ADVERTISEMENT

ಕನಕಪುರ | ಭೋವಿ ಸಮುದಾಯದವರ ಮೇಲೆ ಹಲ್ಲೆ: ಮೂವರ ಬಂಧನ

ತಾಮಸಂದ್ರ ವೃತ್ತದಲ್ಲಿ ಬಿಗುವಿನ ವಾತಾವರಣ; ಹಲ್ಲೆ ನಡೆಸಿದ 16 ಮಂದಿ ವಿರುದ್ಧ ಪ್ರಕರಣ,

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 6:15 IST
Last Updated 18 ಜುಲೈ 2024, 6:15 IST
ಹಲ್ಲೆಗೊಳಗಾದ ಗ್ರಾಮಸ್ಥರು ತಾಮಸಂದ್ರ ಸರ್ಕಲ್‌ನ ರಾಮನಗರ–ಕನಕಪುರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು
ಹಲ್ಲೆಗೊಳಗಾದ ಗ್ರಾಮಸ್ಥರು ತಾಮಸಂದ್ರ ಸರ್ಕಲ್‌ನ ರಾಮನಗರ–ಕನಕಪುರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು   

ಕನಕಪುರ: ತಾಲ್ಲೂಕಿನ ತಾಮಸಂದ್ರ ವೃತ್ತದಲ್ಲಿ ಬುಧವಾರ ಮೇಲ್ಜಾತಿ ತಿಗಳ ಸಮುದಾಯದ ಗುಂಪೊಂದು ಭೋವಿ ಸಮುದಾಯದವರ ವಾಸ ಸ್ಥಳಕ್ಕೆ ನುಗ್ಗಿ, ಲಾಂಗು ಮತ್ತು ಮಚ್ಚುಗಳಿಂದ ಮಹಿಳೆಯರು ಸೇರಿದಂತೆ ಸುಮಾರು 12 ಮಂದಿ ಮೇಲೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದೆ. ಘಟನೆಯಿಂದ ಬೆಚ್ಚಿ ಬಿದ್ದಿರುವ ಗ್ರಾಮಸ್ಥರು ಕನಕಪುರ–ರಾಮನಗರ ರಸ್ತೆಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು, ಎಸ್.ಸಿ ಮತ್ತು ಎಸ್‌.ಟಿ
ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ವಿವಿಧ ಕಲಂಗಳಡಿ 16 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಮೂವರು ಆರೋಪಿಗಳಾದ ಪ್ರಸಾದ್ ಅಲಿಯಾಸ್ ಕರಿಯಪ್ಪ, ನಾಗೇಂದ್ರ ಹಾಗೂ ಆಟೋ ಮಹದೇವ ಎಂಬಾತನನ್ನು ಘಟನೆ ನಡೆದ ಕೆಲವೇ ತಾಸಿನಲ್ಲಿ ಬಂಧಿಸಿದ್ದಾರೆ.

ತಲೆ ಮರೆಸಿಕೊಂಡಿರುವ ಮೇಗಳ ಬೀದಿಯ ಮಂಜು, ಕೀರ್ತಿ, ಶರತ್, ನಾಗೇಂದ್ರ ತಂದೆ ನಾಗಲಿಂಗಯ್ಯ ಸೇರಿದಂತೆ ಉಳಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯಲ್ಲಿ ಭರತ್ ಎಂಬುವರ ತಲೆಗೆ ಗಾಯವಾಗಿದ್ದು, ಅವರ ಪತ್ನಿ ಶಶಿಕಲಾಗೂ ಪೆಟ್ಟು ಬಿದ್ದಿದೆ. ಹೆಚ್ಚು ಗಾಯವಾಗಿರುವವರು ಆಸ್ಪತ್ರೆಗೆ ದಾಖಲಾಗಿದ್ದು, ಸಣ್ಣಪುಟ್ಟ ಗಾಯವಾಗಿರುವವರು ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಪೊಲೀಸರು ಹೇಳಿದರು.

ADVERTISEMENT

ಶಾಮಿಯಾನ ವಿಷಯಕ್ಕೆ ಜಗಳ: ತಾಮಸಂದ್ರ ವೃತ್ತದಲ್ಲಿ ಬೋವಿ ಸಮುದಾಯದ 50ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿವೆ. ಈ ವೃತ್ತದ ಮುಂದೆ ಸ್ವಲ್ಪ ದೂರದಲ್ಲಿರುವ ಹೊಸಕೋಟೆ ಎಂಬ ಊರಿನಲ್ಲಿ ತಿಗಳ ಸಮುದಾಯದವರಿದ್ದಾರೆ. ಜುಲೈ 11ರಂದು ತಾಮಸಂದ್ರ ವೃತ್ತದ ಶ್ರೀನಿವಾಸ್ ಎಂಬುವರ ಹೊಸ ಮನೆಯ ಗೃಹ ಪ್ರವೇಶವಿತ್ತು. ಅದಕ್ಕಾಗಿ, ಗ್ರಾಮದ ರಸ್ತೆಯಲ್ಲಿ ಶಾಮಿಯಾನ ಹಾಕಿದ್ದರು.

ಇದೇ ಮಾರ್ಗದಲ್ಲಿ ಬಂದ ತಿಗಳ ಸಮುದಾಯದ ನಾಗಲಿಂಗಯ್ಯ, ಪ್ರಸಾದ್ ಹಾಗೂ ಸಹಚರರು ಶಾಮಿಯಾನ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಜಗಳ ತೆಗೆದರು. ಕಾರ್ಯಕ್ರಮ ಮುಗಿದ ಬಳಿಕ ಶಾಮಿಯನಾ ತೆಗೆಯುತ್ತೇವೆ ಎಂದ ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಶ್ರೀನಿವಾಸ್ ಅವರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಆಗ ಸ್ಥಳೀಯ ಮುಖಂಡರು ಮಧ್ಯಪ್ರವೇಶಿಸಿ, ಮತ್ತೆ ಜಗಳ ಮಾಡಿಕೊಳ್ಳದಂತೆ ಎರಡೂ ಕಡೆಯವರಿಗೆ ಹೇಳಿದ್ದರು ಎಂದು ಗ್ರಾಮಸ್ಥರು ತಿಳಿಸಿದರು.

ಇದೇ ವಿಷಯಕ್ಕೆ ಶ್ರೀನಿವಾಸ್ ಹಾಗೂ ಅವರ ಗ್ರಾಮಸ್ಥರ ಮೇಲೆ ದ್ವೇಷ ಸಾಧಿಸುತ್ತಿದ್ದ ಹೊಸಕೋಟೆ ಹಾಗೂ ಮೇಗಳ ಬೀದಿಯವರು, ಕನಕಪುರದ ರೌಡಿ ಮಂಜ ಸೇರಿದಂತೆ ಕೆಲ ಸಹಚರರೊಂದಿಗೆ ಬೆಳಿಗ್ಗೆ ಗ್ರಾಮಕ್ಕೆ ನುಗ್ಗಿದರು. ಅಲ್ಲಿದ್ದ ಭರತ್ ಮತ್ತು ಕಾರ್ತಿಕ್ ಅವರ ಮನೆಗಳ ಮೇಲೆ ಲಾಂಗು ಮತ್ತು ಮಚ್ಚುಗಳಿಂದ ದಾಳಿ ನಡೆಸಿ, ಜೀವ ಬೆದರಿಕೆ ಹಾಕಿದರು ಎಂದು ಗ್ರಾಮಸ್ಥರು ಹೇಳಿದರು.

ಎದುರಿಗೆ ಮಹಿಳೆಯರು ಸೇರಿದಂತೆ ಸಿಕ್ಕ ಸಿಕ್ಕವರನ್ನು ಕೆಟ್ಟದಾಗಿ ಜಾತಿ ಹೆಸರಿನಲ್ಲಿ ಬೈಯುತ್ತಾ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ವಾಹನಗಳ ಮೇಲೆ ಕಲ್ಲು ತೂರಿ ಜಖಂಗೊಳಿಸಿದರು. ಮಹಿಳೆಯರು ಎಂಬುದನ್ನು ನೋಡದೆ ಕೆಲವರನ್ನು ಒದ್ದರು. ಘಟನೆಯಿಂದಾಗಿ ಗ್ರಾಮದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿ, ಎಲ್ಲರೂ ಭಯಭೀತರಾಗಿ ದಿಕ್ಕಪಾಲಾಗಿ ಓಡಿದರು ಎಂದು ಸನ್ನಿವೇಶವನ್ನು ವಿವರಿಸಿದರು.

ತಾಮಸಂದ್ರ ವೃತ್ತದಲ್ಲಿ ಭೋವಿ ಸಮುದಾಯದವರು ವಾಸವಾಗಿರುವ ಸ್ಥಳಕ್ಕೆ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿದರು
ಗ್ರಾಮಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಎಸ್. ರವಿ ಅವರನ್ನು ಗ್ರಾಮಸ್ಥರು ಮುತ್ತಿಕೊಂಡು ಘಟನೆಯನ್ನು ವಿವರಿಸಿದರು

ಲಾಂಗು, ಮಚ್ಚಿನಿಂದ ಹಲ್ಲೆ; ಜೀವ ಬೆದರಿಕೆ ಗ್ರಾಮದಲ್ಲಿ ಭದ್ರತೆಗೆ ಪೊಲೀಸರ ನಿಯೋಜನೆ ಶಾಮಿಯಾನ ವಿಷಯಕ್ಕಾಗಿ ನಡೆದಿದ್ದ ಜಗಳ

ಕೂಲಿ ಕೆಲಸ ಮಾಡುವ ಭೋವಿ ಸಮುದಾಯದವರ ಮೇಲೆ ಮೇಲ್ಜಾತಿ ಸಮುದಾಯದವರು ಹಲ್ಲೆ ನಡೆಸಿರುವುದರಿಂದ ಗ್ರಾಮಸ್ಥರು ಭಯಸ್ಥರಾಗಿದ್ದಾರೆ. ಗ್ರಾಮದಲ್ಲಿ ಗಂಜಿ ಕೇಂದ್ರ ತೆರೆದು ಗ್ರಾಮಸ್ಥರಿಗೆ ರಕ್ಷನೆ ಒದಗಿಸಬೇಕು

-ಮಲ್ಲಿಕಾರ್ಜುನ್ ಅಧ್ಯಕ್ಷ ಧಮ್ಮ ದೀವಿಗೆ ಟ್ರಸ್ಟ್ ಕನಕಪುರ

2 ತಾಸು ರಸ್ತೆ ತಡೆ; ಎಸ್‌ಪಿ ಎಂಎಲ್‌ಸಿ ಭೇಟಿ ಘಟನೆಯಿಂದ ಆತಂಕಗೊಂಡ ತಾಮಸಂದ್ರ ವೃತ್ತದ ನಿವಾಸಿಗಳು ರಾಮನಗರ–ಕನಕಪುರ ರಸ್ತೆಯನ್ನು ಸುಮಾರು ಎರಡು ತಾಸು ತಡೆದು ಪ್ರತಿಭಟನೆ ನಡೆಸಿ ನ್ಯಾಯಕ್ಕೆ ಆಗ್ರಹಿಸಿದರು. ವಿಷಯ ತಿಳಿಯುತ್ತಿದ್ದಂತೆ ಕೆಲ ದಲಿತ ಸಂಘಟನೆಯವರು ಸಹ ಸ್ಥಳಕ್ಕೆ ತೆರಳಿ ಸ್ಥಳೀಯರ ಪ್ರತಿಭಟನೆಗೆ ಕೈ ಜೋಡಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸುವಂತೆ ಗ್ರಾಮಸ್ಥರಿಗೆ ಭರವಸೆ ನೀಡಿ ಪ್ರತಿಭಟನೆ ಕೈ ಬಿಡುವಂತೆ ಮನವೊಲಿಸಲು ಯತ್ನಿಸಿದರು. ಆಗ ಗ್ರಾಮಸ್ಥರು ಹೆಂಗಸರು ಮಕ್ಕಳು ವಯಸ್ಸಾದವರನ್ನು ಸಹ ನೋಡದೆ ಮಾರಕಾಸ್ತ್ರಗಳಿಂದ ಹೆದರಿಸಿ ಹಲ್ಲೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸುವವರೆಗೆ ರಸ್ತೆಯಿಂದ ಕದಲುವುದಿಲ್ಲ . ಅಲ್ಲದೆ ನಮಗೆ ರಕ್ಷಣೆ ಕೊಡಬೇಕು ಎಂದು ಪಟ್ಟು ಹಿಡಿದರು. ನಂತರ ವಿಧಾನ ಪರಿಷತ್ ಸದಸ್ಯ ಎಸ್. ರವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಡಿವೈಎಸ್ಪಿ ಗಿರಿ ಕೆ.ಪಿ ಸೇರಿದಂತೆ ಪೊಲೀಸರ ದಂಡು ಸ್ಥಳಕ್ಕೆ ಬಂತು. ‘ನಿಮಗೆ ಸೂಕ್ತ ರಕ್ಷಣೆ ಕೊಡುತ್ತೇವೆ. ಹಲ್ಲೆ ನಡೆಸಿದವರನ್ನು ಶೀಘ್ರ ಬಂಧಿಸಿ ನ್ಯಾಯ ಕೊಡಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಗ್ರಾಮಸ್ಥರು ಪ್ರತಿಭಟನೆ ನಿಲ್ಲಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಪೊಲೀಸರ ಜೊತೆಗೆ ಕೆಎಸ್‌ಆರ್‌ಪಿ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಗ್ರಾಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಜಯಪ್ರಕಾಶ್ ಗ್ರಾಮಕ್ಕೆ ನೀಡಿ ನಡೆಸಿ ಸಂತ್ರಸ್ತರಿಂದ ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.