ADVERTISEMENT

ಕನಕಪುರಕ್ಕೆ ಮಾತ್ರ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ ಏಕೆ? ಕಾರ್ಯಕರ್ತರ ಆಕ್ರೋಶ

ಕನಕಪುರ: ಸಭೆಯಲ್ಲಿ ಮುಖಂಡರ ವಿರುದ್ಧ ಕಾರ್ಯಕರ್ತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 12:42 IST
Last Updated 19 ಜನವರಿ 2023, 12:42 IST
ಕನಕಪುರದಲ್ಲಿ ನಡೆದ ಜೆಡಿಎಸ್‌ ಸಭೆಯಲ್ಲಿ ಪಾಲ್ಗೊಂಡಿರುವ ಜೆಡಿಎಸ್‌ ಮುಖಂಡರು
ಕನಕಪುರದಲ್ಲಿ ನಡೆದ ಜೆಡಿಎಸ್‌ ಸಭೆಯಲ್ಲಿ ಪಾಲ್ಗೊಂಡಿರುವ ಜೆಡಿಎಸ್‌ ಮುಖಂಡರು   

ಕನಕಪುರ: ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಶೀಘ್ರವಾಗಿ ಜೆಡಿಎಸ್‌ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕೆಂದು ಕಾರ್ಯಕರ್ತರು
ಒತ್ತಾಯಿಸಿದ್ದಾರೆ.

ನಗರದ ಖಾಸಗಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪಂಚರತ್ನ ರಥಯಾತ್ರೆಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಈ ಬೇಡಿಕೆ ಪ್ರತಿಧ್ವನಿಸಿತು.

ಜಿಲ್ಲೆಯ ಚನ್ನಪಟ್ಟಣ, ರಾಮನಗರ ಮಾಗಡಿ ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿ ಕನಕಪುರಕ್ಕೆ ಮಾತ್ರ ಮಾಡಿಲ್ಲ. ಇದರ ಅರ್ಥವೇನು?, ಇಲ್ಲಿ ಪಕ್ಷವನ್ನು ಸಂಘಟಿಸಲು ಪಕ್ಷದ ವರಿಷ್ಠರು ಆಗಮಿಸುತ್ತಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಅಭ್ಯರ್ಥಿ ಘೋಷಣೆ ವಿಚಾರವಾಗಿ ಸಭೆಯಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಗಿ ಕಾರ್ಯಕರ್ತರು ಮುಖಂಡರು ವಿರುದ್ದ ಕಾರ್ಯಕರ್ಯರು ಆಕ್ರೋಶವನ್ನು ಹೊರ ಹಾಕಿದರು.

ಈ ವೇಳೆ ಜೆಡಿಎಸ್‌ ಮಾಜಿ ಅಧ್ಯಕ್ಷ ಸಿದ್ದಮರಿಗೌಡ ಮಾತನಾಡಿ, ಇಷ್ಟ ಇರುವವರು ಇಲ್ಲಿ ಇರಬಹುದು, ಇಷ್ಟ ಇಲ್ಲದವರು ಸಭೆಯಿಂದ ಆಚೆ ಹೋಗಬಹುದು ಎಂದಾಗ ಕಾರ್ಯಕರ್ತರು ಸಿದ್ದಮರೀಗೌಡ ಅವರ ವಿರುದ್ದ ಮುಗಿಬಿದ್ದರು.

‘ಪಕ್ಷ ಅಥವಾ ಸಭೆಯಿಂದ ಹೊರ ಹೋಗಿ ಎನ್ನಲು ನೀವ್ಯಾರು, ಇಲ್ಲಿ ಬಂದಿರುವವರೆಲ್ಲಾ ಪಕ್ಷದ ಸ್ವಾಭಿಮಾನಿ ಕಾರ್ಯಕರ್ತರು ಎಂದು ವಾಗ್ದಾಳಿ’ ನಡೆಸಿದರು.

ನಗರಸಭಾ ಸದಸ್ಯ ಸ್ಟುಡಿಯೋ ಚಂದ್ರು ಮಾತನಾಡಿ, ‘ಹೀಗೆ ಮಾತನಾಡುತ್ತಿರುವುದು ಸರಿಯಿಲ್ಲ. ಕಾರ್ಯಕರ್ತರಲ್ಲಿ ಒಡಕು ಮೂಡಿಸುತ್ತಿದ್ದೀರಿ, ಪಕ್ಷದ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಮೂಡಲು ನೀವೇ ಕಾರಣರಾಗುತ್ತಿದ್ದೀರಿ’ ಎಂದು ಹರಿಹಾಯ್ದರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ನಾಗರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಚಿನ್ನಸ್ವಾಮಿ ಮಧ್ಯ ಪ್ರವೇಶಿಸಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.

ಪಕ್ಷದ ಮುಖಂಡರಾದ ನಲ್ಲಹಳ್ಳಿ ಶಿವಕುಮಾರ್‌, ಜಯರಾಮು, ನಂಜೇಗೌಡ, ಕಬ್ಬಾಳೇಗೌಡ, ಅಣ್ಣನಾಯ್ಕ, ಗೇರಳ್ಳಿ ರಾಜೇಶ್, ಸಣ್ಣಪ್ಪ, ಮುಳ್ಳಳ್ಳಿ ಮಹೇಶ್, ಚಂದ್ರಶೇಖರ್, ಲೋಕೇಶ್‌, ದುರ್ಗಯ್ಯ, ಅನುಕುಮಾರ್‌, ಮಂಜುಕುಮಾರ್‌, ಯೋಗೇಶ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.