ADVERTISEMENT

ರಾಜ್ಯೋತ್ಸವ ಪ್ರತಿ ಮನೆಯ ನಿತ್ಯೋತ್ಸವವಾಗಲಿ: ಶಾಸಕ ಇಕ್ಬಾಲ್ ಹುಸೇನ್

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:03 IST
Last Updated 25 ಡಿಸೆಂಬರ್ 2025, 6:03 IST
<div class="paragraphs"><p>ರಾಮನಗರದ ಹಳೆ ಬಸ್‌ ನಿಲ್ದಾಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ಸಿರಿ ಸಂಭ್ರಮ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಕದಂಬ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.</p></div>

ರಾಮನಗರದ ಹಳೆ ಬಸ್‌ ನಿಲ್ದಾಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ಸಿರಿ ಸಂಭ್ರಮ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಕದಂಬ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

   

ರಾಮನಗರ: ‘ನಾಡು, ನುಡಿ, ಜಲ ಹಾಗೂ ಸಂಸ್ಕೃತಿ ರಕ್ಷಣೆಯಲ್ಲಿ ಕನ್ನಡಪರ ಹೋರಾಟಗಾರರ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ರಾಜ್ಯೋತ್ಸವ ಎಂಬುದು ಕೇವಲ ಒಂದು ದಿನಕ್ಕಷ್ಟೇ ಸೀಮಿತವಲ್ಲ. ಈ ಉತ್ಸವವು ಪ್ರತಿ ದಿನದ ಸಂಭ್ರಮವಾಗಬೇಕು’ ಎಂದು ಶಾಸಕ ಎಚ್.ಎ. ಇಕ್ಬಾಲ್‌ ಹುಸೇನ್ ಅಭಿಪ್ರಾಯಪಟ್ಟರು.

ನಗರದ ಹಳೆ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇತ್ತೀಚೆಗೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡಸಿರಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕನ್ನಡ ನಾಡಿನಲ್ಲಿ ಮಾತೃ ಭಾಷೆ ಕನ್ನಡವೇ ಸಾರ್ವಭೌಮ. ಕನ್ನಡ ರಾಜ್ಯೋತ್ಸವ ಎಂಬುದು ಪ್ರತಿ ಮನೆ ಮನೆಗಳಲ್ಲಿ ನಿತ್ಯೋತ್ಸವ ಆಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಇತ್ತಿಚಿನ ದಿನಗಳಲ್ಲಿ ಅನ್ಯ ಭಾಷಿಕರ ಹಾವಳಿಯ ಸುಳಿಯಲ್ಲಿ ನಮ್ಮ ಭಾಷೆ ಸಿಲುಕಿದೆಯೇನೋ ಎನ್ನುವಂತಾಗಿದೆ. ಇಂತಹ ಸಮಯದಲ್ಲಿ ಹಲವು ಕನ್ನಡಪರ ಸಂಘಟನೆಗಳು ತಮ್ಮ ಜವಾಬ್ದಾರಿ ಅರಿತು ರಾಮನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ರಾಜ್ಯೋತ್ಸವ ಆಚರಿಸಿ ವಿವಿಧ ಕ್ಷೇತ್ರದ ಸಾಧಕರಿಗೆ ಕದಂಬ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ. ಕೃಷ್ಣೇಗೌಡ ಮಾತನಾಡಿ, ‘ಹೋರಾಟವನ್ನು ಬದುಕನ್ನಾಗಿ ಮಾಡಿಕೊಂಡು ಕಳೆದ 25 ವರ್ಷಗಳಿಂದ ರಾಜ್ಯದಾದ್ಯಂತ ಹೋರಾಟ ಮಾಡಿಕೊಂಡು ಬಂದಿದ್ದು, ನಾಡ ಕಟ್ಟುವ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಬೆಂಗಳೂರು ದಕ್ಷಿಣ ಜಿಲ್ಲೆ ಅಭಿವೃದ್ಧಿ ಕಾಣುತ್ತಿದೆ. ಹೆಚ್ಚು ಕಾರ್ಖಾನೆಗಳು ತಲೆ ಎತ್ತುತ್ತಿವೆ. ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸಿಗಬೇಕು. ಇಂದು ಸರ್ಕಾರಿ ಕನ್ನಡ ಶಾಲೆ ಮುಚ್ಚುತ್ತಿವೆ. ಖಾಸಗಿ ಶಾಲೆಗಳು ತೆರೆಯುತ್ತಿವೆ. ಅಂಗನವಾಡಿಗಳಲ್ಲಿ ಕಳಪೆ ಆಹಾರ ಪೂರೈಕೆ ಬಗ್ಗೆ ನಾವು ಪ್ರತಿಭಟನೆ ನಡೆಸಿ ಪತ್ರ ಸಹ ಬರೆದಿದ್ದೇವೆ. ಈ ಬಗ್ಗೆ ಶಾಸಕರು ಸರ್ಕಾರದ ಗಮನ ಸೆಳೆಯಬೇಕು’ ಎಂದರು ಮನವಿ ಮಾಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎ. ಮಂಜುನಾಥ್ ಮಾತನಾಡಿ, ‘ಕನ್ನಡ ನೆಲದಲ್ಲಿ ಹುಟ್ಟಿದ ಎಲ್ಲದರಲ್ಲೂ ಕನ್ನಡದ ಬಗ್ಗೆ ಹೆಚ್ಚು ಅಭಿಮಾನ ಇರಬೇಕು. ಕನ್ನಡ ಭಾವುಟ ಧರಿಸಿದ ವ್ಯಕ್ತಿಯ ಕೆಲಸ ಮೊದಲಾಗುತ್ತದೆ. ಅದುವೇ ಕನ್ನಡ ಭಾವುಟದ ಶಕ್ತಿ. ಇದನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ತಿಳಿಸಿದರು.

ಎಬಿಸಿಡಿ ಡ್ಯಾನ್ಸ್ ಅಕಾಡೆಮಿಯ ರೇಣುಕಾ ಪ್ರಸಾದ್, ಸಾತ್ವಿಕ್, ಪ್ರಣನ್ಯ, ದಕ್ಷಿತ್‌ ಗೌಡ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಟ್ಟರು.

ಸಿನಿಮಾ ನಿರ್ಮಾಪಕ ಉಮಾಪತಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್‌ದೇವು, ನಿರ್ದೇಶಕ ಯರೇಹಳ್ಳಿ ವೈ.ಎಚ್. ಮಂಜು, ಬಮೂಲ್ ನಿರ್ದೇಶಕ ಹರೀಶ್ ಕುಮಾರ್, ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‌ ಕುಮಾರ್, ನಿವೃತ್ತ ತಹಶೀಲ್ದಾರ್ ಶಿವಣ್ಣ, ಕರವೇ ಸ್ವಾಭಿಮಾನಿ ಬಣದ ರಾಜ್ಯ ಉಸ್ತುವಾರಿ ಅಧ್ಯಕ್ಷ ಶಿವುಗೌಡ, ಜಿಲ್ಲಾಧ್ಯಕ್ಷ ಕಿರಣ್‌ ಗೌಡ, ಗೌರವಾಧ್ಯಕ್ಷ ರಾಜು ಚನ್ನಮಾನಹಳ್ಳಿ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಬಸವರಾಜ್‌ ಹವಾಲ್ದಾರ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಅರುಣ್, ತಾಲ್ಲೂಕು ಗೌರವಾಧ್ಯಕ್ಷ ಸಿದ್ದೇಗೌಡ, ಸಂಘಟನೆ ಅಧ್ಯಕ್ಷರಾದ ರಾಜು ಎಂ.ಎನ್‌.ಆರ್, ಜಗದೀಶ್‌ ಐಜೂರು ಹಾಗೂ ಇತರರು ಇದ್ದಾರೆ.

ಸರ್ಕಾರ ಮಾತೃಭಾಷೆ ಕನ್ನಡದಲ್ಲಿ ಗುಣಮಟ್ಟದ ಶಿಕ್ಷಣ ಉದ್ಯೋಗ ಹಾಗೂ ಬದುಕು ಕೊಡಬೇಕು. ಈ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆಗ ಮಾತ್ರ ಕನ್ನಡಪರ ಸಂಘಟನೆಗಳ ದನಿಗೆ ಬೆಲೆ ಬರಲಿದೆ
– ಪಿ. ಕೃಷ್ಣೇಗೌಡ ರಾಜ್ಯಾಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ
‘ಕದಂಬ ಪ್ರಶಸ್ತಿ’ ಪ್ರದಾನ
ಕಾರ್ಯಕ್ರಮದಲ್ಲಿ ಸಂತೋಷ್ ಮಂಜು ಟಿ.ಜಿ. ವೆಂಕಟೇಶ್ ಪ್ರಸಾದ್ ಮಲ್ಲೇಶ್ ವಿಷಕಂಠಯ್ಯ ಶಿವಹೊಂಬಯ್ಯ ಮುನಿಯಪ್ಪ ಸುಮಂಗಳ ಅಂಕನಹಳ್ಳಿ ಶಿವಣ್ಣ ನಾಗೇಶ್ ಪಿ.ಎಸ್. ದಿಗಂತ್‌ ಗೌಡ ಹಿರಿಯ ಪತ್ರಕರ್ತ ಬಿ.ವಿ. ಸೂರ್ಯಪ್ರಕಾಶ್ ಪವರ್ ಟಿ.ವಿ ಜಿಲ್ಲಾ ವರದಿಗಾರ ಪ್ರವೀಣ್ ಶಶಿಕುಮಾರ್ ಸುಶೀಲಮ್ಮ ಟೇಕ್ವಾಂಡೆ ಕ್ರೀಡಾಪಟು ಶಾನ್ವಿ ಸತೀಶ್ ಮಲ್ಲೇಶ್ ಹಾಗೂ ವಾರುಣಿ ಅವರಿಗೆ ಗಣ್ಯರು ‘ಕದಂಬ ಪ್ರಶಸ್ತಿ’ ನೀಡಿ ಗೌರವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.