ADVERTISEMENT

ಸಾಮಾಜಿಕ ನ್ಯಾಯದ ಸಾಕಾರಕ್ಕೆ ಸಮೀಕ್ಷೆ ಅಗತ್ಯ: ಶಾಸಕ ಹುಸೇನ್

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 4:57 IST
Last Updated 27 ಸೆಪ್ಟೆಂಬರ್ 2025, 4:57 IST
ಎಚ್‌.ಎ. ಇಕ್ಬಾಲ್ ಹುಸೇನ್ ಶಾಸಕ
ಎಚ್‌.ಎ. ಇಕ್ಬಾಲ್ ಹುಸೇನ್ ಶಾಸಕ   

ರಾಮನಗರ: ‘ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಸವಲತ್ತುಗಳನ್ನು ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸರ್ಕಾರ ಮಹತ್ವವಾದ ಹೆಜ್ಜೆ ಇಟ್ಟಿದೆ. ಸಮೀಕ್ಷೆದಾರರು ಮನೆ ಬಾಗಿಲಿಗೆ ಬಂದಾಗ ಜನರು ಅಗತ್ಯ ಮಾಹಿತಿ ನೀಡುವ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.

‘ಸರ್ಕಾರದ ಸೌಲಭ್ಯಗಳನ್ನು ನಿರ್ದಿಷ್ಟ ಸಮುದಾಯಗಳಿಗೆ ತಲುಪಿಸಲು ಅವರ ಕುರಿತು ಮಾಹಿತಿ ಅಗತ್ಯ. ಈ ಕುರಿತು ಕೋರ್ಟ್‌ಗಳು ಸಹ ಸರ್ಕಾರಗಳಿಗೆ ಸಲಹೆ ನೀಡುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ. 22ರಿಂದ ಸಮೀಕ್ಷೆ ನಡೆಸುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ಸುಮಾರು 5 ಸಾವಿರ ಮಂದಿಯ ಸಮೀಕ್ಷೆಯಾಗಿದೆ’ ಎಂದು ತಮ್ಮ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಮೀಕ್ಷೆಗಾಗಿ ಜಿಲ್ಲೆಯಲ್ಲಿ 3,166 ಬ್ಲಾಕ್‌ಗಳನ್ನು ಗುರುತಿಸಿ, ಅಷ್ಟೇ ಸಮೀಕ್ಷೆದಾರರನ್ನು ನಿಯೋಜಿಸಲಾಗಿದೆ. ಸಮೀಕ್ಷೆಯು ಸರಾಗವಾಗಿ ನಡೆಯಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಲಾಗಿದೆ. ತಹಶೀಲ್ದಾರರು, ತಾ.ಪಂ. ಇಒಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಮಿತಿಯಲ್ಲಿ ಇರಲಿದ್ದಾರೆ’ ಎಂದರು.

ADVERTISEMENT

‘ಆರಂಭದಲ್ಲಿ ಸಮೀಕ್ಷೆಗೆ ಎದುರಾಗಿದ್ದ ತಾಂತ್ರಿಕ ತೊಡಕುಗಳನ್ನು ನಿವಾರಿಸಲಾಗಿದೆ. ಇದೀಗ, ಸಮೀಕ್ಷೆಗೆ ಹೊಸದಾಗಿ ನಾಲ್ಕು ಲಿಂಕ್‌ಗಳನ್ನು ನೀಡಲಾಗಿದೆ. ಅನುಮಾನ ಮತ್ತು ಗೊಂದಲ ನಿವಾರಣೆಗೆ ಸಹಾಯವಾಣಿ: 8296863069, 973147284 ಆರಂಭಿಸಲಾಗಿದೆ. ಸಮೀಕ್ಷೆದಾರರು ಸೇರಿದಂತೆ ಸಾರ್ವಜನಿಕರು ಸಹ ಸಮೀಕ್ಷೆ ಕುರಿತು ಸಹಾಯವಾಣಿಗೆ ಕರೆ ಮಾಡಿ ಬಗೆಹರಿಸಿಕೊಳ್ಳಬಹುದು’ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಉಪಾಧ್ಯಕ್ಷೆ ಆಯಿಷಾ ಬಾನು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಲಾಲ್ ಮಹಮ್ಮದ್, ನಗರಸಭೆ ಪೌರಾಯುಕ್ತ ಡಾ. ಜಯಣ್ಣ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.