ADVERTISEMENT

ಪ್ರವಾಸಿಗರನ್ನು ಸೆಳೆವ ಜಾನಪದ ಲೋಕ

ವರ್ಷಕ್ಕೆ ಲಕ್ಷಕ್ಕೂ ಅಧಿಕ ಮಂದಿ ಭೇಟಿ: ಬೆಳ್ಳಿಹಬ್ಬದ ಸಂಭ್ರಮ

ಆರ್.ಜಿತೇಂದ್ರ
Published 15 ಫೆಬ್ರುವರಿ 2020, 21:56 IST
Last Updated 15 ಫೆಬ್ರುವರಿ 2020, 21:56 IST
ಜಾನಪದ ಲೋಕದಲ್ಲಿ ಕಣ್ಮನ ಸೆಳೆಯುವ ಕಲಾಕೃತಿ
ಜಾನಪದ ಲೋಕದಲ್ಲಿ ಕಣ್ಮನ ಸೆಳೆಯುವ ಕಲಾಕೃತಿ   

ರಾಮನಗರ: ಸದಾ ಹಸಿರು ಹೊದ್ದು ತಂಗಾಳಿ ಬೀಸುವ ಸಾಲು ಮರಗಳು, ನೋಡುಗರ ಚಿತ್ತವನ್ನು ಕದಿಯುವ ನಾನಾ ಬಗೆಯ ಕಲಾಕೃತಿಗಳು, ಜಾನಪದ ಸಂಸ್ಕೃತಿಯ ಬಿಂಬಗಳು...

ಇದು ಇಲ್ಲಿನ ಅರ್ಚಕರಹಳ್ಳಿ ಬಳಿ ಇರುವ ಜಾನಪದ ಲೋಕದ ಚಿತ್ರಣ. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಈ ಪ್ರವಾಸಿ ತಾಣವು ವರ್ಷದ ಎಲ್ಲ ದಿನವೂ ಪ್ರವಾಸಿಗರನ್ನು ತನ್ನತ್ತ ಸೆಳೆಯ ತೊಡಗಿದೆ. ದಿನ ಕಳೆದಂತೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆಯೂ ದುಪ್ಪಟ್ಟಾಗುತ್ತಿದೆ. ಸದ್ಯ ವರ್ಷಕ್ಕೆ ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬಂದು ಹೋಗುತ್ತಿದ್ದಾರೆ.

ರಾಜಧಾನಿ ಬೆಂಗಳೂರಿಗೆ ಸಮೀಪ ಇರುವ ಹತ್ತು ಹಲವು ಪ್ರವಾಸಿ ತಾಣ ಗಳು ರಾಮನಗರ ಜಿಲ್ಲೆಯಲ್ಲಿವೆ. ಅವುಗಳಲ್ಲಿ ಜಾನಪದ ಲೋಕಕ್ಕೆ ಮಹತ್ವದ ಸ್ಥಾನವಿದೆ. 1994ರ ಮಾರ್ಚ್‌ 12ರಂದು ರಾಮನಗರ–ಚನ್ನಪಟ್ಟಣದ ನಡುವೆ ಅರ್ಚಕರ
ಹಳ್ಳಿ ಬಳಿ ಆರಂಭಗೊಂಡ ಜಾನಪದ ಲೋಕಕ್ಕೀಗ ಬೆಳ್ಳಿಹಬ್ಬದ ಸಂಭ್ರಮ.

ADVERTISEMENT

25 ವರ್ಷಗಳಲ್ಲಿ ಲೋಕ ಸಾಕಷ್ಟು ಬೆಳವಣಿಗೆ ಕಂಡಿದೆ. ಮನೋ ರಂಜನೆಯ ತಾಣವಾಗಿ ಮಾತ್ರ ಉಳಿಯದೇ ಜಾನಪದ ಕುರಿತು ನಿರಂತ ರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಚಟುವಟಿಕೆಗಳ ಮೂಲಕ ಜನಪದ ಕಲೆ–ಸಂಸ್ಕೃತಿಯನ್ನು ಜೀವಂತ ಇರಿಸುವ ಪ್ರಯತ್ನ ನಡೆದಿದೆ.

ಏನಿದೆ ಇಲ್ಲಿ?: ಚಿತ್ರಕುಟೀರ, ಲೋಕ ಮಾತಾ ಮಂದಿರ, ಲೋಕಮಹಲ್‌, ಲೋಕಸಿರಿ, ಶಿಲ್ಪಮಾಳ, ಆಯಗಾರರ ಮಾಳ, ದೀವರು–ಹಲಸರ ಮಾಳ ಎಂಬ 7 ಬಗೆಯ ವಸ್ತು ಸಂಗ್ರಹಾಲಯ ಇಲ್ಲಿದೆ. 6 ಸಾವಿರಕ್ಕೂ ಹೆಚ್ಚು ಪುರಾತನ ಕಲಾಕೃತಿ ಮತ್ತು ಸಾಮಗ್ರಿಗಳನ್ನು ವೀಕ್ಷಿಸಲು ಸಾಕಷ್ಟು ಸಮಯ ಬೇಕು. ಇದರೊಟ್ಟಿಗೆ ದಸರಾ ಗೊಂಬೆಗಳ ಪ್ರದರ್ಶನವನ್ನೂ ಕಾಣಬಹುದಾಗಿದೆ. ಕಲಾವಿದರಿಗಾಗಿ ’ದೊಡ್ಡಮನೆ’ ಇದೆ.

ಇಂದು ಬೆಳ್ಳಿಹಬ್ಬ
ಕರ್ನಾಟಕ ಜಾನಪದ ಪರಿಷತ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಜಾನಪದ ಲೋಕ ಬೆಳ್ಳಿಹಬ್ಬ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ 16ರಂದು ಬೆಳಿಗ್ಗೆ 9ರಿಂದ ರಾತ್ರಿ 9ರ ವರೆಗೆ ನಡೆಯಲಿದೆ.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಜಾನಪದ ಜಗತ್ತು ಬೆಳ್ಳಿ ಹಬ್ಬ ಸಂಚಿಕೆ ಬಿಡುಗಡೆ ಮಾಡುವರು.

*
ನಾಗೇಗೌಡರು ಸ್ಥಾಪಿಸಿದ ಜಾನಪದ ಲೋಕ ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಕಾಣುತ್ತಲೇ ಇದೆ. ಹಳ್ಳಿ ಸೊಗಡು, ಕಲೆ–ಸಂಸ್ಕೃತಿ ಹುಡುಕುವವರಿಗೆ ಇದು ಪ್ರಶಸ್ತ್ಯ ತಾಣ.
-ಟಿ. ತಿಮ್ಮೇಗೌಡಅಧ್ಯಕ್ಷ, ಕರ್ನಾಟಕ ಜಾನಪದ ಪರಿಷತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.