ADVERTISEMENT

ರಾಮನಗರ: ಕನ್ನಿಕಾ ಪರಮೇಶ್ವರಿ ತೆಪ್ಪೋತ್ಸವ ಸಡಗರ

ಅಲಂಕೃತ ಮೂರ್ತಿಯನ್ನು ಕಣ್ತುಂಬಿಕೊಂಡ ಭಕ್ತರು

​ಪ್ರಜಾವಾಣಿ ವಾರ್ತೆ
Published 16 ಜುಲೈ 2023, 5:00 IST
Last Updated 16 ಜುಲೈ 2023, 5:00 IST
ರಾಮನಗರದ ಎಂ.ಜಿ. ರಸ್ತೆಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಾಲಯದ ಮುಂಭಾಗ ತೆಪ್ಪೋತ್ಸವ ಜರುಗಿತು
ರಾಮನಗರದ ಎಂ.ಜಿ. ರಸ್ತೆಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಾಲಯದ ಮುಂಭಾಗ ತೆಪ್ಪೋತ್ಸವ ಜರುಗಿತು   

ರಾಮನಗರ: ಆಷಾಡ ಮಾಸದ ಕೊನೆಯ ಶುಕ್ರವಾರ ನಗರದ ಕನ್ನಿಕಾ ಪರಮೇಶ್ವರಿ ಅಮ್ಮನವರ ತೆಪ್ಪೋತ್ಸವ ಕಾರ್ಯಕ್ರಮ ಭಕ್ತಿ–ಭಾವದಿಂದ ಜರುಗಿತು. ಎಂ.ಜಿ. ರಸ್ತೆಯಲ್ಲಿರುವ ದೇವಾಲಯದ ಮುಂಭಾಗ ರಸ್ತೆಯಲ್ಲಿ ಕೃತಕವಾಗಿ ಕೊಳ ನಿರ್ಮಿಸಿ ತೆಪ್ಪೋತ್ಸವ ನೆರೆವೇರಿಸಲಾಯಿತು.

ದರ್ಬಾರ್ ಶೈಲಿಯಲ್ಲಿ ಅಲಂಕೃತಗೊಂಡ ಅಮ್ಮನವರ ಉತ್ಸವ ಮೂರ್ತಿಯನ್ನು ತೇಲುವ ವೇದಿಕೆಯ ಮೇಲೆ ಅಳವಡಿಸಲಾಗಿತ್ತು. ಧಾರ್ಮಿಕ ವಿಧಿವಿಧಾನಗಳೊಂದಿಗೆ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ಶ್ಲೋಕಗಳ ಪಠಣ, ನಾದಸ್ವರ ಮಂಗಳ ವಾದನದ ನಡುವೆ ಅಮ್ಮನವರ ಉತ್ಸವ ಮೂರ್ತಿಯನ್ನು ಕೊಳದಲ್ಲಿ ತೇಲಿ ಬಿಡಲಾಯಿತು.

ಬೆಂಗಳೂರಿನಿಂದ ಬಂದಿದ್ದ ಋತ್ವಿಕರ ತಂಡ ನೆರೆವೇರಿಸಿದ ಗಂಗಾರತಿಯನ್ನು ನೆರದಿದ್ದ ಭಕ್ತ ಸಮೂಹ ಕಣ್ತುಂಬಿಕೊಂಡಿತು. ಕೊಳದ ಬಳಿಯಲ್ಲೇ ಪಂಚ ಲಿಂಗ ದರ್ಶನ, ವಿಶೆಷ ಪೂಜೆ ಮತ್ತು ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು. ಚಂಡೆಮೇಳವು ಭಕ್ತಿಯನ್ನು ಇಮ್ಮಡಿಗೊಳಿಸಿತು.

ADVERTISEMENT

ರಾಧಾಕೃಷ್ಣ ಶಾಸ್ತ್ರಿ ಅವರು ಉತ್ಸವ ಮೂರ್ತಿಯನ್ನು ಅಲಂಕರಿಸಿದ್ದರು. ವಾಸವಿ ಮಾತೆಯ ಮೂಲ ವಿಗ್ರಹಕ್ಕೆ ಚಿನ್ನಲೇಪಿತ ವಜ್ರಾಂಗಿಯನ್ನು ತೊಡಿಸಿ, ಬಗೆಬಗೆಯ ಹೂಗಳಿಂದ ಸಿಂಗರಿಸಲಾಗಿತ್ತು. ವಿವಿಧ ಭಾಗಗಳ ಭಕ್ತರು ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ತೆಪ್ಪೋತ್ಸವ ಆಚರಣಾ ಸಮಿತಿ, ರಾಮನಗರದ ಆರ್ಯವೈಶ್ಯ ಸಭ, ವಾಸವಿ ಯೂತ್ಸ್ ಫೋರಂ, ವಾಸವಿ ವನಿತಾ ಸಂಘ ಹಾಗೂ ವಾಸವಿ ಭಜನಾ ಮಂಡಳಿ ಸಹಯೋಗದಲ್ಲಿ ತೆಪ್ಪೋತ್ಸವ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.