
ಕನಕಪುರ: ನಗರಸಭೆಯ 2026-27ನೇ ಸಾಲಿನ ಬಜೆಟ್ ತಯಾರಿ ಪೂರ್ವಭಾವಿ ಸಭೆ ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆಯಿತು.
ನಗರಸಭೆಗೆ ಯಾವ ರೀತಿ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಬೇಕೆಂಬುದರ ಬಗ್ಗೆ, ನಾಗrIಕರು ನಗರಸಭೆ ಮಾಜಿ ಸದಸ್ಯರು, ಸಂಘ ಸಂಸ್ಥೆಗಳ ಮುಖಂಡರು ಸಲಹೆ ಸೂಚನೆ ನೀಡುವಂತೆ ಪೌರಾಯುಕ್ತ ಶ್ರೀನಿವಾಸ್ ಸಭೆಗೆ ತಿಳಿಸಿದರು.
ಸಭೆಯಲ್ಲಿ ಮಾಜಿ ಸದಸ್ಯರು, ಸಂಘ-ಸಂಸ್ಥೆ ಮುಖಂಡರು, ಸಾರ್ವಜನಿಕರು ಮಾತನಾಡಿ, ನಗರಸಭೆಯವರು ಆರ್ಥಿಕ ಕ್ರೋಢೀಕರಣಕ್ಕೆ ಸರಿಯಾದ ಮಾರ್ಗೋಪಾಯಗಳನ್ನು ಮಾಡುತ್ತಿಲ್ಲ. ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ ಎಂದು ಆರೋಪಿಸಿದರು.
ನಗರಸಭೆಯಿಂದ ನಿರ್ಮಾಣ ಮಾಡಿರುವ ವಾಣಿಜ್ಯ ಮಳಿಗೆಗಳು ಹಲವು ವರ್ಷಗಳಿಂದ ಬಾಡಿಗೆಗೆ ನೀಡದೆ ಖಾಲಿ ಉಳಿದಿವೆ. ಒಂದು ವರ್ಷದ ಹಿಂದೆ ಮರು ಹರಾಜು ಮಾಡಿ ಅಂಗಡಿ ಮಳಿಗೆಗಳನ್ನು ನೀಡಿದ್ದರು. ಅಂಗಡಿ ಬಾಡಿಗೆಗೆ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ ಎಂದು ದೂರಿದರು.
ಭೂಮಿ ಪರಿವರ್ತನೆ ಮಾಡದೆ ಕಂದಾಯ ಜಮೀನುಗಳಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ ಮನೆಗಳನ್ನು ನಗರಸಭೆಗೆ ಸೇರಿಸಿಕೊಂಡು ಖಾತೆ ಮಾಡಿಕೊಡುವುದಾಗಿ ಹಣ ಕಟ್ಟಿಸಿಕೊಂಡು ವರ್ಷವೇ ಕಳೆದರೂ ಅವರಿಗೆ ಖಾತೆ ಮಾಡಿಕೊಟ್ಟಿಲ್ಲ. ಖಾತೆ ಮಾಡಿಕೊಟ್ಟಿದ್ದರೆ ಹೆಚ್ಚಿನ ಕಂದಾಯ ವಸೂಲಿಯಾಗುತ್ತಿತ್ತು ಎಂದು ತಿಳಿಸಿದರು.
ನಗರದ ಜನರಿಗಾಗಿ ನಿರ್ಮಾಣ ಮಾಡಿರುವ ಸ್ಮಶಾನದ ಅಭಿವೃದ್ಧಿ ಮಾಡದ ಕಾರಣ ಮೂಲ ಸೌಕರ್ಯಗಳಿಲ್ಲದೆ ಜನರಿಗೆ ತೊಂದರೆಯಾಗುತ್ತಿದೆ. ಹಲವು ಬಾರಿ ಮೂಲಸೌಕರ್ಯಗಳ ವ್ಯವಸ್ಥೆ ಮಾಡುವಂತೆ ಸ್ಮಶಾನಗಳ ಅಭಿವೃದ್ಧಿಪಡಿಸುವಂತೆ ನಗರಸಭೆ ಸದಸ್ಯರೇ ಒತ್ತಾಯ ಮಾಡಿದ್ದರು ನಗರಸಭೆ ಗಮನ ಹರಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿ ಜನರು ಕಷ್ಟಪಡುವಂತಾಗಿದೆ. ನಾಯಿಗಳ ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದರು ಪ್ರಯೋಜನ ಆಗಿಲ್ಲ. ಅದಕ್ಕಾಗಿ ಸಾಕಷ್ಟು ಹಣ ಖರ್ಚಾಗಿದೆ. ನಗರಸಭೆ ಅಧಿಕಾರಿಗಳು ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಅವುಗಳಿಗೆ ಪ್ರತ್ಯೇಕವಾಗಿ ಶೆಲ್ಟರ್ ನಿರ್ಮಿಸಿ ನಿರ್ವಹಣೆ ಮಾಡಬೇಕೆಂದು ಆಗ್ರಹಿಸಿದರು.
ನಗರಸಭೆಯಲ್ಲಿ ಐದು ಕೋಟಿಯಷ್ಟು ಹಣವಿದೆ. ಹಣವನ್ನು ಕಾವೇರಿ ನೀರು ಪೂರೈಕೆಗೆ ನೀಡಬೇಕೆಂದು ಕಾಯ್ದಿರಿಸಿಕೊಳ್ಳಲಾಗಿದೆ. ನಗರದಲ್ಲಿ ಮೂಲಸೌಕರ್ಯಗಳ ಕೊರತೆ ಇದ್ದರು ಅವುಗಳನ್ನು ಮಾಡುತ್ತಿಲ್ಲ. ನಗರಸಭೆಯಲ್ಲಿ ಏನಾಗುತ್ತಿದೆ. ಡಿಸಿಎಂ ಕ್ಷೇತ್ರದಲ್ಲಿ ಅನುದಾನದ ಕೊರತೆಯೆ ಎಂದು ಪ್ರಶ್ನೆ ಮಾಡಿದರು.
ನಗರಸಭೆ ಅಧಿಕಾರಿ ಶಿವಣ್ಣ ಮಾತನಾಡಿ, ‘ನಾವು ಇಲ್ಲಿ ಬಜೆಟ್‌ಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು, ಸಲಹೆ ಸೂಚನೆ ಪಡೆಯಲು ಪೂರ್ವಭಾವಿ ಸಭೆ ನಡೆಸುತ್ತಿದ್ದೇವೆ. ಆದರೆ ಇದು ಒಂದು ರೀತಿಯ ಕುಂದುಕೊರತೆ ಸಭೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ನಗರಸಭೆ ಮಾಜಿ ಸದಸ್ಯರು, ಸಂಘ ಸಂಸ್ಥೆಯ ಮುಖಂಡರು, ನಾಗರಿಕರು ಅದರಿಂದ ಕೆರಳಿ ನಮಗೆ ಕುಂದುಕೊರತೆ ಸಭೆಗೂ ಬಜೆಟ್ ಪೂರ್ವಭಾವಿ ತಯಾರಿ ಸಭೆಗೆ ವ್ಯತ್ಯಾಸ ಗೊತ್ತಾಗುತ್ತಿಲ್ಲವೇ ಎಂದು ಕಿಡಿಕಾರಿದರು.
‘ಎಲ್ಲಿ ಏನು ಸಮಸ್ಯೆಗಳಿವೆ ಎಂಬುದರ ಬಗ್ಗೆ ನಾವು ತಿಳಿಸುತ್ತಿದ್ದೇವೆ. ಆದರೆ ನೀವು ನಮ್ಮ ಸಲಹೆ ಸೂಚನೆಗಳನ್ನು ಸ್ವೀಕರಿಸುತ್ತಿಲ್ಲ’ ಎಂದು ದೂರಿದರು.
ನಗರಸಭೆಯಲ್ಲಿ ಒಂದು ಕಡೆ ರಸ್ತೆ ಅಭಿವೃದ್ಧಿ ಮಾಡಿದರೆ ಮತ್ತೊಂದು ಕಡೆ ಅದೇ ರಸ್ತೆಯನ್ನು ಅಗೆಯುತ್ತಾರೆ. ಯಾವುದೇ ಮಾರ್ಗಸೂಚಿ ಇಲ್ಲದೆ ರಸ್ತೆಗಳನ್ನು ಅಗೆದು ಹಾಳು ಮಾಡುತ್ತಿದ್ದಾರೆ. ತಿಂಗಳಾದರೂ ಸರಿಪಡಿಸುವುದಿಲ್ಲ. ಈ ರೀತಿ ಮಾಡುವುದರಿಂದ ನಗರಸಭೆ ಹಣ ಹಾಳಾಗುತ್ತದೆ. ಅಭಿವೃದ್ಧಿ ಕೆಲಸ ಹಾಳಾಗುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.
ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಮಾತನಾಡಿ, ಬಜೆಟ್ ಪೂರ್ವಭಾವಿ ಸಭೆಯಲ್ಲಿ ಎಲ್ಲರೂ ಸಮಸ್ಯೆ, ಕುಂದುಕೊರತೆ ಹಾಗೂ ನಗರದ ಅಭಿವೃದ್ಧಿ ಬಗ್ಗೆ ತಿಳಿಸಿದ್ದೀರಿ. ಅದರ ಜತೆಗೆ ಆರ್ಥಿಕ ಕ್ರೋಢೀಕರಣ ಯಾವ ರೀತಿ ಮಾಡಬೇಕೆಂಬುದರ ಬಗ್ಗೆ ಸಲಹೆ ನೀಡಿ. ಸಲಹೆ ಸ್ವೀಕರಿಸಿ ಬಜೆಟ್ ತಯಾರಿಸಿ ಉತ್ತಮ ಆಡಳಿತದೊಂದಿಗೆ ನಗರದ ಅಭಿವೃದ್ಧಿ ಕೆಲಸ ಮಾಡುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.