ರಾಮನಗರದ ಜಿಲ್ಲಾ ವಕೀಲರ ಸಂಘದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರವನ್ನು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಉದ್ಘಾಟಿಸಿದರು.
ರಾಮನಗರ: ‘ವಕೀಲರು ಸಮಾಜದ ದನಿಯಾದಾಗ ಮಾತ್ರ ಅವರ ಕರಿ ಕೋಟಿಗೆ ಬೆಲೆ ಬರುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ದೊಡ್ಡದು. ಸ್ವಾತಂತ್ರ್ಯ ಹೋರಾಟದ ಮುಂದಾಳು ಗಾಂಧೀಜಿ ಸೇರಿದಂತೆ ದೇಶ ಕಂಡ ಮಹಾನ್ ನಾಯಕರು ವಕೀಲರಾಗಿದ್ದರು. ವಕೀಲರು ಈಗ ದುಡ್ಡಿನ ಹಿಂದೆ ಬಿದ್ದಿದ್ದು, ಸಾಮಾಜಿಕ ಪರಿವರ್ತನೆಗೆ ಅವರ ಕೊಡುಗೆ ಕಡಿಮೆಯಾಗಿದೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಬೇಸರ ವ್ಯಕ್ತಪಡಿಸಿದರರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮತ್ತು ಜಿಲ್ಲಾ ವಕೀಲರ ಸಂಘವು ನಗರದ ಕೋರ್ಟ್ ಸಂಕೀರ್ಣದಲ್ಲಿರುವ ಸಂಘದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ದೇಶ ಸ್ಥಿರವಾಗಿರುವುದಕ್ಕೆ ಪ್ರಜಾಪ್ರಭುತ್ವದ ಕಾವಲುನಾಯಿಯಾದ ನ್ಯಾಯಾಂಗ ಕಾರಣ. ಅದರ ಉತ್ಕೃಷ್ಟತೆಯನ್ನು ಸದಾ ಕಾಪಾಡಿಕೊಂಡು ಹೋಗಬೇಕು’ ಎಂದರು.
‘ಸ್ವಾಮಿ ವಿವೇಕಾನಂದ ಅವರು ದೇಶದ ಪ್ರತಿಯೊಬ್ಬರು ರಾಷ್ಟ್ರಾಭಿಮಾನ, ಆತ್ಮಾಭಿಮಾನ ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ದೇಶದ ಚರಿತ್ರೆ, ನಮ್ಮತನ ಹಾಗೂ ಸಂಸ್ಕೃತಿ ಅರಿಯಬೇಕು. ಯುವಜನರಿಗೆ ಒಳ್ಳೆಯ ವಿಚಾರಧಾರೆಯನ್ನು ತುಂಬಬೇಕು ಎಂದು ಹೇಳುತ್ತಿದ್ದರು’ ಎಂದು ತಿಳಿಸಿದರು.
‘ಯುವಜನರಲ್ಲಿ ಈಗ ಒಳ್ಳೆಯ ವಿಚಾರಧಾರೆ ಇವೆಯೇ ಎಂಬುದರ ಅವಲೋಕನ ಅಗತ್ಯ. ಪೋಕ್ಸೊ ಪ್ರಕರಣಗಳು ಹೆಚ್ಚುತ್ತಿವೆ. ಎಲ್ಲೆಂದರಲ್ಲಿ ಮದ್ಯದಂಗಡಿಗಳು ಕಾಣುತ್ತಿವೆ. ಹೆಣ್ಣು ಮಕ್ಕಳು ಸಹ ಮದ್ಯ ಖರೀದಿಗೆ ಸರದಿಯಲ್ಲಿ ನಿಲ್ಲುವ ಸ್ಥಿತಿ ಬಂದಿದೆ. ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣದಲ್ಲಿ ಯುವಜನರು ಮುಳುಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ವಕೀಲರು ಪಂಚಮಂತ್ರಗಳಾದ ಶಿಸ್ತು, ಶ್ರಮ, ಸಮಯಪ್ರಜ್ಞೆ, ಆತ್ಮವಿಶ್ವಾಸ, ನಿರ್ಭಯತೆ ಬೆಳೆಸಿಕೊಳ್ಳಬೇಕು. ಕಕ್ಷಿದಾರನಿಗೆ ಪ್ರಕರಣದ ವಾಸ್ತವಾಂಶ ತಿಳಿಸಬೇಕು. ಹಣಕ್ಕಾಗಿ ವಾಸ್ತವಾಂಶ ಮರೆಮಾಚಿ ನಂತರ ಪೇಚಿಗೆ ಸಿಲುಕಬಾರದು. ಹಿರಿಯರು ಕಿರಿಯರಿಗೆ ಸದಾ ಆತ್ಮವಿಶ್ವಾಸ ತುಂಬಬೇಕು. ನೊಂದವರಿಗೆ ದನಿಯಾಗುವ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು’ ಎಂದರು.
ಪರಿಷತ್ ಅಧ್ಯಕ್ಷ ಮಿಟ್ಟಲ್‌ಕೊಡ್ ಮಾತನಾಡಿ, ‘ವಕೀಲರು ಪ್ರತಿ ವರ್ಷ ಪರಿಷತ್‌ಗೆ ವಂತಿಗೆ ಪಾವತಿಸಬೇಕು. ಪರಿಷತ್‌ನಲ್ಲಿ 1.20 ಲಕ್ಷ ವಕೀಲರು ನೋಂದಣಿ ಮಾಡಿದ್ದಾರೆ. ಅದರಲ್ಲಿ ಕೇವಲ 75 ಸಾವಿರ ಮಂದಿ ಮಾತ್ರ ವಕೀಲಿಕೆ ಮಾಡುತ್ತಿದ್ದಾರೆ. ಉಳಿದವರು ಏನು ಮಾಡುತ್ತಿದ್ದಾರೊ ಗೊತ್ತಿಲ್ಲ. ಪರಿಷತ್ ವಕೀಲರ ಶ್ರೆಯೋಭಿವೃದ್ದಿಗೆ ಬದ್ದವಾಗಿ ಕೆಲಸ ಮಾಡುತ್ತಿದೆ’ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಎಂ. ಶ್ರೀವತ್ಸ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಕೀಲರ ಪರಿಷತ್ ನಿರ್ದೇಶಕ ವಿಶಾಲ್ ರಘು ಎಚ್.ಎಸ್, ನ್ಯಾಯಾಧೀಶರಾದ ಪಂಚಾಕ್ಷರಿ, ಲೋಕೇಶ್, ಸವಿತಾ ಪಿ.ಆರ್, ನಿವೇದಿತಾ, ಅವಿನಾಶ್ ಚಿನ್ನೂರು, ಪುಟ್ಟರಾಜು ಸಿ, ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಖಜಾಂಚಿ ಮಂಜೇಶ್ ಗೌಡ, ಸಂಘದ ಪದಾಧಿಕಾರಿಗಳು ಇದ್ದರು. ಸಂಘದ ಕಾರ್ಯದರ್ಶಿ ಟಿ. ತಿಮ್ಮೇಗೌಡ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಎಸ್. ಲೋಕೇಶ್ ಅತಿಥಿಗಳನ್ನು ಸ್ವಾಗತಿಸಿದರು. ಸತೀಶ್ ಪ್ರಾರ್ಥಿಸಿದರು.
ವಕೀಲರ ಸಂಘದ ಚುನಾವಣೆಯಲ್ಲೂ ಗುಂಡು ತುಂಡು ಹಣ ನಡೆಯುತ್ತಿದೆ. ಸಂಘಕ್ಕೆ ಚುನಾವಣೆಯೇ ಬೇಕಿಲ್ಲ. ವಕೀಲ ವೃತ್ತಿಯ ಗೌರವ ಕಾಪಾಡುವವರನ್ನು ಸಂಘಕ್ಕೆ ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳುವಂತಾಗಬೇಕುಎಚ್.ಪಿ. ಸಂದೇಶ್ ಹೈಕೋರ್ಟ್ ನ್ಯಾಯಮೂರ್ತಿ
ಯುವ ವಕೀಲರು ಹಿಂಜರಿಕೆ ಬಿಡಬೇಕು. ಪ್ರಮುಖ ಪ್ರಕರಣಗಳನ್ನು ಅಧ್ಯಯನ ಮಾಡಬೇಕು. ಸೂಕ್ಷ್ಮ ಪ್ರಕರಣಗಳ ವಿಚಾರಣೆಯನ್ನು ಆಲಿಸಬೇಕು. ವೃತ್ತಿ ನಿಷ್ಠೆ ಬೆಳೆಸಿಕೊಂಡರೆ ಉಜ್ವಲ ಭವಿಷ್ಯ ನಿಮ್ಮದಾಗುತ್ತದೆಬಿ.ವಿ. ರೇಣುಕಾ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ರಾಮನಗರ
ಸರ್ಕಾರದ ವಿರುದ್ಧ ಆಕ್ರೋಶ
‘ಶಿಕ್ಷಣ ಆರೋಗ್ಯ ನ್ಯಾಯ ಸರಿಯಾಗಿದ್ದರೆ ಮಾತ್ರ ಒಳ್ಳೆಯ ದೇಶ ಕಟ್ಟಲು ಸಾಧ್ಯ. ಈಗ ಶಿಕ್ಷಣ ವೇಗವಾಗಿ ಖಾಸಗೀಕರಣಗೊಳ್ಳುತ್ತಿದೆ. ಒಂದೆಡೆ ಸರ್ಕಾರಿ ಶಾಳೆಗಳು ಮುಚ್ಚುತ್ತಿದ್ದರೆ ಮತ್ತೊಂದೆಡೆ ಖಾಸಗಿ ಶಾಲಾ–ಕಾಲೇಜುಗಳು ಹೆಚ್ಚುತ್ತಿವೆ. ಶಾಲಾ- ಕಾಲೇಜುಗಳಿಗೆ ಶಿಕ್ಷಕರು ಮತ್ತು ಉಪನ್ಯಾಸಕರನ್ನು ನೇಮಿಸುವ ಯೋಗ್ಯತೆ ಸರ್ಕಾರಕ್ಕೆ ಇಲ್ಲವಾಗಿದೆ. ಅತಿಥಿ ಶಿಕ್ಷಕರಿಗೆ ಬಿಡಿಗಾಸಿನ ಸಂಬಳ ಕೊಡುತ್ತಾರೆ. ಅದೂ 9 ತಿಂಗಳು ಮಾತ್ರ. ಅದನ್ನೂ ಸರಿಯಾಗಿ ಕೊಡದೆ ಮನಸ್ಸಿಗೆ ಬಂದಾಗ ಬಿಡುಗಡೆ ಮಾಡುತ್ತಾರೆ’ ಎಂದು ನ್ಯಾ. ಸಂದೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.