ADVERTISEMENT

ವಿಧಾನಸಭೆ ಚುನಾವಣೆ | ‘ಧರ್ಮ ದಂಗಲ್‌’ಗೆ ವೇದಿಕೆಯಾಗಲಿದೆಯಾ ರಾಮನಗರ ಕ್ಷೇತ್ರ?

ಮಗನ ರಾಜಕೀಯ ಭವಿಷ್ಯಕ್ಕಾಗಿ ಕ್ಷೇತ್ರ ತ್ಯಾಗ ಮಾಡಿದ ಅನಿತಾ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 6:37 IST
Last Updated 24 ಜನವರಿ 2023, 6:37 IST
   

ರಾಮನಗರ: ಮಗನ ರಾಜಕೀಯ ಭವಿಷ್ಯಕ್ಕಾಗಿ ಇಲ್ಲಿ ಅಮ್ಮ ಕ್ಷೇತ್ರ ತ್ಯಾಗ ಮಾಡಿದ್ದರೆ, ಜೆಡಿಎಸ್‌ನ ಭದ್ರಕೋಟೆ ವಶಕ್ಕೆ ಕಾಂಗ್ರೆಸ್‌ ಸದ್ದಿಲ್ಲದೇ ಸಿದ್ಧತೆ ನಡೆಸಿದೆ.

ರಾಮನಗರ ವಿಧಾನಸಭಾ ಕ್ಷೇತ್ರ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ಕೊಟ್ಟ ಅದೃಷ್ಟದ ಕ್ಷೇತ್ರ. ಕಳೆದ ಎರಡು ದಶಕದಿಂದಲೂ ಇಲ್ಲಿ ಜೆಡಿಎಸ್‌ನದ್ದೇ ಪಾರುಪತ್ಯ. ಕೆಂಗಲ್‌ ಹನುಮಂತಯ್ಯ ಹಾಗೂ ನಂತರದಲ್ಲಿ ಎಚ್‌.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ಇಲ್ಲಿಂದಲೇ ಗೆದ್ದು ಮುಖ್ಯಮಂತ್ರಿ ಆದದ್ದು.

2018ರ ಚುನಾವಣೆಯಲ್ಲಿ ಎರಡು ಕ್ಷೇತ್ರದಿಂದ ಗೆದ್ದಿದ್ದ ಎಚ್‌.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವರ ಪತ್ನಿ ಅನಿತಾ ಬರೋಬ್ಬರಿ 1 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದು ಈಗ ಇತಿಹಾಸ. ಈ ಬಾರಿ ತಮ್ಮ ಬದಲಿಗೆ ತಮ್ಮ ಪುತ್ರನನ್ನು ಕಣಕ್ಕೆ ಇಳಿಸುವುದಾಗಿ ಈಗಾಗಲೇ ಅನಿತಾ ಘೋಷಿಸಿದ್ದಾರೆ.

ADVERTISEMENT

ಈ ಬಾರಿ ಜೆಡಿಎಸ್ ಗೆಲುವಿನ ಓಟಕ್ಕೆ ಲಗಾಮು ಹಾಕಿ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆಯಲು ಕೈ ಪಾಳಯ ಸಾಕಷ್ಟು ಮುಂಚೆಯೇ ಸಿದ್ಧತೆ ನಡೆಸಿದೆ. ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆಯ ಅಭ್ಯರ್ಥಿ ಇಕ್ಬಾಲ್ ಹುಸೇನ್‌ ಅವರೇ ಈ ಬಾರಿಯೂ ಕಾಂಗ್ರೆಸ್‌ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಿದೆ. ಬಿಜೆಪಿಗೆ ಇಲ್ಲಿ ಹೇಳಿಕೊಳ್ಳುವಂತಹ ಇತಿಹಾಸ ಇಲ್ಲ. ಈ ಪಕ್ಷ ಇನ್ನೂ ಅಧಿಕೃತವಾಗಿ ಅಭ್ಯರ್ಥಿ ಹೆಸರು ಬಿಟ್ಟುಕೊಟ್ಟಿಲ್ಲ. ರೇಷ್ಮೆ ಕೈಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷ ಗೌತಮ್‌ ಗೌಡ ಹೆಸರು ಹೆಚ್ಚು ಚಾಲ್ತಿಯಲ್ಲಿದೆ.

2018ರ ಚುನಾವಣೆಯಲ್ಲಿ ಇಲ್ಲಿ ಜೆಡಿಎಸ್‌ಗೆ ತೀವ್ರ ಪೈಪೋಟಿ ಒಡ್ಡಿದ್ದ ಕಾಂಗ್ರೆಸ್ ನಂತರ ನಡೆದ ಉಪ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸದೇ ಮೈತ್ರಿ ಧರ್ಮ ಪಾಲಿಸಿತು. ಬಿಜೆಪಿಗೆ ವಲಸೆ ಬಂದು ಅಭ್ಯರ್ಥಿಯಾಗಿದ್ದ ಎಲ್‌. ಚಂದ್ರಶೇಖರ್ ಕಡೆಯ ಕ್ಷಣದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಕಮಲ ಪಾಳಯಕ್ಕೆ ಕಪ್ಪು ಚುಕ್ಕೆಯಾಗಿಯೇ ಉಳಿದುಕೊಂಡಿದೆ.

ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣದ ಸಂಕಲ್ಪ, ಶ್ರೀನಿವಾಸ ಕಲ್ಯಾಣೋತ್ಸವ ಮೊದಲಾದ ಕಾರ್ಯಕ್ರಮಗಳ ಮೂಲಕ ಈ ಬಾರಿಯ ಚುನಾವಣೆ ಮತ್ತೊಂದು ಮಟ್ಟಕ್ಕೆ ಹೋಗುವ ಲಕ್ಷಣಗಳು ಕಾಣಿಸುತ್ತಿವೆ. ಕುಮಾರಸ್ವಾಮಿ ಅವರಿಗೆ ಇಲ್ಲಿಂದಲೇ ಮಗನ ರಾಜಕೀಯ ಭವಿಷ್ಯ ರೂಪಿಸುವ ಆಕಾಂಕ್ಷೆ ಇದ್ದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ತವರು ಜಿಲ್ಲೆಯಲ್ಲಿನ ಈ ಕ್ಷೇತ್ರ ಪ್ರತಿಷ್ಠೆಯ ಪ್ರಶ್ನೆ ಆಗಿದೆ.

ಈ ಬಾರಿ ಈ ಇಬ್ಬರು ಸಾಂಪ್ರದಾಯಿಕ ಎದುರಾಳಿಗಳ ಜೊತೆಗೆ ಆಡಳಿತರೂಢ ಬಿಜೆಪಿ ಸಹ ಅದೃಷ್ಟ ಪರೀಕ್ಷೆಗೆ ಸಿದ್ಧರಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣರಿಗೂ ಇದು ಪ್ರತಿಷ್ಠೆಯಾಗಿದೆ. ಒಕ್ಕಲಿಗರು ಹಾಗೂ ನಂತರದಲ್ಲಿ ಮುಸ್ಲಿಮರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಮೂರು ಪಕ್ಷಗಳು ಈ ಸಮುದಾಯದವರಿಗೇ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.