ADVERTISEMENT

ಜ.28ರಿಂದ ಜಿಲ್ಲಾ ಕನಕೋತ್ಸವ

ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿಮೆಂಟ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:31 IST
Last Updated 20 ಜನವರಿ 2026, 2:31 IST
ಕನಕಪುರ ಸೋಮವಾರ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿಮೆಂಟ್‌ ತಂಡದ ನಾಯಕರನ್ನು ಸುರೇಶ್ ಪರಿಚಯ ಮಾಡಿಕೊಂಡರು
ಕನಕಪುರ ಸೋಮವಾರ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿಮೆಂಟ್‌ ತಂಡದ ನಾಯಕರನ್ನು ಸುರೇಶ್ ಪರಿಚಯ ಮಾಡಿಕೊಂಡರು   

ಕನಕಪುರ: ಕ್ರೀಡಾ ಸಂಸ್ಕೃತಿಯು ಮನುಷ್ಯನಿಗೆ ಒಂದು ಅವಿನಾಭಾವ ಸಂಬಂಧವಿದೆ ಕಲ್ಪಿಸುತ್ತದೆ. ಜಾತಿ, ಧರ್ಮ, ಹಿರಿಯ, ಕಿರಿಯ, ಬಡವ ಶ್ರೀಮಂತ ಎಂಬುದನ್ನು ಮೀರಿದ್ದಾಗಿದೆ. ಇಲ್ಲಿ ಎಲ್ಲವೂ ಒಂದೇ ಎಂಬ ಭಾವನೆ ಇದೆ ಎಂದು ಮಾಜಿ ಸಂಸದ ಬಮೂಲ್ ಅಧ್ಯಕ್ಷ ಡಿ‌.ಕೆ.ಸುರೇಶ್ ಅಭಿಪ್ರಾಯಪಟ್ಟರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿಮೆಂಟ್‌ಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿ ಪ್ರತಿಭೆ, ಕನಸುಗಳಿವೆ. ಅವುಗಳನ್ನು ಸಾಕಾರಗೊಳಿಸಲು ಕನಕೋತ್ಸವ ಮೂಲಕ ದೊಡ್ಡ ವೇದಿಕೆ ಕಲ್ಪಿಸಿಕೊಡಲಾಗಿದೆ. ಕನಕೋತ್ಸವ, ರಾಮೋತ್ಸವ, ಚನ್ನಪಟ್ಟಣದಲ್ಲಿ ಗಂಗೋತ್ಸವ, ಕುಣಿಗಲ್ ಉತ್ಸವ ನಡೆಸಲಾಗುತ್ತಿದೆ ಎಂದರು.

ADVERTISEMENT

ಕ್ಷೇತ್ರದ ಅಭಿವೃದ್ಧಿ ಜತೆಗೆ ಜನರ ಆಶೋತರಗಳಿಗೆ ಸ್ಪಂದಿಸಬೇಕು. ಜನರು ಖುಷಿಯಾಗಿ ಸಂತೋಷದಿಂದ ನಗುತಿರಬೇಕು. ಜನರು ಖುಷಿಯಾಗಿದ್ದರೆ ಅದು ನಮಗೆ ಶ್ರೀರಕ್ಷೆ. ಈ ನಿಟ್ಟಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕುಣಿಗಲ್ ಸೇರಿದಂತೆ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಕಾರ್ಯಕ್ರಮ ನಡೆಸುತ್ತಿರುವುದಾಗಿ ತಿಳಿಸಿದರು.

ಜನವರಿ 28ರಿಂದ ಫೆಬ್ರವರಿ 1ವರೆಗೆ ಜಿಲ್ಲಾ ಮಟ್ಟದ ಕನಕೋತ್ಸವ ಐದು ದಿನಗಳ ಕಾಲ ನಡೆಯಲಿದೆ. ಮಂಗಳವಾರ ಸಂಜೆ ವೇಳೆಗೆ ಸೆಮಿ ಫೈನಲ್ ಮತ್ತು ಫೈನಲ್ ಟೂರ್ನಿಮೆಂಟ್‌ ನಡೆಯಲಿದೆ. ಡಿ.ಕೆ.ಶಿವಕುಮಾರ್ ಕಾರ್ಯಕ್ರಮದಲ್ಲಿ ‍ಪಾಲ್ಗೊಳ್ಳಲಿದ್ದಾರೆ ಎಂದರು. 

ಮಾತಿಗೆ ನಿಲ್ಲುವರು: ಡಿ.ಕೆ.ಶಿವಕುಮಾರ್ ಅವರು 35 ವರ್ಷಗಳಿಂದ ಶಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಏನೇ ಮಾತು ಕೊಟ್ಟರು ಅದನ್ನು ನಡೆಸಿಕೊಡುತ್ತಾರೆ. ಮಾತು ಕೊಟ್ಟರೆ ಕೆಂಕೆರಮ್ಮ ಮತ್ತು ಕಬ್ಬಾಳಮ್ಮ ದೇವಿ ಆಶೀರ್ವಾದದಿಂದ ಅದಕ್ಕೆ ಬದ್ಧರಾಗಿ ನಿಲ್ಲುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.

ಶಾಸಕ ರಂಗನಾಥ್ ಮಾತನಾಡಿ, ‘ಈ ಬಾರಿ ಮ್ಯಾನ್ ಆಫ್ ದಿ ಮ್ಯಾಚ್‌ಗೆ ಬೈಕ್ ಇಡಲಾಗಿದೆ. ಮುಂದೆ ಕಾರು ಬಹುಮಾನವಾಗಿ ಇಡಲಿ. ನಾನು ಕೊಡುತ್ತೇನೆ ಎಂದು ಹೇಳಿದ್ದಕ್ಕೆ ಸುರೇಶ್, ಮುಂದಿನ ಬಾರಿಗೆ ರಂಗನಾಥ್ ಅವರೇ ಕಾರು ಬಹುಮಾನ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ಅದನ್ನು ಗ್ಯಾರಂಟಿ ಪಡಿಸಬೇಕು. ಇಲ್ಲವಾದರೆ ಕೆಲವರು ಈಗ ಒಪ್ಪಿಕೊಂಡು ಮುಂದೆ ಉಲ್ಟಾ ಹೊಡೆಯುತ್ತಾರೆ’ ಎಂದು ಪರೋಕ್ಷವಾಗಿ ಪ್ರಸಕ್ತ ರಾಜಕೀಯ ಬೆಳವಣಿಗೆಯನ್ನು ಕುಟುಕಿದರು.  

ಶಾಲೆ ಮಕ್ಕಳು ನೃತ್ಯದ ಮೂಲಕ ಕ್ರಿಕೆಟ್ ಟೂರ್ನಿಮೆಂಟಿಗೆ ಚಾಲನೆ ನೀಡಿದರು. ನೃತ್ಯ ಎಲ್ಲರ ಗಮನ ಸೆಳೆಯಿತು.

ವಿಧಾನ ಪರಿಷತ್ ಸದಸ್ಯ ಎಸ್ ರವಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ಆರ್‌ಇಎಸ್ ಅಧ್ಯಕ್ಷ ಎಚ್.ಕೆ.ಶ್ರೀಕಂಠ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಎನ್.ದಿಲೀಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಾತನೂರು ನಾಗರಾಜು, ಮುತ್ತುರಾಜು, ಕೆ.ಆರ್.ಮಧು, ಮುಖಂಡರಾದ ವಿಶ್ವನಾಥ್, ಬಸಪ್ಪ, ಕೆಂಪುರಾಜು, ಅನಿಲ್, ದೀಪು, ಹೇಮರಾಜು, ರೋಹಿಣಿ, ವೆಂಕಟೇಶ್, ಹರೀಶ್, ಮುನುಚ್ಚೇಗೌಡ, ಶಾಂತರಾಜು, ನಾಗೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ ನೀಡಿ ಮಾಜಿ ಸಂಸದ ಡಿ.ಕೆ ಸುರೇಶ್ ಮಾತನಾಡಿದರು
ಕನಕಪುರ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಗೆ ಗುರುತಿನ ಮೂಲಕ ಚಾಲನೆ ನೀಡಿದ ನೃತ್ಯ ತಂಡದ ಮಕ್ಕಳಿಗೆ ಡಿಕೆ ಸುರೇಶರಿಂದ ಸನ್ಮಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.