ADVERTISEMENT

ಎಚ್‌ಡಿಕೆ ಆಸ್ಪತ್ರೆ ಸೇರಿದ್ದು ನಾಟಕವೇ?: ಜಯಕಾಂತ್

ಪರಮೇಶ್ವರ್ ಬಗ್ಗೆ ಕುಮಾರಸ್ವಾಮಿ ಟೀಕೆ: ಕಾಂಗ್ರೆಸ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 2 ಮೇ 2023, 4:24 IST
Last Updated 2 ಮೇ 2023, 4:24 IST
ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ಜಯಕಾಂತ್ ಮಾತನಾಡಿದರು
ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ಜಯಕಾಂತ್ ಮಾತನಾಡಿದರು   

ರಾಮನಗರ: ಕಾಂಗ್ರೆಸ್ ನಾಯಕ ಡಾ. ಜಿ. ಪರಮೇಶ್ವರ್‌ ಅವರು ಕಲ್ಲೇಟಿನಿಂದ ಗಾಯಗೊಂಡ ಪ್ರಕರಣ ನಾಟಕ ಎನ್ನುವುದಾದರೆ, ಜ್ವರ ಎಂದು ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದೂ ನಾಟಕವೇ ಎಂದು ದಲಿತ ಮುಖಂಡ ಜಯಕಾಂತ್ ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪದೇ ಪದೇ ತಮ್ಮ ದಲಿತ ವಿರೋಧಿ ನೀತಿಯನ್ನು ಬಹಿರಂಗ ಪಡಿಸುತ್ತಿದ್ದಾರೆ. ಈ ಹಿಂದೆ, ಸಿ.ಎಂ.ಇಬ್ರಾಹಿಂ ಮುಖ್ಯಮಂತ್ರಿ ಯಾಕಾಗಬಾರದು, ಅವರೇನು ಅಸ್ಪೃಶ್ಯರ ಎಂದು ಕೇಳಿ ದಲಿತ ಸಮುದಾಯವನ್ನು ಅವಮಾನಿಸಿದ್ದರು. ಈಗ ನಮ್ಮ ಸಮುದಾಯದ ನಾಯಕರ ಮೇಲೆ ನಡೆದ ಹಲ್ಲೆಯನ್ನು ನಾಟಕ ಎನ್ನುತ್ತಿದ್ದಾರೆ. ಹಾಗಿದ್ದರೆ, ಮೈಸೂರಿನಲ್ಲಿ ನಡೆದ ಜೆಡಿಎಸ್ ಸಮಾವೇಶಕ್ಕೆ ಎಚ್.ಡಿ. ದೇವೇಗೌಡರನ್ನು ವೀಲ್‌ಚೇರ್‌ ಮೇಲೆ ಕರೆತಂದಿದ್ದನ್ನು ನಾಟಕ ಎನ್ನಬಹುದೇ? ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ತಮ್ಮ ಅಧಿಕಾರವಧಿಯಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಸಭೆ ಮಾಡಲಿಲ್ಲ, ದಲಿತರ ಸಮಸ್ಯೆ ಆಲಿಸಲಿಲ್ಲ. ಕೆ.ಡಿ.ಪಿ ಸಭೆಗಳನ್ನು ನಡೆಸಲಿಲ್ಲ ಎಂದು ದೂರಿದರು.

ADVERTISEMENT

ಮತ್ತೊಬ್ಬ ಮುಖಂಡ ಶಿವಶಂಕರ್ ಮಾತನಾಡಿ, ಕುಮಾರಸ್ವಾಮಿ ಪ್ರಜ್ಞೆ ಇಟ್ಟು ಕೊಂಡು ಮಾತನಾಡಬೇಕು. ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಪ್ರತಿಭಟನೆ ಮಾಡಿಲ್ಲ. ಅವರು ಕ್ಷಮೆ ಕೇಳದೇ ಇದ್ದರೆ ಚುನಾವಣೆಯ ನಂತರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಾ.ಪಂ. ಮಾಜಿ ಅಧ್ಯಕ್ಷ ಆರ್. ಜಯಚಂದ್ರ ಮಾತನಾಡಿ, ಚುನಾವಣೆಯಲ್ಲಿ ತಮ್ಮ ಪಕ್ಷದ ಪರ ಪ್ರಚಾರ ಮಾಡುವಂತೆ ಕುಮಾರಸ್ವಾಮಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರನ್ನು ಆಹ್ವಾನಿಸಿದ್ದರು. ಆದರೆ ಕುಮಾರಸ್ವಾಮಿ ಅವರ ದಲಿತ ವಿರೋಧಿ ನೀತಿಗಳ ಬಗ್ಗೆ ನಾವೆಲ್ಲ ಪ್ರಕಾಶ್ ಅಂಬೇಡ್ಕರ್ ಅವರ ಗಮನಕ್ಕೆ ತಂದ ನಂತರ ಪ್ರಚಾರದಲ್ಲಿ ಭಾಗವಹಿಸುವುದನ್ನು ಕೈ ಬಿಟ್ಟಿದ್ದಾರೆ ಎಂದರು.

ಗುಡ್ಡೆ ವೆಂಕಟೇಶ್, ದಾಸ್, ಶಿವಲಿಂಗಯ್ಯ, ಚಂದ್ರಪ್ಪ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.