ರಾಮನಗರ: ಜಿಲ್ಲಾಡಳಿತವು ಚನ್ನಪಟ್ಟಣ ಉಪ ಚುನಾವಣೆಯ ಮಾದರಿ ನೀತಿ ಸಂಹಿತೆ ನೆಪದಲ್ಲಿ ದಾಸಶ್ರೇಷ್ಠ ಕನಕದಾಸರ ಜನ್ಮ ಜಯಂತಿ ಕಾರ್ಯಕ್ರಮವನ್ನು ಕೇವಲ ಸರ್ಕಾರಿ ಇಲಾಖೆಗಳಿಗಷ್ಟೇ ಸೀಮಿತಗೊಳಿಸಿದೆ. ಸಮುದಾಯದ ಯಾವ ಮುಖಂಡರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಅವಮಾನ ಮಾಡಿದೆ ಎಂದು ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಕುಂಬಾಪುರ ಗ್ರಾಮದಲ್ಲಿರುವ ಕುರುಬರ ಸಂಘದ ಆವರಣದಲ್ಲಿ ಸೋಮವಾರ ಜರುಗಿದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮನಗರ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ರೇಣುಕಪ್ಪ, ‘ಚುನಾವಣೆ ನೆಪದಲ್ಲಿ ಕನಕದಾಸ ಜಯಂತಿಯನ್ನು ಕೇವಲ ಎರಡು ಇಲಾಖೆಗಳಿಗೆ ಮಾತ್ರ ಸೀಮಿತಗೊಳಿಸಿ ಸರಳವಾಗಿ ಆಚರಿಸಲಾಗಿದೆ. ಮೂಲಕ ಮಹಾನ್ ವ್ಯಕ್ತಿಗೆ ಅವಮಾನ ಮಾಡಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕನಕದಾಸ ಜಯಂತಿ ಆಚರಣೆಗೂ ಮುನ್ನ ಜಿಲ್ಲಾಡಳಿತವು ಸಮುದಾಯದ ಮುಖಂಡರನ್ನು ಕರೆದು ಪೂರ್ವಭಾವಿ ಸಭೆ ಕರೆದು ಕಾರ್ಯಕ್ರಮದ ರೂಪುರೇಷೆಗಳನ್ನು ಚರ್ಚಿಸುತ್ತಿತ್ತು. ಈ ಸಲ ಸಭೆಯನ್ನು ಕರೆದಿಲ್ಲ. ಚುನಾವಣೆ ಕಾರಣಕ್ಕೆ ಸಭೆ ಕರೆಯದಿರಬಹುದು. ಆದರೆ, ಕಾರ್ಯಕ್ರಮಕ್ಕೂ ನಮ್ಮನ್ನು ಆಹ್ವಾನಿಸದೆ ಇರುವುದು ಸರಿಯಲ್ಲ’ ಎಂದರು.
ಕಾರ್ಯಕ್ರಮಕ್ಕೆ ₹4 ಸಾವಿರ ಮಾತ್ರ: ‘ನಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದ ಹಾಗೂ ಅರ್ಥಪೂರ್ಣವಾಗಿ ಆಚರಿಸದ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ, ನಮಗೆ ಕಾರ್ಯಕ್ರಮ ಆಚರಣೆಗೆ ನಿಗದಿಯಾಗಿರುವ ಮೊತ್ತ ಕೇವಲ ₹3 ಸಾವಿರ ಮಾತ್ರ ಎನ್ನುತ್ತಾರೆ. ಹಣದ ಕೊರತೆ ಇದ್ದರೆ, ಸಮುದಾಯದ ಮುಖಂಡರನ್ನ ಕೇಳಿದ್ದರೆ ಕೊಡುತ್ತಿದ್ದೆವು. ಅದಕ್ಕಾಗಿ, ಮಹಾನ್ ವ್ಯಕ್ತಿಯ ಜನ್ಮ ಜಯಂತಿ ಆಚರಣೆ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಹೇಗೆ?’ ಎಂದು ಪ್ರಶ್ನಿಸಿದರು.
‘ಕಾರ್ಯಕ್ರಮದ ಕುರಿತು ಅಧಿಕಾರಿಗಳ ಧೋರಣೆಯನ್ನು ಖಂಡಿಸಿ, ಸಮುದಾಯದ ಮುಖಂಡರು ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೆವು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸುಮ್ಮನಾದೆವು. ಅಧಿಕಾರಿಗಳು ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು. ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸಬೇಕು’ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಅರಳಪ್ಪ, ಖಜಾಂಚಿ ಉಮೇಶ್, ಉಪಾಧ್ಯಕ್ಷ ಸಿದ್ದೇಗೌಡ, ಸಹ ಕಾರ್ಯದರ್ಶಿ ಬಸವರಾಜು, ಮುಖಂಡರಾದ ಪುಟ್ಟರಾಜು, ರಾಮಕೃಷ್ಣಯ್ಯ, ರುದ್ರಯ್ಯ, ಚನ್ನಮಾನಹಳ್ಳಿ ರಾಜು, ಮಂಜು, ಸಿ. ಕೆಂಪಣ್ಣ, ನಾಗ ಸಂದೀಪ್, ಹೊಸೂರುದೊಡ್ಡಿ ಪಾಪಣ್ಣ, ನಂಜುಂಡಪ್ಪ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.