ರಾಮನಗರದ ಐಜೂರಿನ ಎಕ್ಸ್‌ಪರ್ಟ್ ಕಾಲೇಜಿನ ಸಭಾಂಗಣದಲ್ಲಿ ನಡೆದ ದ್ವಿತೀಯ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಕಾಕೋಳು ಶೈಲೇಶ್ ಮತ್ತು ಚಂದ್ರಕಲಾ ದಂಪತಿಯನ್ನು ಸನ್ಮಾನಿಸಲಾಯಿತು.
ರಾಮನಗರ: ಇಂದಿನ ಶಿಕ್ಷಣ ಪದ್ದತಿ ಕನ್ನಡ ಭಾಷೆಯ ಬೆಳವಣಿಗೆಗೆ ಅಪಾಯಕಾರಿಯಾಗಿದೆ. ಈ ಸಂದರ್ಭದಲ್ಲಿ ಕನ್ನಡವನ್ನು ಬಲಿಷ್ಠ ಗೊಳಿಸಲು ನಾವೆಲ್ಲರೂ ಹಿಂದಿಗಿಂತಲೂ ಹೆಚ್ಚು ಜವಾಬ್ದಾರಿಯಿಂದ ರಾಜಿರಹಿತ ಹೋರಾಟ ರೂಪಿಸಬೇಕಾದ ಅಗತ್ಯವಿದೆ ಎಂದು ಸಾಹಿತಿ ಹಾಗೂ ಜಿಲ್ಲಾ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಕಾಕೋಳು ಶೈಲೇಶ್ ಅಭಿಪ್ರಾಯಪಟ್ಟರು.
ನಗರದ ಐಜೂರಿನ ಎಕ್ಸ್‌ಪರ್ಟ್ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕಮತಗಿಯ ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಮಾತೃಭಾಷೆಯ ಶಿಕ್ಷಣಕ್ಕೆ ಆದ್ಯತೆ ಸಿಕ್ಕಾಗ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ. ಆ ನಿಟ್ಟಿನಲ್ಲಿ ನಮ್ಮನ್ನಾಳುವ ಸರ್ಕಾರಗಳು ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಯಾವುದೇ ಮಾಧ್ಯಮದ ಶಿಕ್ಷಣವಿದ್ದರೂ ಅಲ್ಲಿ ಕನ್ನಡ ಕಡ್ಡಾಯಗೊಳಿಸಬೇಕಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಗುತ್ತಿರುವ ಅನ್ಯ ಭಾಷಿಕರ ಹಾವಳಿಯೂ ಕನ್ನಡಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ’ ಎಂದರು.
ಕನ್ನಡ ಕಟ್ಟುವ ವಿಷಯದಲ್ಲಿ ಸಾಹಿತಿಗಳು ಮತ್ತು ಸಾಹಿತ್ಯ ಸಂಘಟನೆಗಳು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ ಎಂದರು.
ಆಶಯ ನುಡಿಗಳನ್ನಾಡಿದ ಪರಿಷತ್ತಿನ ಜಿಲ್ಲಾಧ್ಯಕ್ಷ ಅಂಬರೀಷ್, ಚುಟುಕು ಸಾಹಿತ್ಯಕ್ಕೆ ತನ್ನದೇ ಆದ ಮಹತ್ವವಿದೆ. ಈ ಸಾಹಿತ್ಯಕ್ಕೆ ಅದರದ್ದೇ ಆದ ಅಭಿಮಾನಿಗಳಿದ್ದಾರೆ. ಈ ಸಾಹಿತ್ಯ ಪ್ರಕಾರವನ್ನು ಹೆಚ್ಚು ಪ್ರಚುರಪಡಿಸುವ ಉದ್ದೇಶದಿಂದ ಚುಟುಕು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಸಮ್ಮೇಳನದ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಕೂ.ಗಿ. ಗಿರಿಯಪ್ಪ ವಹಿಸಿದ್ದರು. ವಿವಿಧ ಕವಿಗಳು ವಿಚಾರ ಮಂಡಿಸಿ, ಕವಿತೆ ವಾಚಿಸಿದರು. ಸಮ್ಮೇಳನದ ಸಾನ್ನಿಧ್ಯವನ್ನು ಗುರುವಿನಪುರ ಬೃಹನ್ಮಠದ ಜಗದೀಶ ಶಿವಾಚಾರ್ಯರು, ನಿರಂಜನ ಶಿವಾಚಾರ್ಯರು ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ರಾಮನಗರ ತಾಲ್ಲೂಕು ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ, ಕರುನಾಡಸೇನೆ ಐಜೂರು ಜಗದೀಶ್, ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಎಂ. ರಮೇಶ್ ಕಮತಗಿ, ರಘು ಮಯೂರ್, ರಮೇಶ್ ಹೊಸದೊಡ್ಡಿ, ಹೇಮಾವತಿ ಅಂಬರೀಶ್, ರತ್ನ ಆಲಪ್ಪಗೌಡ, ಗಂಗಾಧರ್, ಪೂರ್ಣಚಂದ್ರ, ಜೈ ಕುಮಾರ್ ಭಾಗ್ಯಸುಧಾ ಇದ್ದರು.
ಕನ್ನಡ ಸಾಹಿತ್ಯ ವಲಯದಲ್ಲಿ ಚುಟುಕು ಸಾಹಿತ್ಯವು ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಚುಟುಕಾದ ಸಾಲುಗಳು ಮನಸ್ಸಿನಲ್ಲಿ ವಿಚಾರದ ಕಿಡಿ ಹೊತ್ತಿಸುವ ಜೊತೆಗೆ ಮನಸ್ಸಿಗೆ ಮುದ ನೀಡುತ್ತವೆ. ಅದೇ ಕಾರಣಕ್ಕೆ ಚುಟುಕುಗಳು ಓದುಗರನ್ನು ಆಕರ್ಷಿಸುತ್ತವೆ– ಡಾ. ಎಂ.ಜಿ.ಆರ್. ಅರಸು ರಾಜ್ಯಾಧ್ಯಕ್ಷ ಚುಟುಕು ಸಾಹಿತ್ಯ ಪರಿಷತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.