ADVERTISEMENT

ರಾಮನಗರ: ಇಂದಿನಿಂದ ಜಂಟಿ ಅಳತೆ ಪ್ರಮಾಣೀಕರಣ ಕಾರ್ಯಾರಂಭ

ಬಿಡದಿ ಸಮಗ್ರ ಉಪನಗರ ಯೋಜನೆ: 15 ತಂಡಗಳಿಂದ ನಡೆಯಲಿದೆ ಮೊಬೈಲ್ ಆ್ಯಪ್ ಆಧಾರಿತ ಪ್ರಮಾಣೀಕರಣ

ಓದೇಶ ಸಕಲೇಶಪುರ
Published 11 ಸೆಪ್ಟೆಂಬರ್ 2025, 3:14 IST
Last Updated 11 ಸೆಪ್ಟೆಂಬರ್ 2025, 3:14 IST
ಬಿಡದಿಯಲ್ಲಿ ನಿರ್ಮಾಣವಾಗಲಿರುವ ‌ಗ್ರೇಟರ್ ಬೆಂಗಳೂರು ಸಮಗ್ರ ಉಪನಗರದ ಪಕ್ಷಿ ನೋಟ
ಬಿಡದಿಯಲ್ಲಿ ನಿರ್ಮಾಣವಾಗಲಿರುವ ‌ಗ್ರೇಟರ್ ಬೆಂಗಳೂರು ಸಮಗ್ರ ಉಪನಗರದ ಪಕ್ಷಿ ನೋಟ   

ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬಿಡದಿಯಲ್ಲಿ ನಿರ್ಮಾಣವಾಗಲಿರುವ ‌ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಗೆ ಸಂಬಂಧಿಸಿದಂತೆ, ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದಿನಿಂದ ಜಂಟಿ ಅಳತೆ ಪ್ರಮಾಣೀಕರಣ (ಜೆಎಂಸಿ) ಕಾರ್ಯ ಆರಂಭವಾಗಲಿದೆ.

ಭೂ ಸ್ವಾಧೀನ ಪ್ರಕ್ರಿಯೆ ಹಾಗೂ ಪರಿಹಾರ ನಿರ್ಧಾರದಲ್ಲಿ ಜೆಎಂಸಿ ಮಹತ್ತರ ಪಾತ್ರ ವಹಿಸಲಿದೆ. ಅದಕ್ಕಾಗಿ ಇಡೀ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದಕ್ಕಾಗಿ ಪ್ರಾಧಿಕಾರವು ಮೊಬೈಲ್ ಆ್ಯಪ್‌ ಆಧಾರಿತ ಜೆಎಂಸಿಗೆ ಮುಂದಾಗಿದೆ.

ಯೋಜನೆ ವ್ಯಾಪ್ತಿಯ ಅರಳಾಳುಸಂದ್ರ, ಭೈರಮಂಗಲ, ಬನ್ನಿಗಿರಿ, ಹೊಸೂರು, ಕೆ.ಜಿ. ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಕೆಂಪಯ್ಯನಪಾಳ್ಯ, ಮಂಡಲಹಳ್ಳಿ, ವಡೇರಹಳ್ಳಿ ಸೇರಿದಂತೆ 9 ಗ್ರಾಮಗಳಲ್ಲಿ ಜೆಎಂಸಿ ನಡೆಯಲಿದೆ.

ADVERTISEMENT

15 ತಂಡ ಭಾಗಿ: ‘ಭೂ ಮಾಪನ, ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಲೋಕೋಪಯೋಗಿ, ನೀರಾವರಿ, ವಿದ್ಯುತ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಒಳಗೊಂಡ ತಂಡ 15 ತಂಡಗಳು 3 ತಿಂಗಳು ಜೆಎಂಸಿ ಕಾರ್ಯ ನಡೆಸಲಿವೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆ್ಯಪ್‌ ಮೂಲಕ ರೈತರ ಜಮೀನಿನಲ್ಲಿರುವ ಮನೆ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳು, ಕೊಟ್ಟಿಗೆ, ಜಾನುವಾರು, ಕುರಿ–ಕೋಳಿ, ಬಾವಿ, ಕೆರೆ–ಕುಂಟೆ, ಪೈಪ್‌ಲೈನ್‌, ಪಂಪ್‌ಹೌಸ್, ರೇಷ್ಮೆ ಮನೆ, ಪ್ಯಾಕ್ ಹೌಸ್ ಸೇರಿದಂತೆ ಎಲ್ಲಾ ಬಗೆಯ ಆಸ್ತಿಗಳನ್ನು ತಂಡವು ಪ್ರಮಾಣೀಕರಿಸಿ ಮೌಲ್ಯಮಾಪನ ಮಾಡಲಿದೆ’ ಎಂದು ಹೇಳಿದರು.

‘ತಂಡವು ಜಮೀನಿನಲ್ಲಿರುವ ಎಲ್ಲವನ್ನೂ ಜಿಪಿಎಸ್ ವಿಡಿಯೊ ಚಿತ್ರೀಕರಣದ ಜೊತೆಗೆ ಫೋಟೊ ಸಹ ತೆಗೆದುಕೊಳ್ಳಲಿದೆ. ಭೂ ಮಾಲೀಕನ ಅಧಿಕೃತ ಒಪ್ಪಿಗೆ ಮೇರೆಗೆ ಆ್ಯಪ್‌ನಲ್ಲಿ ಜಮೀನಿನ ಪ್ರಮಾಣೀಕರಣದ ವಿವರವನ್ನು ಅಪ್ಲೋಡ್ ಮಾಡಲಿದೆ. ಬಳಿಕ, ಅದನ್ನು ಯಾರಿಂದಲೂ ಅಳಿಸಲು ಅಥವಾ ತಿದ್ದುಪಡಿ ಮಾಡಲು ಸಾಧ್ಯವಿರುವುದಿಲ್ಲ’ ಎಂದರು.

4.39 ಲಕ್ಷ ಪುಟಗಳ ದಾಖಲೆ: ಭೂ ಪರಿಹಾರಕ್ಕಾಗಿ ಮಾಲೀಕರು ಜಮೀನಿನ ದಾಖಲೆ ಕೊಡುವ ಅಗತ್ಯವಿಲ್ಲ. ಈಗಾಗಲೇ ಯೋಜನಾ ಪ್ರದೇಶದ (8,493 ಎಕರೆ) ಭೂಮಿಗೆ ಸಂಬಂಧಿಸಿದ 4.39 ಲಕ್ಷ ಪುಟಗಳ ಎಲ್ಲಾ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸ್ಕ್ಯಾನ್ ಮಾಡಿ ಸಂಗ್ರಹಿಸಲಾಗಿದೆ. ಪ್ರತಿ ಸರ್ವೆ ನಂಬರ್‌ನಲ್ಲಿರುವ ಜಮೀನಿನ ದಾಖಲೆಗಳನ್ನು ಕ್ರೋಢಿಕರಿಸಿ ಪ್ರತ್ಯೇಕ ಕಡತ ತಯಾರಿಸಲಾಗಿದೆ.

‘ಪೇಪರ್‌ಲೆಸ್ ಪರಿಕಲ್ಪನೆಯಡಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಭೂ ಮಾಲೀಕರು ತಮ್ಮ ಒಪ್ಪಿಗೆ ಪತ್ರದೊಂದಿಗೆ ಯಾವ ಬ್ಯಾಂಕ್‌ಗೆ ಪರಿಹಾರ ಪಾವತಿಸಬೇಕೆಂಬ ಮಾಹಿತಿ ನೀಡಿದರೆ, ಅವರ ಖಾತೆಗೆ ಪರಿಹಾರದ ಮೊತ್ತ ಪಾವತಿಯಾಗಲಿದೆ. ಆ ನಿಟ್ಟಿನಲ್ಲಿ ಇಡೀ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ’ ಎಂದು ನಟರಾಜ್ ತಿಳಿಸಿದರು.

ಮೊಬೈಲ್ ಆ್ಯಪ್ ಆಧಾರಿತ ಜೆಎಂಸಿ ಕಾರ್ಯವು ಯಾವುದೇ ಅನುಮಾನ ಮತ್ತು ದೋಷಕ್ಕೆ ಆಸ್ಪದವಿಲ್ಲದಂತೆ ಪಾರದರ್ಶಕವಾಗಿ ನಡೆಯಲಿದೆ. ಯೋಜನೆಗೆ ಭೂಮಿ ನೀಡುವ ರೈತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಜೆಎಂಸಿ ಮಹತ್ವದ ಪಾತ್ರ ವಹಿಸುತ್ತದೆ.
– ಜಿ.ಎನ್. ನಟರಾಜ್ ಅಧ್ಯಕ್ಷ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಭೂ ಮಾಲೀಕರಿಗೆ ಪಾಲುದಾರಿಕೆ

ಯೋಜನೆಯನ್ನು ಭೂ ಮಾಲೀಕರ ಪಾಲುದಾರಿಕೆಯೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಜಮೀನು ನೀಡುವ ಮಾಲೀಕರಿಗೆ ವಸತಿಗಾಗಿ ಅಭಿವೃದ್ದಿಪಡಿಸಿದ ನಿವೇಶನದಲ್ಲಿ ಶೇ 50ರಷ್ಟು ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಅಭಿವೃದ್ಧಿಪಡಿಸಿದ ನಿವೇಶನದಲ್ಲಿ ಶೇ 45ರಷ್ಟು ನಿವೇಶನ ನೀಡಲು ಪ್ರಾಧಿಕಾರ ನಿರ್ಧರಿಸಿದೆ. ಭೂ ಮಾಲೀಕರಿಗೆ ತೆರಿಗೆ ಆದಾಯ ತೆರಿಗೆ ನೋಂದಣಿ ಹಾಗೂ ಮುದ್ರಾಂಕ ಶುಲ್ಕದಲ್ಲಿ ವಿನಾಯಿತಿ ಸಿಗಲಿದೆ. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಲು ಸ್ಥಳೀಯ ಪ್ರಥಮ ಉದ್ಯೋಗ ನೀತಿಯನ್ನು ಸರ್ಕಾರ ರೂಪಿಸಲಿದೆ.

ನಿವೇಶನ ರಹಿತರಿಗೆ ಉಚಿತ ನಿವೇಶನ ಯೋಜನಾ ವ್ಯಾಪ್ತಿಯ ಗ್ರಾಮಗಳಲ್ಲಿರುವ ನಿವೇಶನ ರಹಿತರಿಗೆ ಉಚಿತವಾಗಿ ನಿವೇಶನ ನೀಡುವ ಜೊತೆಗೆ ವಸತಿ ಇಲಾಖೆಯಿಂದ ಮನೆ ನಿರ್ಮಾಣಕ್ಕೆ ಪ್ರಾಧಿಕಾರ ಸಹಾಯ ಮಾಡಲಿದೆ. ಅರ್ಹ ಬಗರ್‌ಹುಕುಂ (ಫಾರಂ 50–53) ಭೂ ಬಳಕೆದಾರರಿಗೆ ಪ್ರತಿ ಎಕರೆಗೆ ಒಂದು ನಿವೇಶನ ನೀಡಲಿದೆ. ಯೋಜನೆಯಿಂದ ಸ್ಥಳಾಂತರಗೊಂಡವರಿಗೆ ‘ಯೋಜನಾ ನಿರಾಶ್ರಿತ ಪ್ರಮಾಣಪತ್ರ’ ಸಿಗಲಿದೆ.

ಇದರಿಂದ ಉದ್ಯೋಗ ಮತ್ತು ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ಅರ್ಹರಾಗಲಿದ್ದಾರೆ. ಗ್ರಾಮಗಳಿಗೆ ಅಭಿವೃದ್ಧಿಯ ಸ್ಪರ್ಶ ಯೋಜನಾ ಪ್ರದೇಶದ 9 ಗ್ರಾಮಗಳ ಸ್ವರೂಪಕ್ಕೆ ಧಕ್ಕೆಯಾಗದಂತೆ ಪ್ರಾಧಿಕಾರ ಅಭಿವೃದ್ಧಿ ಮಾಡಲಿದೆ. ಗ್ರಾಮಗಳ ಸುತ್ತ 50 ಮೀಟರ್ ವರ್ತುಲ ರಸ್ತೆ ಕರ್ನಾಟಕ ಪಬ್ಲಿಕ್ ಶಾಲೆ ಸೌಲಭ್ಯ ನವೀಕರಿಸಿದ ಆಸ್ಪತ್ರೆ ಯುಜಿಡಿ ಭೂಗತ ವಿದ್ಯುತ್ ಕೇಬಲ್ ವ್ಯವಸ್ಥೆ ಆಟದ ಮೈದಾನ ಉದ್ಯಾನ ಧಾರ್ಮಿಕ ಕೇಂದ್ರಗಳು ಮತ್ತು ಸ್ಥಳಗಳ ಅಭಿವೃದ್ಧಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮುದಾಯ ಭವನ ಬಯಲು ರಂಗಮಂದಿರ ಸೇರಿದಂತೆ ಗ್ರಾಮಗಳನ್ನು ಸಮಗ್ರ ಅಭಿವೃದ್ಧಿಗೆ ಪ್ರಾಧಿಕಾರ ನೀಲನಕ್ಷೆ ರೂಪಿಸಿದೆ.

ಎಕರೆಗೆ ಗರಿಷ್ಠ ₹3 ಕೋಟಿವರೆಗೆ ಪರಿಹಾರ 2013ರ ಭೂ ಸ್ವಾಧೀನ ಕಾಯ್ದೆಯಡಿ ಯೋಜನೆಗೆ ಭೂಮಿ ಕೊಡುವವರಿಗೆ ಪ್ರಸಕ್ತ ಮಾರುಕಟ್ಟೆ ದರದಲ್ಲಿ ಪ್ರತಿ ಎಕರೆಗೆ ಕನಿಷ್ಠ ₹1.50 ಕೋಟಿಯಿಂದ ಗರಿಷ್ಠ ₹3 ಕೋಟಿವರೆಗೆ ಪರಿಹಾರ ಸಿಗಲಿದೆ. ಯೋಜನೆಯನ್ನು 3 ವರ್ಷದೊಳಗೆ ಅನುಷ್ಠಾನಗೊಳಿಸುವ ಗುರಿ ಇದೆ. ಅಲ್ಲಿವರಿಗೆ ಭೂ ಮಾಲೀಕರಿಗೆ ಜೀವನೋಪಾಯಕ್ಕಾಗಿ ವಾರ್ಷಿಕ ಭತ್ಯೆ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.