ADVERTISEMENT

‘ಕನ್ನಡ ಚಿತ್ರರಂಗ ಉಳಿಸಿ’ ಪ್ರತಿಭಟನೆ

ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 3:02 IST
Last Updated 7 ಸೆಪ್ಟೆಂಬರ್ 2025, 3:02 IST
ರಾಮನಗರದಲ್ಲಿ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪರಭಾಷಾ ಸಿನಿಮಾಗಳಿಗೆ ಕಡಿವಾಣ ಹಾಕಿ, ಕನ್ನಡ ಚಿತ್ರರಂಗ ಉಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು
ರಾಮನಗರದಲ್ಲಿ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪರಭಾಷಾ ಸಿನಿಮಾಗಳಿಗೆ ಕಡಿವಾಣ ಹಾಕಿ, ಕನ್ನಡ ಚಿತ್ರರಂಗ ಉಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು   

ರಾಮನಗರ: ಪರಭಾಷಾ ಸಿನಿಮಾಗಳಿಗೆ ಕಡಿವಾಣ ಹಾಕಿ. ಕನ್ನಡ ಚಿತ್ರರಂಗವನ್ನು ಉಳಿಸಿ ಎಂದು ಒತ್ತಾಯಿಸಿ ನಗರದ ಬಸ್ ನಿಲ್ದಾಣದ ಬಳಿ ಐಜೂರು ವೃತ್ತದಲ್ಲಿ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ವಾಟಾಳ್ ನಾಗರಾಜ್ ಮಾತನಾಡಿ, ಪರಭಾಷಾ ಚಿತ್ರಗಳಿಂದ ಕನ್ನಡ ಚಿತ್ರಗಳು ನೆಲಕಚ್ಚುತ್ತಿವೆ. ಪರಭಾಷಾ ಸಿನಿಮಾಗಳ ಹಾವಳಿಯಿಂದ ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ ಉಂಟಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ಕನ್ನಡ ಚಿತ್ರಗಳಿಗೆ ಪ್ರದರ್ಶನದ ವ್ಯವಸ್ಥೆ ಇಲ್ಲ. ಇಂದು ಕನ್ನಡ ಚಿತ್ರರಂಗ ಉಳಿಸಲು ಹೋರಾಟ ನಡೆಸುವ ಅಗತ್ಯ ಇದೆ ಎಂದರು.

ಮೈಸೂರಿನ ಪ್ರೀಮಿಯರ್ ಸ್ಟುಡಿಯೊ ಮುಚ್ಚಿದೆ. ಕಂಠೀರವ ಸ್ಟುಡಿಯೊ ಮುಚ್ಚುವ ಹಂತದಲ್ಲಿದೆ. ಕಂಠೀರವ ಸ್ಟುಡಿಯೊದ ಬೆಳವಣಿಗೆಗೆ ಸರ್ಕಾರ ಕ್ರಮ ವಹಿಸಬೇಕು. ಹೆಚ್ಚಿನ ಚಿತ್ರಗಳು ಅಲ್ಲಿ ಚಿತ್ರೀಕರಣ ಆಗುವಂತೆ ಸೌಲಭ್ಯ ಒದಗಿಸಬೇಕು. ಪರಭಾಷೆ ಸಿನಿಮಾ ಹಾವಳಿಗೆ ಸರ್ಕಾರ ಬ್ರೇಕ್ ಹಾಕಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.

ADVERTISEMENT

ಕರ್ನಾಟಕದಲ್ಲಿ ಕನ್ನಡಚಿತ್ರಗಳಿಗೆ ಮೊದಲ ಆದ್ಯತೆ ನೀಡಬೇಕು. ಪರಭಾಷಾ ಚಿತ್ರಗಳನ್ನು ಪ್ರೋತ್ಸಾಹಿಸಬಾರದು. ಇನ್ನು ವಾಣಿಜ್ಯ ಮಂಡಳಿ ಅಧ್ಯಕ್ಷ ಬೇರೆ ಭಾಷೆಯವರಾಗಿದ್ದಾರೆ. ವಾಣಿಜ್ಯ ಮಂಡಳಿಗೆ ಕನ್ನಡಿಗರೇ ಅಧ್ಯಕ್ಷರಾಗಬೇಕು. ಕನ್ನಡ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡಬೇಕು. ಕನ್ನಡ ಚಿತ್ರಗಳಿಗೆ ಹೆಚ್ಚಿನ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ಮುಖಂಡರಾದ ಸಿ.ಎಸ್.ಜಯಕುಮಾರ್, ಗಂಗಾಧರ್, ಭಾಗ್ಯ, ಸುಧಾ, ಕೆ.ಜಯರಾಮು, ಡಿ.ಪ್ರಸನ್ನಕುಮಾರ್, ಎಸ್.ಜಯಕುಮಾರ್, ಕುಮಾರ್, ಎಸ್.ಶಿವಮೂರ್ತಿ, ಪ್ರಸನ್ನ, ಕೆಂಪರಾಜು, ಆರ್.ಜೆ.ಅರ್ಜುನ್, ಮಂಜುನಾಥ್, ಕೃಷ್ಣಮೂರ್ತಿ, ಗಿರೀಶ್ ಗೌಡ, ವಾಟಾಳ್ ಪಕ್ಷದ ಅಧ್ಯಕ್ಷ ನಾರಾಯಣಸ್ವಾಮಿ, ಮಹದೇವ್, ವಾಟಾಳ್ ನಾಗರಾಜ್ ಆಪ್ತ ಕಾರ್ಯದರ್ಶಿ ಪಾರ್ಥಸಾರಥಿ ಇತರರು ಹಾಜರಿದ್ದರು.

ಬ್ಯಾಲೆಟ್ ಪೇಪರ್ ವ್ಯವಸ್ಥೆ ಸೂಕ್ತ ನಿರ್ಧಾರ

ಮುಂಬರುವ ಜಿ.ಪಂ. ತಾ.ಪಂ.ಸೇರಿದಂತೆ ಸ್ಥಳೀಯ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ವ್ಯವಸ್ಥೆ ತರಲಾಗುತ್ತದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರ ಸೂಕ್ತ ಎಂದು ವಾಟಾಳ್ ನಾಗರಾಜ್ ಹೇಳಿದರು. ಇವಿಎಂ ಬದಲಾಗಿ ಬ್ಯಾಲೆಟ್ ತರಲು ಕಾಂಗ್ರೆಸ್ ಸರ್ಕಾರ ನಿರ್ಧಾರ ಮಾಡಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇದು ದಿಟ್ಟ ನಿಲುವಾಗಿದೆ. ಇದು ಸರಿಯಾದ ಕ್ರಮ. ಬೇರೆ ದೇಶಗಳಲ್ಲಿಯೂ ಸಹ ಇವಿಎಂ ಇಲ್ಲ. ಹಾಗಾಗಿ ಇಲ್ಲಿಯೂ ಸಹ ಬ್ಯಾಲೆಟ್ ವ್ಯವಸ್ಥೆ ಬಂದರೆ ಒಳ್ಳೆಯದು ಎಂದರು. ‘ನಾನು ಅನೇಕ ಬಾರಿ ಕಡಿಮೆ ಮತಗಳ ಅಂತರದಿಂದ ಸೋಲು ಕಂಡಿದ್ದೇನೆ. ನನ್ನ ಸೋಲಿಗೆ ಇವಿಎಂ ಕಾರಣ ಎಂಬ ಅನುಭವ ನನಗಿದೆ. ಚುನಾವಣೆ ವ್ಯವಸ್ಥೆ ಮೇಲಿನ ಅನುಮಾನ ಹೋಗಬೇಕಾದರೆ ಮತಪೆಟ್ಟಿಗೆ ಬರಬೇಕು. ವಾಟಾಳ್ ಪಕ್ಷ ಬ್ಯಾಲೆಟ್ ವ್ಯವಸ್ಥೆಗೆ ಬೆಂಬಲ ನೀಡಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.