ADVERTISEMENT

ಜಾತಿ ಸಮೀಕ್ಷೆ | ಒಕ್ಕಲಿಗ ಎಂದೇ ನಮೂದಿಸಿ: ಅನ್ನದಾನೇಶ್ವರನಾಥ ಸ್ವಾಮೀಜಿ

ಅನ್ನದಾನೇಶ್ವರನಾಥ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯ ಮುಖಂಡರ ಸಭೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 3:08 IST
Last Updated 21 ಸೆಪ್ಟೆಂಬರ್ 2025, 3:08 IST
ಕನಕಪುರದಲ್ಲಿ ಶನಿವಾರ ನಡೆದ ಒಕ್ಕಲಿಗ ಮುಖಂಡರ ಸಭೆಯನ್ನು ಅನ್ನದಾನೇಶ್ವರನಾಥ ಸ್ವಾಮೀಜಿ ಉದ್ಘಾಟಿಸಿದರು
ಕನಕಪುರದಲ್ಲಿ ಶನಿವಾರ ನಡೆದ ಒಕ್ಕಲಿಗ ಮುಖಂಡರ ಸಭೆಯನ್ನು ಅನ್ನದಾನೇಶ್ವರನಾಥ ಸ್ವಾಮೀಜಿ ಉದ್ಘಾಟಿಸಿದರು   

ಕನಕಪುರ: ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಒಕ್ಕಲಿಗ ಸಮುದಾಯ ತಮ್ಮ ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ‘ಒಕ್ಕಲಿಗ’ ಎಂದು ನಮೂದಿಸಬೇಕೆಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಸಲಹೆ ನೀಡಿದ್ದಾರೆ. 

ನಗರದಲ್ಲಿ ಶನಿವಾರ ನಡೆದ ಕನಕಪುರ ತಾಲ್ಲೂಕು ಒಕ್ಕಲಿಗ ಸಮುದಾಯದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. 

‘ಒಕ್ಕಲಿಗ ಸಮುದಾಯದಲ್ಲಿ ಸಾಕಷ್ಟು ಬಡವರು, ಅವಿದ್ಯಾವಂತರು ಮತ್ತು ಭೂಮಿ ಇಲ್ಲದವರಿದ್ದಾರೆ. ಆದರೂ, ಒಕ್ಕಲುತನ ಮಾಡಿ ಇತರರಿಗೆ ಆಹಾರ ಒದಗಿಸುತ್ತಿದ್ದಾರೆ. ಈ ಸಮೀಕ್ಷೆಯಲ್ಲಿ ತಮ್ಮ ನಿಜವಾದ ಸಾಮಾಜಿಕ-ಆರ್ಥಿಕ ಸ್ಥಿತಿ ಮರೆಮಾಚದೆ ತಿಳಿಸಬೇಕು. ಅವಿದ್ಯಾವಂತರು, ಆಸ್ತಿ-ಮನೆ ಇಲ್ಲದವರು, ಕೂಲಿ ಕೆಲಸಗಾರರು ಯಾವುದೇ ಹಿಂಜರಿಕೆ ಇಲ್ಲದೆ ತಮ್ಮ ಕುಟುಂಬದ ಸ್ಥಿತಿ ತಿಳಿಸಿ, ಕುಟುಂಬದ ಪ್ರತಿ ಸದಸ್ಯರ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಬೇಕು’ ಎಂದರು.

ADVERTISEMENT

ಹಳೆ ಮೈಸೂರು ಪ್ರಾಂತ್ಯದ ಒಕ್ಕಲಿಗರು ಸಂಖ್ಯಾಬಲ ಹೊಂದಿದ್ದರೂ ರಾಜಕೀಯ ಕಾರಣಗಳಿಂದ ಒಗ್ಗಟ್ಟಾಗಿಲ್ಲ ಎಂದು ಟೀಕಿಸಿದರು. ಸಮೀಕ್ಷೆ ಸಮಯದಲ್ಲಿ ರಾಜಕೀಯ ಮರೆತು, ಸಮುದಾಯದ ಏಳಿಗೆ ಮತ್ತು ಪ್ರಗತಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ವೆಂಕಟರಾಮೇಗೌಡ ಮಾತನಾಡಿ, ಈ ಸಮೀಕ್ಷೆ ಸಮುದಾಯದ ಸಂಖ್ಯೆ ಮತ್ತು ಸಾಮಾಜಿಕ-ಶೈಕ್ಷಣಿಕ ಸ್ಥಿತಿಯನ್ನು ಸರ್ಕಾರಕ್ಕೆ ತಿಳಿಸಲು ಸಹಾಯಕವಾಗಿದೆ. ಇದು ಭವಿಷ್ಯದ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿ ಯೋಜನೆಗಳಿಗೆ ಆಧಾರವಾಗಿದೆ ಎಂದರು.

ಆರ್.ಇ.ಎಸ್.ಅಧ್ಯಕ್ಷ ಎಚ್.ಕೆ.ಶ್ರೀಕಂಠ, ಮುಖಂಡರು ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಮನವಿ ಮಾಡಿದರು. 

ಮುಖಂಡರಾದ ಡಿ.ಎಂ.ವಿಶ್ವನಾಥ್, ಕೆ.ಪಿ.ಕುಮಾರ್, ಸಂಪತ್ ಕುಮಾರ್, ಪಟೇಲ್.ಸಿ.ರಾಜು ಮಾತನಾಡಿ, ಇದು ರಾಜಕೀಯವಲ್ಲ. ಸಮುದಾಯದ ಭವಿಷ್ಯದ ಕಾರ್ಯಕ್ರಮ ಎಂದು ಅಭಿಪ್ರಾಯಪಟ್ಟರು.

ಮುಖಂಡರಾದ ಬಿ.ನಾಗರಾಜು, ಗಬ್ಬಾಡಿ ಕಾಡೇಗೌಡ, ರಾಮದಾಸ್, ಯಧುನಂದನ್, ಸಾತನೂರು ನಾಗರಾಜು, ಕುಮಾರಸ್ವಾಮಿ, ಸಿದ್ದರಾಜು, ಸ್ಟುಡಿಯೋ ಚಂದ್ರು, ಬೊಮ್ಮನಹಳ್ಳಿ ಕುಮಾರಸ್ವಾಮಿ ಇದ್ದರು.

ಕನಕಪುರ ಸುಮಿತ್ರ ಪಾರ್ಟಿ ಹಾಲ್ ನಲ್ಲಿ ಶನಿವಾರ ನಡೆದ ಒಕ್ಕಲಿಗ ಮುಖಂಡರ ಸಭೆಯನ್ನು ಅನ್ನದಾನೇಶ್ವರನಾಥ ಸ್ವಾಮೀಜಿ ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.