ADVERTISEMENT

ಡಾ.ಮಂಜುನಾಥ್ ಗೆಲ್ಲಿಸಿ: ನಿಖಿಲ್‌ ಮನವಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 6:15 IST
Last Updated 23 ಮಾರ್ಚ್ 2024, 6:15 IST
<div class="paragraphs"><p>ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರು ಗ್ರಾಮದ ಬಳಿಯ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಾಜು, ಇತರರು ಹಾಜರಿದ್ದರು</p></div>

ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರು ಗ್ರಾಮದ ಬಳಿಯ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಾಜು, ಇತರರು ಹಾಜರಿದ್ದರು

   

ಚನ್ನಪಟ್ಟಣ: ಸರಳ, ಸಜ್ಜನ ವ್ಯಕ್ತಿ, ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಅವರನ್ನು ಗೆಲ್ಲಿಸಲು ಪಕ್ಷದ ಕಾರ್ಯಕರ್ತರು ಮುಂದಾಗಬೇಕು ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕರೆ ನೀಡಿದರು.

ತಾಲ್ಲೂಕಿನ ಕೂಡ್ಲೂರು ಗ್ರಾಮದ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ಶುಕ್ರವಾರ ನಡೆದ ತಾಲ್ಲೂಕು ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಂಜುನಾಥ್ ಅವರು ಸುಮಾರು 8 ಲಕ್ಷ ಮಂದಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅವರ ಸೇವೆಯ ಬಗ್ಗೆ ಜನತೆ ಮಾತನಾಡುತ್ತಿದ್ದಾರೆ. ಅವರ ಗೆಲುವು ನಿಶ್ಚಿತ ಎಂದರು.

ADVERTISEMENT

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೈತ್ರಿಧರ್ಮ ಪಾಲಿಸಲಿಲ್ಲ. ತುಮಕೂರು ಕ್ಷೇತ್ರದಲ್ಲಿ ದೇವೇಗೌಡರನ್ನು, ಮಂಡ್ಯದಲ್ಲಿ ನನ್ನನ್ನು ಸೋಲಿಸಿದರು. ಆ ಸೇಡನ್ನು ತೀರಿಸಿಕೊಳ್ಳುವ ಅವಕಾಶ ಈಗ ನಮಗೆ ದೊರೆತಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮತದಾರರಿಗೆ ಆಮಿಷ ಒಡ್ಡುತ್ತಿದೆ. ಕಳೆದ ಇಪ್ಪತ್ತು ದಿನಗಳಿಂದ ಸುಮಾರು 10 ಲಕ್ಷ ಕುಕ್ಕರ್ ಅರ್ಡರ್ ಮಾಡಿದ್ದಾರೆ. ಈಗಾಗಲೇ 4 ರಿಂದ 5 ಲಕ್ಷ ಕುಕ್ಕರ್ ಯಶಸ್ವಿಯಾಗಿ ಹಂಚಿದ್ದಾರೆ. ಮೊನ್ನೆ ಸೀರೆ, ತವಾಗಳನ್ನು ಕೂಡಾ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕಾಂಗ್ರೆಸ್ ಆಮಿಷಗಳನ್ನು ಒಡ್ಡಿ ಚುನಾವಣೆ ನಡೆಸುತ್ತಿದೆ. ಆದರೆ ಪ್ರಜ್ಞಾವಂತ ಮತದಾರರು ಯೋಚನೆ ಮಾಡಿ ಮತ ಚಲಾಯಿಸಲಿದ್ದಾರೆ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ತಾಲ್ಲೂಕು ಘಟಕದ ಜಯಮುತ್ತು, ನಗರ ಘಟಕದ ಅಧ್ಯಕ್ಷ ಅಜಯ್ ಕುಮಾರ್, ಮುಖಂಡರಾದ ಗೋವಿಂದಹಳ್ಳಿ ನಾಗರಾಜು, ಹಾಪ್ ಕಾಮ್ಸ್ ದೇವರಾಜು, ಪಂಚಮಿ ಪ್ರಸನ್ನ, ಕುಕ್ಕೂರುದೊಡ್ಡಿ ಜಯರಾಂ, ಇತರರು ಭಾಗವಹಿಸಿದ್ದರು.

ಎಚ್‌ಡಿಕೆ ಗುಣಮುಖ:

ನಾಳೆ ಮನೆಗೆ  ಚನ್ನಪಟ್ಟಣ: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷೆ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಡಾ.ಸಿ.ಎನ್.ಮಂಜುನಾಥ್ ಹಾಗೂ ಹಿರಿಯ ವೈದ್ಯ ಸಾಯಿ ಸತೀಶ್ ನೇತೃತ್ವದಲ್ಲಿ ಕುಮಾರಸ್ವಾಮಿ ಅವರಿಗೆ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆ ನಡೆದಿದೆ. ರಾಜ್ಯದ ಜನರ ಆಶೀರ್ವಾದದಿಂದ ಅವರು ಗುಣಮುಖರಾಗಿದ್ದಾರೆ ಎಂದರು.‌ ಕುಮಾರಸ್ವಾಮಿ ಅವರು ಏಪ್ರಿಲ್‌ ಮೊದಲ ವಾರದಿಂದಲೇ ಚುನಾವಣಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಲಿದ್ದಾರೆ. ಆ ಬಳಿಕ ಡಾ.ಮಂಜುನಾಥ್ ಅವರ ನಾಮಪತ್ರ ಸಲ್ಲಿಕೆಗೆ ದಿನಾಂಕ ನಿಗದಿ ಬಗ್ಗೆ ಸಭೆ ಮಾಡಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.