ADVERTISEMENT

ಎಲ್ಲ ಪಕ್ಷದಲ್ಲೂ ಕುಟುಂಬ ರಾಜಕಾರಣ ಇದ್ದದ್ದೇ: ನಿಖಿಲ್ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2022, 9:25 IST
Last Updated 24 ಡಿಸೆಂಬರ್ 2022, 9:25 IST
ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ
ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ   

ರಾಮನಗರ: ಎಲ್ಲ ಪಕ್ಷಗಳಲ್ಲೂ ಇಂದು ಕುಟುಂಬ ರಾಜಕಾರಣ ಇದೆ. ಬಿಜೆಪಿ, ಕಾಂಗ್ರೆಸ್ ಇದಕ್ಕೆ ಹೊರತಾಗಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.

ರಾಮನಗರದಲ್ಲಿ ಶನಿವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ' ಬಿಜೆಪಿಯಲ್ಲಿ ಯಡಿಯೂರಪ್ಪ, ಈಶ್ವರಪ್ಪನವರ ಮಕ್ಕಳಿದ್ದಾರೆ‌‌ ಕಾಂಗ್ರೆಸ್ ನಲ್ಲಿ ಡಿ‌.ಕೆ. ಶಿವಕುಮಾರ್ ಮನೆಯಲ್ಲೇ ನಾಲ್ಕು ಮಂದಿ ಸಂಸದ-ಶಾಸಕರಾಗಿದ್ದಾರೆ. ಹೀಗಾಗಿ ರಾಜಕೀಯದಲ್ಲಿ ಕುಟುಂಬ ರಾಜಕಾರಣದ ಪ್ರಶ್ನೆಯೇ ಬರುವುದಿಲ್ಲ ಎಂದರು.

ರಾಮನಗರ ಜಿಲ್ಲೆಯಲ್ಲಿ ಕುಮಾರಸ್ವಾಮಿ ಅವರದ್ದು ವಂಶಪಾರಂಪರ್ಯ ರಾಜಕಾರಣ ಎಂಬ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ ' ಈ ಹಿಂದೆ ನಾವು ರಾಮನಗರದಲ್ಲಿ ರಾಜು ಎಂಬುವರಿಗೆ ಟಿಕೆಟ್ ನೀಡಿದ್ದೆವು. ಆ ವ್ಯಕ್ತಿ ಕೃತಜ್ಞತೆ ಮರೆತು ಕಾಂಗ್ರೆಸ್ ಸೇರಿಕೊಂಡರು. ಚನ್ನಪಟ್ಟಣದಲ್ಲಿ ಈ ಹಿಂದೆ ಸಿಂ.ಲಿಂ. ನಾಗರಾಜು ಅವರಿಗೆ ಟಿಕೆಟ್ ನೀಡಿದ್ದೆವು ಎಂದು ಸಮರ್ಥಿಸಿಕೊಂಡರು.

ADVERTISEMENT

' ಚನ್ನಪಟ್ಟಣದಲ್ಲಿ ನಡೆದ ಜೆಡಿಎಸ್ ಸಮಾವೇಶದಿಂದ ಯೋಗೇಶ್ವರ್ ಹತಾಶರಾಗಿದ್ದಾರೆ. ಹಣ ಕೊಟ್ಟರೂ ರಾಷ್ಟ್ರೀಯ ಪಕ್ಷಗಳ ಕಾರ್ಯಕ್ರಮಗಳಿಗೆ ಜನ ಸೇರುತ್ತಿಲ್ಲ. ಆದರೆ ಅದೇ ಜನ ಮಧ್ಯರಾತ್ರಿವರೆಗೂ ನಿಂತು ಕುಮಾರಣ್ಣನ ಸ್ವಾಗತ ಮಾಡುತ್ತಿದ್ದಾರೆ' ಎಂದರು.

ಯೋಗೇಶ್ವರ್ 18 ವರ್ಷ ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿದ್ದರೂ ಕ್ಷೇತ್ರದ ರಸ್ತೆಗಳು ಅಭಿವೃದ್ದಿ ಆಗಿರಲಿಲ್ಲ. ಈಗ ಪ್ರತಿ ರಸ್ತೆ ಅಚ್ಚುಕಟ್ಟಾಗಿದೆ. ಕುಮಾರಸ್ವಾಮಿ ಕಾಲದಲ್ಲಿ 130 ಕೆರೆಗಳು ತುಂಬಿವೆ ಎಂದರು.

ರಾಜ್ಯದಲ್ಲಿ ಬಿಜೆಪಿಯವರು ಸಹ ಜನಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಕೋವಿಡ್ ವಿಚಾರವಾಗಿ ಸರ್ಕಾರ ಏನೇ ನಿಯಮ ಮಾಡಿದರೂ ಅದು ಎಲ್ಲರಿಗೂ ಅನ್ವಯ ಆಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.