ADVERTISEMENT

ಸಂಘಟನೆಯಿಂದ ಸಮುದಾಯಕ್ಕೆ ನ್ಯಾಯ

ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಜಾತಿ ಜನಗಣತಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 12:36 IST
Last Updated 14 ಡಿಸೆಂಬರ್ 2019, 12:36 IST
ವಿಜಯಪುರ ಪ್ರವಾಸಿಮಂದಿರದಲ್ಲಿ ಕರ್ನಾಟಕ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ವತಿಯಿಂದ ಆಯೋಜಿಸಿದ್ದ ಜಾತಿ ಜನಗಣತಿಗೆ ಮುಖಂಡ ಚಂದೇನಹಳ್ಳಿ ಮುನಿಯಪ್ಪ ಚಾಲನೆ ನೀಡಿದರು
ವಿಜಯಪುರ ಪ್ರವಾಸಿಮಂದಿರದಲ್ಲಿ ಕರ್ನಾಟಕ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ವತಿಯಿಂದ ಆಯೋಜಿಸಿದ್ದ ಜಾತಿ ಜನಗಣತಿಗೆ ಮುಖಂಡ ಚಂದೇನಹಳ್ಳಿ ಮುನಿಯಪ್ಪ ಚಾಲನೆ ನೀಡಿದರು   

ವಿಜಯಪುರ: ಸೌಲಭ್ಯಗಳಿಂದ ವಂಚಿತವಾಗಿರುವ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದವರು ಒಗ್ಗಟ್ಟು ಕಾಪಾಡಿಕೊಂಡು ಸಂಘಟಿತವಾಗಿ ಹೋರಾಟ ಮಾಡಿದರೆ ಮಾತ್ರವೇ ಮುಂದಿನ ದಿನಗಳಲ್ಲಿ ನ್ಯಾಯ ಪಡೆದುಕೊಳ್ಳಲಿಕ್ಕೆ ಸಾಧ್ಯವಾಗುತ್ತದೆ ಎಂದು ಹಿರಿಯ ಮುಖಂಡ ಚಂದೇನಹಳ್ಳಿ ಮುನಿಯಪ್ಪ ಕರೆ ನೀಡಿದರು.

ಇಲ್ಲಿನ ಪ್ರವಾಸಿಮಂದಿರದಲ್ಲಿ ಕರ್ನಾಟಕ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ನಗರ ಘಟಕದ ವತಿಯಿಂದ ಆಯೋಜಿಸಿದ್ದ ಜಾತಿ ಜನಗಣತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಪೂರ್ವದಿಂದಲೂ ಶೋಷಣೆಗೆ ಒಳಗಾಗಿರುವ ಸಮುದಾಯ ಈಗಲಾದರೂ ಬೆಳಕಿನತ್ತ ಹೆಜ್ಜೆ ಹಾಕಬೇಕಾಗಿದೆ. ನಮ್ಮಲ್ಲಿನ ಒಳಜಗಳಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಇತರೆ ಸಮುದಾಯಗಳವರು, ಬಲಗೊಳ್ಳುತ್ತಾ ನಮ್ಮನ್ನು ದುರ್ಬಲರನ್ನಾಗಿ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಈ ಸತ್ಯವನ್ನು ಅರ್ಥ ಮಾಡಿಕೊಳ್ಳದ ನಾವು ಪರಸ್ಪರ ಕಚ್ಚಾಟಗಳಲ್ಲಿ ತೊಡಗಿಸಿಕೊಂಡು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದೇವೆ. ಇದು ಕೊನೆಗಾಣಬೇಕು, ರಾಜ್ಯದ ಪರಿಶಿಷ್ಟ ಸಮುದಾಯದಲ್ಲಿ ಹೆಚ್ಚಾಗಿರುವ ನಾವು ನಮ್ಮ ಶಕ್ತಿಯನ್ನು ತೋರಿಸಬೇಕಾಗಿದೆ’ ಎಂದರು.

ಮುಖಂಡ ಎಂ.ನಾಗರಾಜ್ ಮಾತನಾಡಿ, ‘2013 ರಲ್ಲಿನ ಸರ್ಕಾರ ಮಾಡಿರುವ ಜಾತಿವಾರು ಜನಗಣತಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಹೊಸ ಗಣತಿ ಕಾರ್ಯವನ್ನು ಆರಂಭಿಸಲಿದ್ದು, ಈಗ ನಮ್ಮ ಮೀಸಲಾತಿ ಹೋರಾಟ ಸಮಿತಿಯ ಮೂಲಕ ಮಾಡುತ್ತಿರುವ ಜನಗಣತಿಯ ವೇಳೆ ಸಮುದಾಯದ ಪ್ರತಿಯೊಂದು ಕುಟುಂಬಕ್ಕೂ ಜಾಗೃತಿ ಮೂಡಿಸಬೇಕು. ಅಲ್ಲದೆ, ನಿಖರವಾದ ಅಂಕಿ ಅಂಶಗಳನ್ನು ಗಣತಿದಾರರಿಗೆ ನೀಡುವಂತೆ ತಿಳಿಸಬೇಕು’ ಎಂದರು.

ನಗರ ಘಟಕದ ಅಧ್ಯಕ್ಷ ಪ್ರಭು ಮಾತನಾಡಿ, ‘ಸರ್ಕಾರಗಳು ನಿರಂತರವಾಗಿ ನಮ್ಮ ಸಮುದಾಯವನ್ನು ಕಡೆಗಣಿಸಿಕೊಂಡೇ ಬರುತ್ತಿವೆ. ಚುನಾವಣೆಗಳಲ್ಲಿ ಮತಕ್ಕಾಗಿ ನಮ್ಮನ್ನು ಬಳಕೆ ಮಾಡಿಕೊಳ್ಳುತ್ತಿರುವ ರಾಜಕಾರಣಿಗಳು, ಪುನಃ ನಮ್ಮ ಪರಿಸ್ಥಿತಿಗಳ ಬಗ್ಗೆ ಚಕಾರವೆತ್ತುತ್ತಿಲ್ಲ’ ಎಂದು ಟೀಕಿಸಿದರು.

‘ಮಾದಿಗ ದಂಡೋರದ ನಿರಂತರ ಹೋರಾಟದ ಫಲವಾಗಿ ಇಂದು ಜಗಜೀವನರಾಂ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದ್ದರೂ ಈ ನಿಗಮದ ಕುರಿತು ನಮ್ಮ ಸಮುದಾಯದ ಜನರಿಗೆ ಇದುವರೆಗೂ ತಿಳಿವಳಿಕೆಯಿಲ್ಲ. ಈ ಬಗ್ಗೆ ತಿಳಿವಳಿಕೆ ಮೂಡಿಸಬೇಕಾಗಿದೆ’ ಎಂದರು.

ಸಂಘಟನೆಯಿಂದ ಹಮ್ಮಿಕೊಂಡಿರುವ ಜಾತಿಗಣತಿ ಅರ್ಜಿ ನಮೂನೆಗಳನ್ನು ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ಕದಿರಪ್ಪ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಮುದುಗುರ್ಕಿ ಮೂರ್ತಿ,ಮುಖಂಡರಾದ ತಿರುಮಲೇಶ್, ಎಚ್.ಎಂ.ಕೃಷ್ಣಪ್ಪ, ವೇಣು, ರಾಘವ, ಮುನಿಆಂಜಿನಪ್ಪ, ಗಂಗರೆಡ್ಡಿ, ಭಟ್ರೇನಹಳ್ಳಿ ಕದಿರಪ್ಪ, ನಾರಾಯಣಸ್ವಾಮಿ, ನರಸಿಂಹಮೂರ್ತಿ, ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.