ADVERTISEMENT

‘ಅಂತರ್ಜಲ ವೃದ್ಧಿಗೂ ಕಲ್ಯಾಣಿ ಪೂರಕ’

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 15:59 IST
Last Updated 23 ಜೂನ್ 2019, 15:59 IST
ಕನಕಪುರ ತಾಲ್ಲೂಕಿನ ಬಾಣಂತಮಾರಮ್ಮ ಬೆಟ್ಟದ ಮೇಲೆ ನೂತನವಾಗಿ ನಿರ್ಮಾಣ ಮಾಡಿದ್ದ ಕಲ್ಯಾಣಿಯನ್ನು ಸಂಸದ ಡಿ.ಕೆ.ಸುರೇಶ್‌ ಉದ್ಘಾಟಿಸಿದರು
ಕನಕಪುರ ತಾಲ್ಲೂಕಿನ ಬಾಣಂತಮಾರಮ್ಮ ಬೆಟ್ಟದ ಮೇಲೆ ನೂತನವಾಗಿ ನಿರ್ಮಾಣ ಮಾಡಿದ್ದ ಕಲ್ಯಾಣಿಯನ್ನು ಸಂಸದ ಡಿ.ಕೆ.ಸುರೇಶ್‌ ಉದ್ಘಾಟಿಸಿದರು   

ಕನಕಪುರ: ‘ನಮ್ಮ ಧಾರ್ಮಿಕ ಪರಂಪರೆಯಲ್ಲಿ ಕಲ್ಯಾಣಿಗಳಿಗೆ ವಿಶೇಷ ಸ್ಥಾನವಿದೆ. ರಾಜ ಮಹಾರಾಜರ ಕಾಲದಿಂದಲೂ ಕಲ್ಯಾಣಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ದೇವರ ಪೂಜಾ ಕಾರ್ಯದ ನೀರಿಗೆ ಬಳಸುವುದರ ಜತೆಗೆ ಅಂತರ್ಜಲ ವೃದ್ಧಿಗೂ ಕಲ್ಯಾಣಿಗಳು ಸಹಕಾರಿಯಾಗಿವೆ’ ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು.

ಇಲ್ಲಿನ ಸೋಮೆದ್ಯಾಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ, ಬಾಣಂತ ಮಾರಮ್ಮ ಬೆಟ್ಟದ ಮೇಲೆ ಪಂಚಾಯಿತಿ ವತಿಯಿಂದ ನೂತನವಾಗಿ ನಿರ್ಮಾಣ ಮಾಡಿದ್ದ ಕಲ್ಯಾಣಿಯನ್ನು ಭಾನುವಾರ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

‘ಬಾಣಂತ ಮಾರಮ್ಮ ದೇವಾಲಯದ ಮುಂಭಾಗದಲ್ಲಿ ಕಲ್ಯಾಣಿ ನಿರ್ಮಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದರು. ಅದರಂತೆ ಪಂಚಾಯಿತಿ ವತಿಯಿಂದ ಕಲ್ಯಾಣಿಯನ್ನು ಅಚ್ಚುಕಟ್ಟಾಗಿ, ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ. ಇದು ದೇವಸ್ಥಾನಕ್ಕೆ ಆಕರ್ಷಣೀಯವಾಗಿದ್ದು, ಶುಚಿತ್ವ ಕಾಪಾಡಬೇಕು. ಧಾರ್ಮಿಕ ನಂಬಿಕೆ ಬೆಸೆದುಕೊಂಡಿರುವ ಈ ಕಲ್ಯಾಣಿಯಲ್ಲಿ ತುಂಬಿಸುವ ನೀರು ಹಾಗೂ ಸಂಗ್ರಹಗೊಂಡ ಮಳೆ ನೀರು ಭೂಮಿಯಲ್ಲಿ ಇಂಗಿ ಅಂತರ್ಜಲ ಹೆಚ್ಚಳವಾಗಲಿದೆ’ ಎಂದರು.

ADVERTISEMENT

‘ಯಾರೇ ಕೆಲಸ ವಹಿಸಿಕೊಂಡರು ಗುಣಮಟ್ಟದಲ್ಲಿ ಮಾಡಿ. ಮಾಡುವ ಕೆಲಸ ಶಾಶ್ವತವಾಗಿ ಉಳಿಯುತ್ತದೆ. ಮುಂದಿನ ದಿನಗಳಲ್ಲಿ ಕಲ್ಯಾಣಿ ಮತ್ತು ಚೆಕ್‌ ಡ್ಯಾಂ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಲಿದ್ದು, ಉತ್ತಮ ಗುಣಮಟ್ಟದ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಗೋಪಲ್‌, ನಗರಸಭೆ ಸದಸ್ಯ ಕೆ.ಎನ್‌.ದಿಲೀಪ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ಭಾಗ್ಯ ಶಾಂತಕುಮಾರ್‌, ಸೋಮೆದ್ಯಾಪನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ ಬಾಯಿ, ಸದಸ್ಯ ಮುತ್ತಪ್ಪ, ಅಭಿವೃದ್ಧಿ ಅಧಿಕಾರಿ ದೊಡ್ಡಲಿಂಗೇಗೌಡ, ಕಾಂಗ್ರೆಸ್‌ ಮುಖಂಡರಾದ ಪಟೇಲ್‌ ನಾರಾಯಣಸ್ವಾಮಿ, ಕೆ.ಎಚ್‌.ಕೃಷ್ಣಪ್ಪ, ವೆಂಕಟರಮಣ, ಶ್ರೀನಿವಾಸ, ಗೋವಿಂದ ನಾಯ್ಕ್‌, ಶೇಖರ್‌, ಯೂತ್‌ ಕಾಂಗ್ರೆಸ್‌ ತಾಲ್ಲೂಕು ಉಪಾಧ್ಯಕ್ಷ ನಾಗೇಶ್‌, ಪ್ರಧಾನ ಕಾರ್ಯದರ್ಶಿ ಹಿಮಗಿರಿ, ಗ್ರಾಮದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.