
ರಾಮನಗರ: ಪಿತ್ರಾರ್ಜಿತ ಆಸ್ತಿಗಾಗಿ 92 ವರ್ಷದ ವೃದ್ಧೆಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ಆರು ವರ್ಷದ ಹಿಂದಿನ ಪ್ರಕರಣ ನಗರದ ನ್ಯಾಯಾಲಯದಲ್ಲಿ ಈಚೆಗೆ ನಡೆದ ಲೋಕ ಅದಾಲತ್‌ನಲ್ಲಿ ಸುಖ್ಯಾಂತ್ಯ ಕಂಡಿದೆ. ಕಾರಿನಿಂದಿಳಿದು ಕೋರ್ಟ್ ಹಾಲ್‌ಗೆ ಬರಲಾಗದ ವೃದ್ಧೆ ಸ್ಥಿತಿ ಅರಿತ ನ್ಯಾಯಾಧೀಶರು, ಸ್ವತಃ ವೃದ್ಧೆ ಬಳಿಗೆ ತೆರಳಿ ಪ್ರಕರಣವನ್ನು ರಾಜಿ ಮಾಡಿಸಿದರು.
‘ತನ್ನ ಪಾಲಿನ ಆಸ್ತಿಯನ್ನು 2006ರಲ್ಲಿ ಅನುಮತಿ ಮತ್ತು ಸಹಿ ಇಲ್ಲದೆ ಮಾರಾಟ ಮಾಡಲಾಗಿದೆ ಎಂದು 92 ವರ್ಷದ ಪಿ.ಗಿರಿಜಾ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಒಂದನೇ ಹೆಚ್ಚುವರಿ ನ್ಯಾಯಾಧೀಶ ನ್ಯಾಯಾಲಯದಲ್ಲಿ ತಮ್ಮ ತಂದೆ ಪುಟ್ಟನಂಜಯ್ಯ, ಸಹೋದರರಾದ ಮೋಹನ್ ಕುಮಾರ್ ಹಾಗೂ ಪಿ.ಶಶಿಕುಮಾರ್ ವಿರುದ್ಧ ದಾವೆ ಸಲ್ಲಿಸಿದ್ದರು. ಮಾರಾಟಗಾರರನ್ನು ಸಹ ಪಾರ್ಟಿ ಮಾಡಿದ್ದರು’.
ಹಿರಿಯ ಸಿವಿಲ್ ನ್ಯಾಯಾಧೀಶೆ ನಿವೇದಿತಾ ಟಿ.ಎಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶರಾದ ಸವಿತಾ ಪಿ.ಆರ್. ಎರಡು ಪಾರ್ಟಿಯ ವಕೀಲರ ಸಮ್ಮುಖದಲ್ಲಿ ಪಕ್ಷಗಾರರ ಮನವೊಲಿಸಿದರು.
ಲಂಡನ್‌ನಲ್ಲಿ ನೆಲೆಸಿರುವ ವೃದ್ಧೆಯ ಸಹೋದರರಲ್ಲಿ ಒಬ್ಬರನ್ನು ವಿಡಿಯೊ ಕಾನ್ಫರೆನ್ಸ್ ಮೂಲಕವೇ ವಿಚಾರಣೆ ನಡೆಸಿದಾಗ ರಾಜಿಗೆ ಒಪ್ಪಿದರು. ಅಲ್ಲದೇ ರಾಜಿ ಪತ್ರಕ್ಕೆ ಸಹಿ ಮಾಡಿದ ಪತ್ರವನ್ನು ಇ–ಮೇಲ್‌ನಲ್ಲಿ ಕಳುಹಿಸಿ ಕೊಡಬೇಕು ಎಂದು ನ್ಯಾಯಾಧೀಶರು ನಿರ್ದೇಶನ ನೀಡಿದರು.
ಬಳಿಕ ಪಿ.ಗಿರಿಜಾ ಅವರು, ತಮ್ಮ ಪಾಲಿಗೆ ಬರಬೇಕಾದ ಆಸ್ತಿಗೆ ಬದಲಾಗಿ ಹಣವನ್ನು ಪಡೆದುಕೊಳ್ಳುವುದಾಗಿ ಒಪ್ಪಿಗೆ ಸೂಚಿಸುವ ಮೂಲಕ ಪ್ರಕರಣವನ್ನು ರಾಜಿ ಮಾಡಿಕೊಂಡರು. ಗಿರಿಜಾ ಅವರ ವಕೀಲ ಚಿದಾನಂದ ಮತ್ತು ಪ್ರತಿವಾದಿ ಪರ ವಕೀಲರಾದ ರಾಜೀವ್, ಎಂ.ಸಿ.ದೇವೇಂದ್ರಪ್ಪ ಅದಾಲತ್‌ನಲ್ಲಿ ಹಾಜರಾಗಿದ್ದರು.
ಪ್ರಕರಣ ಸುಖಾಂತ್ಯ ಕಂಡ ಬಳಿಕ ಮಾತನಾಡಿದ ನ್ಯಾಯಾಧೀಶರಾದ ಸವಿತಾ, ‘ಪಕ್ಷಗಾರರು ವಿದೇಶದಲ್ಲಿ ಅಥವಾ ಬೇರೆ ಯಾವುದೇ ರಾಜ್ಯದಲ್ಲಿ ವಾಸವಾಗಿದ್ದರೆ ಅಥವಾ ನ್ಯಾಯಾಲಯದಲ್ಲಿ ರಾಜಿ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಹಾಜರಾಗಲು ಸಾಧ್ಯವಾಗದಿದ್ದರೆ, ವಿಡಿಯೊ ಕಾನ್ಫರೆನ್ಸ್ ಮುಖಾಂತರ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನಕ್ಕೆ ಹಾಜರಾಗಬಹುದು. ಉಚಿತ ಕಾನೂನು ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 15100ಕ್ಕೆ ಕರೆ ಮಾಡಿ ಸಂಪರ್ಕಿಸಬಹುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.