ADVERTISEMENT

ಕನಕಪುರ– ಗೃಹ ಕಚೇರಿ ’ಕೃಷ್ಣ’ಕ್ಕೆ ಪಾದಯಾತ್ರೆ

ರೇಷ್ಮೆ ಬೆಳೆಗೆ ಬೆಂಬಲ ಬೆಲೆ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 16:00 IST
Last Updated 18 ಜುಲೈ 2018, 16:00 IST
ಕನಕಪುರ ನಗರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಎಂ.ರುದ್ರೇಶ್‌ ಮಾತನಾಡಿದರು
ಕನಕಪುರ ನಗರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಎಂ.ರುದ್ರೇಶ್‌ ಮಾತನಾಡಿದರು   

ಕನಕಪುರ: ರೇಷ್ಮೆ ಬೆಳೆಗೆ ಬೆಂಬಲ ಬೆಲೆ ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಒತ್ತಾಯಿಸಿ ಜುಲೈ 26 ರಿಂದ 28ರವರೆಗೂ ಪಟ್ಟಣದಿಂದ ಗೃಹ ಕಚೇರಿ ‘ಕೃಷ್ಣ’ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರುದ್ರೇಶ್‌ ತಿಳಿಸಿದರು.

ಪಟ್ಟಣದ ಅನ್ನಪೂಣೇಶ್ವರಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಬಿಜೆಪಿಯ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

26 ರಂದು ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಪಾದಯಾತ್ರೆ ನಡೆಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕೆಂದು ತಿಳಿಸಿದರು.

ADVERTISEMENT

ರಾಜ್ಯ ಸಮ್ಮಿಶ್ರ ಸರ್ಕಾರವು ರೈತರಿಗೆ ದ್ರೋಹ ಬಗೆದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ನುಡಿದಂತೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರು ಸಂಕಷ್ಟದಲ್ಲಿದ್ದು ಸರ್ಕಾರ ಶೀಘ್ರವೇ ಬೆಂಬಲ ಬೆಲೆಯನ್ನು ಘೋಷಿಸಿ ರೈತರ ಕಷ್ಟಕ್ಕೆ ಸ್ವಂದಿಸಬೇಕೆಂದು ಎಂದು ಆಗ್ರಹಿಸಿದರು.

ಪಕ್ಷದ ನೂತನ ಪದಾಧಿಕಾರಿಗಳು ಇಂದಿನಿಂದಲೇ ಪಕ್ಷವನ್ನು ಸಂಘಟಿಸಿ ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ಮಾಡಬೇಕಿದೆ ಎಂದು ಸಲಹೆ ನೀಡಿದರು.

ಗ್ರಾಮಾಂತರ ಕ್ಷೇತ್ರದಲ್ಲಿ ರಾಷ್ಟ್ರೀಯ ಯೋಜನೆಗಳಾದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ರೈಲ್ವೆ ಕಾಮಗಾರಿ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಗುತ್ತಿರುವ ನರೇಗಾ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ಕೇಂದ್ರ ಸರ್ಕಾರದಿಂದ ಆಗುತ್ತಿರುವುದು ಎಂದರು.

ಮುಂದಿನ ಚುನಾವಣೆಯಲ್ಲಿ ಪಕ್ಷದ ಲೋಕಸಭಾ ಅಭ್ಯರ್ಥಿಯನ್ನು ಹೆಚ್ಚು ಮತಗಳಿಂದ ಜಯಶೀಲರನ್ನಾಗಿ ಮಾಡುವ ಮೂಲಕ ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿಯವರ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಹಿಂದಿನ ಅಧ್ಯಕ್ಷ ಬಿ.ನಾಗರಾಜು ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇರುವುದರಿಂದ ಆರ್ಥಿಕತೆಯಲ್ಲಿ ಪ್ರಗತಿ ಕಾಣುತ್ತಿದ್ದೇವೆ ಎಂದರು.

ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ಆರನೇ ಸ್ಥಾನವನ್ನು ಭಾರತ ಪಡೆದು ಕೊಂಡಿದೆ. ಒಂದು ಕಡೆ ಉಗ್ರಗಾಮಿಗಳ ಅಟ್ಟಹಾಸ, ಪ್ರತಿ ಪಕ್ಷದವರ ಅಸಹಕಾರ ಹಾಗೂ ಪ್ರಕೃತಿ ವಿಕೋಪಗಳಂತಹ ಕಠಿಣ ಪರಿಸ್ಥಿತಿಯಲ್ಲೂ ಪ್ರಧಾನಿ ಎದೆಗುಂದಿಲ್ಲ ಎಂದರು.

ವಿಶ್ವದಲ್ಲೇ ಭಾರತ ದೇಶದ ಗೌರವ ಹೆಚ್ಚಿಸುತ್ತಿದ್ದಾರೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ನೀಡಿ ರೈತರ ಕಷ್ಟಗಳಿಗೆ ಸ್ವಂದಿಸಲಾಗುತ್ತಿದೆ ಎಂದರು.

ಯುವಕರು ಸ್ವ ಉದ್ಯೋಗ ಮಾಡಲು ಅವಕಾಶ ಕಲ್ಪಿಸಿ ಕೊಡಲಾಗಿದೆ. ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ತಂದಿದ್ದು ನಾಲ್ಕು ವರ್ಷಗಳಲ್ಲಿ ಒಂದೇ ಒಂದು ಭ್ರಷ್ಟಾಚಾರ ಇಲ್ಲದಿರುವುದು ಅವರ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಏಳಗಳ್ಳಿ ಶಿವರಾಂ, ನಗರ ಘಟಕದ ಅಧ್ಯಕ್ಷ ಕೆ.ವಿ.ನಾಗನಂದ್ ಮಾತನಾಡಿದರು.

ಜಿಲ್ಲಾ ಮುಖಂಡರಾದ ಜಗನ್ನಾಥ್, ಶಿವರಾಂ, ಬೂದಿಗುಪ್ಪೆ ಶಿವಲಿಂಗಯ್ಯ, ಆನಂದರಾಜ್‌ಪೈ, ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಮುನಿನಿಂಗೇಗೌಡ, ಪ್ರದೀಪ್, ನಗರ ಘಟಕದ ಉಪಾಧ್ಯಕ್ಷ ಮಂಜುನಾಥ್, ಕೃಷ್ಣ, ಆಟೋಕುಮಾರ್, ಸ್ವಾಮಿ, ಕೆ.ವಿ.ಶ್ರೀನಿವಾಸ್, ವಾಸು, ಕೋಟೆಬಾಬು, ಅನೇಕರು ಸಭೆಯಲ್ಲಿ ಹಾಜರಿದ್ದರು.

ಕಾರ್ಯಕರ್ತರು ನರೇಂದ್ರ ಮೋದಿಯವರ ಅಭಿವೃದ್ಧಿ ಕೆಲಸಗಳನ್ನು ಜನತೆಗೆ ತಿಳಿಸುತ್ತಿಲ್ಲ. ಬೇರೆಯವರು ಅದರ ಲಾಭ ಪಡೆದುಕೊಳ್ಳುತ್ತಿದ್ದಾರೆ
- ಎಂ.ರುದ್ರೇಶ್‌ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.