ADVERTISEMENT

‘ಡೊಳ್ಳು ಮಹೇಶ್’ಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2025, 14:35 IST
Last Updated 4 ಮಾರ್ಚ್ 2025, 14:35 IST
ಎಂ. ಮಹೇಶ್
ಎಂ. ಮಹೇಶ್   

ರಾಮನಗರ: ಕರ್ನಾಟಕ ಜಾನಪದ ಅಕಾಡೆಮಿಯ 2024ನೇ ಸಾಲಿನ ಗೌರವ ಪ್ರಶಸ್ತಿಗೆ ತಾಲ್ಲೂಕಿನ ಕೂಟಗಲ್ ಗ್ರಾಮದ ಡೊಳ್ಳು ಕಲಾವಿದ ಎಂ. ಮಹೇಶ್ ಭಾಜನರಾಗಿದ್ದಾರೆ. ಕೃಷಿಕ ಕುಟುಂಬದ ಮಹದೇವಯ್ಯ ಕೆ.ವಿ. ಹಾಗೂ ಜಯಲಕ್ಷ್ಮಮ್ಮ ಪುತ್ರರಾದ ಮಹೇಶ್, 1997ರಲ್ಲಿ ಡೊಳ್ಳು ಕುಣಿತ ಕಲಿತರು. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗಳನ್ನು ನೀಡಿರುವ ಅವರು ‘ಡೊಳ್ಳು ಮಹೇಶ್’ ಎಂದು ಜನಪ್ರಿಯವಾಗಿದ್ದಾರೆ.

ಜಾನಪದ ಜಾತ್ರೆ, ಸಾಹಿತ್ಯ ಸಮ್ಮೇಳನ, ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ, ಐಎಎಸ್, ಐಪಿಎಸ್ ಅಧಿಕಾರಿಗಳಿಗೂ ಮಹೇಶ್ ಡೊಳ್ಳು ಕುಣಿತ ತರಬೇತಿ ನೀಡಿದ್ದಾರೆ. ಆಕಾಶವಾಣಿ, ದೂರದರ್ಶನ ಹಾಗೂ ಸಿನಿಮಾಗಳಲ್ಲಿಯೂ ಇವರ ಪ್ರದರ್ಶನ ಗಮ ಸೆಳೆದಿದೆ. ಇದುವರೆಗೆ ಐದು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವ ಹೆಗ್ಗಳಿಕೆ ಅವರದ್ದು.

ನಾಡಿನ ಡೊಳ್ಳು ಕಲೆಯನ್ನು ಹೊರ ರಾಜ್ಯಗಳಲ್ಲೂ ಪರಿಚಯಿಸಿರುವ ಮಹೇಶ್, ತಮ್ಮ ಕಲೆಯನ್ನು ಯುವ ತಲೆಮಾರಿಗೆ ತರಬೇತಿ ನೀಡುವ ಮೂಲಕ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಕಲಾ ಸೇವೆಯನ್ನು ಮೆಚ್ಚಿ ಅನೇಕ ಸಂಘ–ಸಂಸ್ಥೆಗಳು ಅವರಿಗೆ ಪ್ರಶಸ್ತಿ–ಪುರಸ್ಕಾರ ನೀಡಿ ಗೌರವಿಸಿವೆ. ಇದೀಗ ಜಾನಪದ ಅಕಾಡೆಮಿಯು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ADVERTISEMENT

‘ನನ್ನ ಪಾಡಿಗೆ ನಾನು ಡೊಳ್ಳು ಕುಣಿತ ಪ್ರದರ್ಶನದ ಮೂಲಕ ಜಾನಪದ ಕಲಾ ಸೇವೆ ಮಾಡಿಕೊಂಡು ಬರುತ್ತಿದ್ದೇನೆ. ಕರ್ನಾಟಕ ಜಾನಪದ ಅಕಾಡೆಮಿಯು ನನ್ನ ಸೇವೆಯನ್ನು ಗುರುತಿಸಿ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನನ್ನ ಜವಾಬ್ಧಾರಿಯನ್ನು ಹೆಚ್ಚಿಸಿದೆ’ ಎಂದು ಎಂ. ಮಹೇಶ್ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.