾಶ: ಎಸ್. ರಂಗಪ್ಪ

ಪ್ರವಾಸಿ ಜಾನಪದ ಲೋಕೋತ್ಸವಕ್ಕೆ ಸಂಭ್ರಮದ ಚಾಲನೆ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಮಾತು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 16:30 IST
Last Updated 17 ಫೆಬ್ರುವರಿ 2020, 16:30 IST
ಪ್ರವಾಸಿ ಜಾನಪದ ಲೋಕೋತ್ಸವದ ಅಂಗವಾಗಿ ನಡೆದ ಮೆರವಣಿಗೆ ಸಂದರ್ಭ ಕಲಾವಿದರ ತಮಟೆ ಸದ್ದಿಗೆ ಜಾನಪದ ಪರಿಷತ್‌ ಅಧ್ಯಕ್ಷ ಟಿ. ತಿಮ್ಮೇಗೌಡ ಹೆಜ್ಜೆ ಹಾಕಿದ ಕ್ಷಣ
ಪ್ರವಾಸಿ ಜಾನಪದ ಲೋಕೋತ್ಸವದ ಅಂಗವಾಗಿ ನಡೆದ ಮೆರವಣಿಗೆ ಸಂದರ್ಭ ಕಲಾವಿದರ ತಮಟೆ ಸದ್ದಿಗೆ ಜಾನಪದ ಪರಿಷತ್‌ ಅಧ್ಯಕ್ಷ ಟಿ. ತಿಮ್ಮೇಗೌಡ ಹೆಜ್ಜೆ ಹಾಕಿದ ಕ್ಷಣ   

ರಾಮನಗರ: ‘ ರಾಜ್ಯದಲ್ಲಿನ ಪಂಚತಾರಾ ಹೋಟೆಲ್‌ಗಳಲ್ಲಿ ಪಾಪ್‌ ಗಾಯಕರನ್ನು ಕರೆತಂದು ಹಾಡಿಸುವಂತೆಯೇ ಜನಪದ ಕಲಾವಿದರಿಗೂ ಅವಕಾಶ ಕಲ್ಪಿಸಲು ಸರ್ಕಾರದಿಂದ ಪ್ರಯತ್ನ ನಡದಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ತಿಳಿಸಿದರು.

ಇಲ್ಲಿನ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್‌, ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಬೆಳ್ಳಿ ಹಬ್ಬ ಹಾಗೂ ಪ್ರವಾಸಿ ಜಾನಪದ ಲೋಕೋತ್ಸವದಲ್ಲಿ ಅವರು ಮಾತನಾಡಿದರು. ‘ರಾಜಸ್ಥಾನದ ಜೈಪುರದಲ್ಲಿ ಸಾಂಸ್ಕೃತಿಕ ಕೇಂದ್ರವಿದೆ. ಅಲ್ಲಿ ಪ್ರತಿನಿತ್ಯ 50–60 ಕಲಾ ತಂಡಗಳು ಪ್ರದರ್ಶನ ನೀಡುತ್ತವೆ. ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಅದೇ ಮಾದರಿಯಲ್ಲಿ ಜಾನಪದ ಲೋಕವನ್ನು ಕಲಾ ಕೇಂದ್ರವಾಗಿ ಪರಿವರ್ತಿಸಬಹುದು. ಇದರಿಂದ ವಾರಾಂತ್ಯದಲ್ಲಿ ಮೈಸೂರು–ಬೆಂಗಳೂರು ನಡುವೆ ಪ್ರಯಾಣಿಸುವವರು ಕಲೆಯ ಸೊಬಗು ಸವಿಯಲು ಅವಕಾಶ ಸಿಗಲಿದೆ’ ಎಂದರು.

ಸಮಯ ತಗ್ಗಿಸಿ: ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಮಾತನಾಡಿ ‘ಕಾರ್ಯಕ್ರಮಗಳಲ್ಲಿ ನಾಡಗೀತೆ ಹಾಡುವ ಅವಧಿಯನ್ನು ಕಡಿತಗೊಳಿಸಬೇಕು. ಸರ್ಕಾರ ಯಾರ ಮರ್ಜಿಗೂ ಒಳಗಾಗಬಾರದು’ ಎಂದು ಒತ್ತಾಯಿಸಿದರು.

ADVERTISEMENT

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಅಧ್ಯಕ್ಷ ಡಾ. ಹಂಪ ನಾಗರಾಜಯ್ಯ ಲೋಕೋತ್ಸವವನ್ನು ಉದ್ಘಾಟಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ, ಪರಿಷತ್ತಿನ ಟ್ರಸ್ಟಿ ಆದಿತ್ಯ ನಂಜರಾಜ್‌, ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರನಾಥ ಸ್ವಾಮೀಜಿ, ಸಾಹಿತಿ ಡಾ. ಮೀನಾಕ್ಷಿ ಬಾಳಿ, ಹಿ.ಶಿ. ರಾಮಚಂದ್ರೇಗೌಡ ವೇದಿಕೆಯಲ್ಲಿ ಇದ್ದರು.

ಹೆಜ್ಜೆ ಹಾಕಿದ ಅತಿಥಿಗಳು

ಜಾನಪದ ಲೋಕದ ಆವರಣದಲ್ಲಿ ಸೋಮವಾರ ದಿನವಿಡೀ ನೃತ್ಯ ಪ್ರದರ್ಶನಗಳು ನಡೆದವು. ಈ ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಬೀಸು ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ಪಟ ಕುಣಿತ, ಲಂಬಾಣಿ ಸಮುದಾಯ ನೃತ್ಯಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದ ಮೆರವಣಿಗೆ ಸಂದರ್ಭ ಪ್ರೇಕ್ಷಕರ ಜತೆಗೆ ಟಿ. ತಿಮ್ಮೇಗೌಡ, ಡಾ. ಹಂಪ ನಾಗರಾಜಯ್ಯ ತಮಟೆ ಸದ್ದಿಗೆ ಕುಣಿದದ್ದು ವಿಶೇಷವಾಗಿತ್ತು.

ಕರಕುಶಲ ವಸ್ತುಗಳ ಪ್ರದರ್ಶನ ಮೇಳವೂ ಇದೇ ಸಂದರ್ಭ ಉದ್ಘಾಟನೆಗೊಂಡಿತು. ಮಂಗಳವಾರ ಇದೇ ವೇದಿಕೆಯಲ್ಲಿ ನಾಡಿನ ವಿವಿಧ ಕಲಾವಿದರಿಗೆ ಜಾನಪದ ಲೋಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.