
ಬಿಡದಿ ಪಟ್ಟಣದ ಜ್ಞಾನ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಜೆವಿಐಟಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಬಿಡದಿ: ‘ಅವನತಿಯ ಹಂತಕ್ಕೆ ಬಂದಿರುವ ಕನ್ನಡವನ್ನು ದೇಶ ಭಾಷೆಯನ್ನಾಗಿ ಮಾಡಬೇಕಿದೆ. ಭಾಷೆಯ ಪುನಶ್ಚೇತನ ನಮ್ಮೆಲ್ಲರ ಕರ್ತವ್ಯ. ನಮ್ಮ ನೆಲ, ಜಲ, ನುಡಿ ವಿಷಯದಲ್ಲಿ ಕನ್ನಡಿಗರು ರಾಜಿಯಾಗದೆ ಆತ್ಮಾಭಿಮಾನ ಬೆಳೆಸಿಕೊಳ್ಳಬೇಕು. ನಮ್ಮ ಕನ್ನಡವೆಂದರೆ ಬಂದರೆ ಭಾಷೆಯಲ್ಲ. ಅದು ನಮ್ಮ ಪರಂಪರೆ ಮತ್ತು ಸಂಸ್ಕೃತಿ’ ಎಂದು ಸಾಹಿತಿ ಡಾ. ಭೈರಮಂಗಲ ರಾಮೇಗೌಡ ಹೇಳಿದರು.
ಪಟ್ಟಣದ ಜ್ಞಾನ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಜೆವಿಐಟಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದರೂ, ನಮ್ಮ ಭಾಷೆ ಇಂದಿಗೂ ಅಳಿವು–ಉಳಿವಿನ ಸವಾಲು ಎದುರಿಸುತ್ತಿದೆ. ಕನ್ನಡವನ್ನು ಅನ್ನದ ಭಾಷೆಯಾಗಿಸಿ ಅದರ ಹಿರಿಮೆಯನ್ನು ಹೆಚ್ಚಿಸುವ ಮೂಲಕ ಈ ಸವಾಲು ಮೆಟ್ಟಿ ನಿಲ್ಲಬೇಕಿದೆ’ ಎಂದರು.
‘ಯುವಜನತೆ ಇಂಗ್ಲಿಷ್ ಮೋಹದಲ್ಲಿ ಕನ್ನಡ ಕಡೆಗಣಿಸಬಾರದು. ನಾವು ಎಲ್ಲೇ ಇದ್ದರೂ ನಮ್ಮ ತಾಯಿ ನಮಗೆ ಎಷ್ಟು ಶ್ರೇಷ್ಠರೊ, ಅದೇ ರೀತಿ ನಮ್ಮ ಮಾತೃಭಾಷೆ ಕೂಡ. ಕನ್ನಡವನ್ನು ಬಳಸುವ ಜೊತೆಗೆ ಅದನ್ನು ಉಳಿಸಿ, ಅದರ ಹಿರಿಮೆಯನ್ನು ಜಗತ್ತಿಗೆ ಸಾರುವ ಹೊಣೆಗಾರಿಕೆ ಯುವಜನರ ಮೇಲಿದೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಹಾಗೂ ಜ್ಞಾನ ವಿಕಾಸ್ ವಿದ್ಯಾಸಂಘದ ಅಧ್ಯಕ್ಷ ಸಿ.ಎಂ. ಲಿಂಗಪ್ಪ ಮಾತನಾಡಿ, ‘ಕನ್ನಡತನ ಎಂದರೆ ಅದು ನಮ್ಮ ಸಂಸ್ಕೃತಿ ಮತ್ತು ಪರಂಪರೆ. ಯುವಜನರು ನಾಡು ಮತ್ತು ನುಡಿಯ ಬಗ್ಗೆ ಅರಿತುಕೊಂಡು ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು’ ಎಂದರು.
ಕಾರ್ಯಕ್ರಮಕ್ಕೆ ಮುಂಚೆ ಪಟ್ಟಣದ ಬಿಜಿಎಸ್ ವೃತ್ತದಿಂದ ಕ್ರೀಡಾಂಗಣದವರೆಗೆ ವಿದ್ಯಾರ್ಥಿಗಳು ಜಾಥಾ ನಡೆಸಿದರು. ಈ ವೇಳೆ ಕನ್ನಡಪರ ಘೋಷಣೆಗಳು ಮೊಳಗಿದವು. ಕನ್ನಡ ಬಾವುಟಗಳು ರಾರಾಜಿಸಿದವು. ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್, ಸಂಘದ ಕಾರ್ಯದರ್ಶಿ ಬಿ.ಆರ್. ನಾಗರಾಜು, ಖಜಾಂಚಿ ಬಿ.ಎನ್. ಗಂಗಾಧರಯ್ಯ, ಸಹ ಕಾರ್ಯದರ್ಶಿ ಸಿ. ಲೋಕೇಶ್, ನಿರ್ದೇಶಕರಾದ ಪುಟ್ಟರಾಜು, ಮಹೀಪತಿ, ಜೆವಿಐಟಿ ಪ್ರಾಂಶುಪಾಲ ಡಾ. ಎ.ವಿ. ಸೀತಾ ಗಿರೀಶ್, ಪದವಿ ಕಾಲೇಜು ಪ್ರಾಂಶುಪಾಲೆ ಪಿ. ರೂಪಾ, ಪಿಯುಸಿ ಪ್ರಾಂಶುಪಾಲ ಶರವಣ, ಬಸವೇಶ್ವರ ಶಾಲೆ ಮುಖ್ಯ ಶಿಕ್ಷಕ ಗಿರೀಶ್, ಕನ್ನಡ ಮಾಧ್ಯಮಿಕ ಶಾಲೆಯ ಜಯಂತಿ, ಪಾರ್ವತಿ, ಇಂಗ್ಲಿಷ್ ಶಾಲೆಯ ಜಾನ್ ಅಬ್ರಾಹಂ, ಜೆವಿಎನ್‌ಪಿಎಸ್ ಮುಖ್ಯ ಶಿಕ್ಷಕಿ ಚಂಪಕ, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.
ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕನ್ನಡಕ್ಕೆ ತನ್ನದೇ ಆದ ವಿಶೇಷತೆ ಇದೆ. ಕನ್ನಡಿಗರಾದ ನಾವು ನಮ್ಮ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಕೀಳರಿಮೆ ಬಿಟ್ಟು ವ್ಯಾಪಕವಾಗಿ ಬೆಳೆಸಬೇಕು. ಜೊತೆಗೆ ಬೇರೆ ಭಾಷೆಗಳನ್ನು ಗೌರವಿಸಬೇಕುರಾಮಲಿಂಗಾ ರೆಡ್ಡಿ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.