ಕನಕಪುರ: ಕಾಡಾನೆಗಳ ಗುಂಪೊಂದು ಭಾನುವಾರ ರಾತ್ರಿ ತಾಲ್ಲೂಕಿನ ನಾರಾಯಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಬ್ಬಳ್ಳಿ ಮತ್ತು ಬೆಟ್ಟಳ್ಳಿ ಸುತ್ತಮುತ್ತಲಿನ ಜಮೀನುಗಳಿಗೆ ನುಗ್ಗಿ ಭತ್ತ, ರಾಗಿ, ತೆಂಗಿನ ಸಸಿ, ಮಾವಿನ ಗಿಡ, ರೇಷ್ಮೆ ತೋಟ, ಭತ್ತದ ಪೈರು ನಾಶಗೊಳಿಸಿವೆ.
ಕೆಬ್ಬಳ್ಳಿಯ ಶಿವರಾಜು, ಶಿವಣ್ಣ, ಮಲ್ಲೇಶ್, ಲಿಂಗೇಗೌಡ, ಬೆಟ್ಟೇಗೌಡನ ದೊಡ್ಡಿ ರವಿಕುಮಾರ್, ಕಾಶಿಗೌಡ, ಕುಮಾರ್ ಅವರ ರಾಗಿ, ಬೈರೇಗೌಡ ಮುಂತಾದವರು ಜಮೀನುಗಳಿಗೆ ಕಾಡಾನೆ ಹಿಂಡು ದಾಳಿ ನಡೆಸಿದೆ.
ಈ ಭಾಗದಲ್ಲಿ ಕಾಡಾನೆಗಳು ನಿರಂತರವಾಗಿ ದಾಳಿ ನಡೆಸಿ ಬೆಳೆಗಳನ್ನು ನಾಶಪಡಿಸುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ದಾಳಿ ತಡೆಗಟ್ಟುತಿಲ್ಲ ಎಂದು ಸಂತ್ರಸ್ತ ರೈತರ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ವನ್ಯಜೀವಿಧಾಮ ಮತ್ತು ಪ್ರಾದೇಶಿಕ ಅರಣ್ಯ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ. ಕಾಡಾನೆಗಳು ದಾಳಿ ನಡೆಸಿದಾಗ ಮಾಹಿತಿ ನೀಡಿದರೆ ‘ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಪ್ರಾದೇಶಿಕ ಅರಣ್ಯ ಮತ್ತು ವನ್ಯಜೀವಿಧಾಮದ ಅಧಿಕಾರಿಗಳು ಜಾರಿಕೊಳ್ಳುತ್ತಾರೆ. ಅಧಿಕಾರಿಗಳು ಸಮನ್ವಯದಿಂದ ಕಾಡಾನೆಗಳು ಕಾಡಿನಿಂದ ಹೊರಬರದಂತೆ ನಿಯಂತ್ರಿಸಬೇಕು. ಅರಣ್ಯದಿಂದ ಹೊರ ಬಂದಿರುವ ಪ್ರಾಣಿಗಳನ್ನು ತ್ವರಿತವಾಗಿ ಅರಣ್ಯಕ್ಕೆ ಅಟ್ಟಬೇಕು ಎಂದು ರೈತ ಸಂಘದ ಮುಖಂಡ ಶಿವರಾಜು ಆಗ್ರಹಿಸಿದರು.
ಕಾಡಾನೆ ದಾಳಿಯಿಂದ ನಾಶವಾದ ಬೆಳೆಗಳಿಗೆ ಪರಿಹಾರ ನೀಡುವಲ್ಲೂ ಅರಣ್ಯ ಇಲಾಖೆ ರೈತರಿಗೆ ವಂಚನೆ ಮಾಡುತ್ತಿದೆ. ಒಂದು ಎಕರೆಗೆ ರೈತರು 13 ಕ್ವಿಂಟಲ್ ರಾಗಿ ಬೆಳೆಯುತ್ತಾರೆ. ಆದರೆ, ಅರಣ್ಯ ಇಲಾಖೆ 7 ಕ್ವಿಂಟಲ್‌ಗೆ ಮಾತ್ರ ಪರಿಹಾರ ನೀಡುತ್ತದೆ. ಸರ್ಕಾರ ರೈತರಿಂದ ಕ್ವಿಂಟಲ್ ರಾಗಿಯನ್ನು ₹4,300 ಬೆಂಬಲ ಬೆಲೆಯಲ್ಲಿ ಖರೀದಿ ಮಾಡುತ್ತದೆ ಎಂದರು.
ಅದರೆ, ಕಾಡಾನೆ ದಾಳಿಯಿಂದ ರಾಗಿ ಬೆಳೆ ನಾಶವಾದರೆ ಕ್ವಿಂಟಲ್‌ಗೆ ₹2,200 ಮಾತ್ರ ಪರಿಹಾರ ಸಿಗುತ್ತದೆ. ಇದು ಅವೈಜ್ಞಾನಿಕ. ಕಾಡಾನೆ ದಾಳಿಯಿಂದ ಎಕರೆ ರಾಗಿ ನಾಶವಾದರೆ 10 ಕ್ವಿಂಟಲ್‌ಗೂ ಹೆಚ್ಚು ಪರಿಹಾರವನ್ನು ಬೆಂಬಲ ಬೆಲೆಯಂತೆ ಲೆಕ್ಕಹಾಕಿ ನೀಡಬೇಕೆಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.