ADVERTISEMENT

ಎಕ್ಸ್ ಪ್ರೆಸ್ ಕೆನಾಲ್ ಬಗ್ಗೆ ಮಾತನಾಡದ ರಾಜಣ್ಣ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 14:43 IST
Last Updated 14 ಸೆಪ್ಟೆಂಬರ್ 2024, 14:43 IST
ಮಾಗಡಿ ಪಟ್ಟಣದ ಹೊಸಪೇಟೆಯಲ್ಲಿ ನಡೆದ ವಿವಿಧ ಅಭಿವೃದ್ಧಿಗಳ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸಾರ್ವಜನಿಕರು
ಮಾಗಡಿ ಪಟ್ಟಣದ ಹೊಸಪೇಟೆಯಲ್ಲಿ ನಡೆದ ವಿವಿಧ ಅಭಿವೃದ್ಧಿಗಳ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸಾರ್ವಜನಿಕರು   

ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಶಾಸಕ ಬಾಲಕೃಷ್ಣ ಮಾಗಡಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಹೇಮಾವತಿ ಯೋಜನೆಗಾಗಿ ಒಂದು ಸಾವಿರ ಕೋಟಿ ರೂಪಾಯಿ ಅನುದಾನದಲ್ಲಿ ಎಕ್ಸ್‌ಪ್ರೆಸ್ ಕಾಮಗಾರಿ ಆರಂಭಿಸಲಾಗಿದೆ. ಈಗ ತುಮಕೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಇದಕ್ಕೆವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಈ ಕಾಮಗಾರಿಯನ್ನು ಮುಂದುವರಿಸಲು ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಕೆ.ಎನ್. ರಾಜಣ್ಣ ತಮ್ಮ ಭಾಷಣದುದ್ದಕ್ಕೂ ಈ ಬಗ್ಗೆ ಚಕಾರ್‌ ಎತ್ತದೇ ಮಾತು ಮುಗಿಸಿದರು. ಅವರು ತೆರಳುವಾಗ ಕಾರ್ಯಕರ್ತರು ’ಎಕ್ಸ್‌ಪ್ರೆಸ್ ಕೆನಾಲ್ ವಿಚಾರ ಮಾತನಾಡಿ’ ಎಂದು ಕೂಗುತ್ತಿದ್ದ ಪ್ರಸಂಗ ನಡೆಯಿತು.

ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ

ಮಾಗಡಿ ಪಟ್ಟಣದ ಮಳಿಗೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ, ಲೋಕೋಪಯೋಗಿ ಇಲಾಖೆ ಎಸ್‌ಎಚ್‌ಡಿಪಿ ವತಿಯಿಂದ ಪಟ್ಟಣದ ವ್ಯಾಪ್ತಿಯಲ್ಲಿ ₹ 20 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ, ಜೂನಿಯರ್ ಕಾಲೇಜು ಆವರಣದಲ್ಲಿ ₹ 7 ಕೋಟಿ ವೆಚ್ಚದಲ್ಲಿ ಅಡಿಟೋರಿಯಂ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ, ತಾಲ್ಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ಟೆಕ್ನಿಕ್ ಕಾಲೇಜು ಶಂಕುಸ್ಥಾಪನೆ, ಅತ್ಯಾಧುನಿಕ ಗ್ರಂಥಾಲಯ ಕಟ್ಟಡದ ಶಂಕುಸ್ಥಾಪನೆ, ಜೂನಿಯರ್ ಕಾಲೇಜಿನ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಿದರು.

ADVERTISEMENT

ಬೈಕ್ ಜಾಥಾ

ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ, ಸೋಲೂರು ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್‌ನಿಂದ ಹೊಸಪೇಟೆವರೆಗೂ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ಜಾಥಾ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭವ್ಯಸ್ವಾಗತ ಕೋರಿದರು.

ಕಾರ್ಯಕರ್ತರಿಗೆ ಬಸ್ ವ್ಯವಸ್ಥೆ

ಪಟ್ಟಣದ ಹೊಸಪೇಟೆ ವೃತ್ತದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಮಾಗಡಿಗೆ ಆಗಮಿಸಲು ಕಾರ್ಯಕರ್ತರನ್ನು ಕರೆ ತರಲು ಕಾಂಗ್ರೆಸ್ ಪಕ್ಷದ ವತಿಯಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. 

ಮಾರ್ಗ ಬದಲಾವಣೆ

ಹೊಸಪೇಟೆ ವೃತ್ತದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ಆಯೋಜನೆ ಮಾಡಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಾರ್ಗ ಬದಲಾವಣೆ ಮಾಡಲಾಗಿತ್ತು. ಬಸ್ ನಿಲ್ದಾಣದಿಂದ ಕೆಂಪೇಗೌಡ ವೃತ್ತದ ಮೂಲಕ ಎಂಇಎಸ್, ತಿರುಮಲೆ ಸರ್ಕಲ್ ಮೂಲಕ ಮಾಗಡಿ ಮುಖ್ಯ ರಸ್ತೆಗೆ ಬಂದು ಬೆಂಗಳೂರಿಗೆ ತೆರಳುವಂತೆ ಮಾರ್ಗ ಬದಲಾವಣೆ ಮಾಡಲಾಗಿತ್ತು. ರಾಮನಗರ ಮಾರ್ಗ ಬದಲಾವಣೆ ಮಾಡಲಾಗುತ್ತದೆ ಎಂದು ಪೋಲಿಸ್ ಇಲಾಖೆ ಪ್ರಕಟಣೆ ತಿಳಿಸಿದ್ದರೂ ರಾಮನಗರ ಮಾರ್ಗವಾಗಿ ತೆರಳುವ ವಾಹನಗಳಿಗೆ ಯಾವುದೇ ರೀತಿ ಬದಲಾವಣೆ ಮಾಡಿರಲಿಲ್ಲ.

ಸಿಎಂ ಭಾಷಣ ಕೇಳುವವರಿರಲಿಲ್ಲ

ಬೆಳಗ್ಗೆ 11.30ಕ್ಕೆ ಕಾರ್ಯಕ್ರಮ ಆರಂಭವಾಗಬೇಕಿತ್ತು‌. ಆದರೆ, ಮುಖ್ಯಮಂತ್ರಿಗಳು ತುಸು ತಡವಾಗಿ, ಅಂದರೆ 12ಕ್ಕೆ ಮಾಗಡಿಗೆ ಆಗಮಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ವೇದಿಕೆ ಕಾರ್ಯಕ್ರಮಕ್ಕೆ ಬರಲು 1.30 ಆಗಿತ್ತು. ಊಟದ ಸಮಯವಾದ್ದರಿಂದ ಹೆಚ್ಚಿನ ಜನರು ವೇದಿಕೆ ಮುಂದೆ ಇರಲಿಲ್ಲ. ಅನೇಕ ಕಾರ್ಯಕರ್ತರೂ ಕೂಡ ಎದ್ದು ಹೋಗಿದ್ದು ಕಂಡು ಬಂತು.

ಬ್ಯಾನರ್‌ಗಳ ಕಣ್ಣಾಮುಚ್ಚಾಲೆ

ಮಾಗಡಿಗೆ ಮುಖ್ಯಮಂತ್ರಿಗಳು ಆಗಮಿಸಲಿರುವ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಕಾಂಗ್ರೆಸ್‌ನ ಹಲವು ಕಾರ್ಯಕರ್ತರು ಅವರ ಸ್ವಾಗತಕ್ಕೆ ದೊಡ್ಡ ದೊಡ್ಡ ಬ್ಯಾನರ್ ಗಳನ್ನು ಹಾಕಲು ಶುರುಮಾಡಿದ್ದರು. ಬೆಳಗಿನಿಂದಲೂ ಪಟ್ಟಣದ ಅನೇಕ ಕಡೆ ಮುಖ್ಯಮಂತ್ರಿಗಳ ಸ್ವಾಗತದ ಬ್ಯಾನರ್‌ಗಳೇ ರಾರಾಜಿಸುತ್ತಿದ್ದವು. ಆದರೆ, ಇನ್ನೇನು ಕಾರ್ಯಕ್ರಮ ಮುಗಿಯುತ್ತಿದೆ ಎನ್ನುವಾಗಲೇ ಬ್ಯಾನರ್‌ಗಳನ್ನು ಕಿತ್ತುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು.

ಮಾಗಡಿ ಪಟ್ಟಣದ ಹೊಸಪೇಟೆ ಸರ್ಕಲ್ ಬಳಿ 6 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕ್ಷೀರ ಭವನ
ಮಾಗಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಬ್ಯಾನರ್ಗಳ ಮೂಲಕ ಸ್ವಾಗತ ಕೋರುತ್ತಿರುವ ಕಾರ್ಯಕರ್ತರು
ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆ ನಂತರ ಸಿದ್ದರಾಮಯ್ಯ ಬ್ಯಾನರ್ ಕೆಳಗೆ ತಟ್ಟೆಗಳ ರಾಶಿ ಹಾಕಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.