ರಾಮನಗರ: ರಾಜ್ಯ ಸರ್ಕಾರ ಸೋಮವಾರದಿಂದ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮೊದಲ ದಿನ ಹಲವು ತೊಡಕುಗಳು ಎದುರಾದವು. ಸಮೀಕ್ಷೆಯ ಆ್ಯಪ್ ಡೌನ್‌ಲೋಡ್ ವಿಳಂಬ, ಕೈ ಕೊಟ್ಟ ಸರ್ವರ್, ಬಾರದ ಒಟಿಪಿ, ಬ್ಲಾಕ್ ಬಗ್ಗೆ ಗೊಂದಲ, ಗಣತಿದಾರರಿಗೆ ಇನ್ನೂ ತಲುಪದ ಕೈಪಿಡಿಯಿಂದಾಗಿ ಸಮೀಕ್ಷೆಗೆ ಮೊದಲ ದಿನ ಉತ್ತಮ ಆರಂಭ ಸಿಗಲಿಲ್ಲ.
ಬೆಳಿಗ್ಗೆಯಿಂದಲೇ ಸಮೀಕ್ಷೆಗೆ ಸಿದ್ಧರಾಗಿದ್ದ ಗಣತಿದಾರರಿಗೆ ಸಮೀಕ್ಷೆಯ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಲಿಂಕ್ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಂತು. ಲಿಂಕ್ ಒತ್ತಿದಾಗ ಹಲವರ ಸ್ಮಾರ್ಟ್‌ಫೋನ್‌ನಲ್ಲಿ ಆ್ಯಪ್ ಸರಿಯಾಗಿ ಡೌನ್‌ಲೋಡ್ ಆಗಲೇ ಇಲ್ಲ. ಇದು ಗಣತಿದಾರರನ್ನು ಗೊಂದಲಕ್ಕೆ ದೂಡಿತು.
ಹಳೆ ಸ್ಮಾರ್ಟ್‌ಫೋನ್: ‘ಸಮೀಕ್ಷೆ ಮಾಡುವ ಗಣತಿದಾರರ ಬಳಿ ಕನಿಷ್ಠ ಆ್ಯಂಡ್ರಾಯ್ಡ್–7 ಆವೃತ್ತಿಯ ಸ್ಮಾರ್ಟ್‌ಪೋನ್ ಇರಬೇಕು. ಕೆಲವರ ಸ್ಮಾರ್ಟ್‌ಫೋನ್‌ಗಳು ಹಳೆಯದಾಗಿರುವುದು, ಸಿಸ್ಟಮ್ ಅಪ್ಡೇಟ್ ಆಗದಿರುವುದರಿಂದ ಡೌನ್‌ಲೋಡ್ ಸಮಸ್ಯೆಯಾಗಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಲಾಲ್ ಮೊಹಮ್ಮದ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೆಲ ಗಣತಿದಾರರ ಬಳಿ 5ಜಿ ಬದಲು 4ಜಿ ಫೋನ್ ಇರುವುದು ಹಾಗೂ ಸಮೀಕ್ಷೆಗೆ ತೆರಳಿದ್ದ ಸ್ಥಳದಲ್ಲಿ ನೆಟ್‌ವರ್ಕ್ ಸಿಗದಿರುವುದು ಸಹ ಆ್ಯಪ್ ಡೌನ್‌ಲೋಡ್ ವಿಳಂಬಕ್ಕೆ ಕಾರಣವಾಗಿದೆ. ಈ ಕುರಿತು ಬಂದ ದೂರುಗಳನ್ನು ಮೇಲ್ವಿಚಾರಕರು ಆಗಿಂದಾಗ್ಗೆ ಸರಿಪಡಿಸಿದ್ದಾರೆ. ಮೇಲ್ವಿಚಾರಕರಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಹ ಸೂಚನೆಗಳನ್ನು ನೀಡಿದ್ದಾರೆ’ ಎಂದು ಹೇಳಿದರು.
ಬಾರದ ಒಟಿಪಿ: ಸಮೀಕ್ಷೆ ನಡೆಸುವಾಗ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಜನರೇಟ್ ಆಗುವುದು ತಡವಾಯಿತು. ಇದರಿಂದಾಗಿ ಮನೆಗಳ ಮುಂದೆ ಗಣತಿದಾರರು ಅರ್ಧ ಗಂಟೆಗೂ ಹೆಚ್ಚು ಹೊತ್ತು ನಿಲ್ಲಬೇಕಾಯಿತು. ಈ ತಾಂತ್ರಿಕ ತೊಂದರೆಗೆ ಮನೆಯವರು ಸಹ ಕಾಯಬೇಕಾಯಿತು. ಮೇಲ್ವಿಚಾರಕರ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಯುವುದು ವಿಳಂಬವಾಯಿತು ಎಂದು ಕೆಲ ಗಣತಿದಾರರು ಅಳಲು ತೋಡಿಕೊಂಡರು.
‘ರಾಜ್ಯದಾದ್ಯಂತ ಒಮ್ಮೆಲೆ ಆ್ಯಪ್ ಬಳಸಿ ಸಮೀಕ್ಷೆ ನಡೆಸುತ್ತಿರುವುರಿಂದ ಕೆಲ ಹೊತ್ತು ಸರ್ವರ್ ಡೌನ್ ಸಮಸ್ಯೆ ಎದುರಾಯಿತು. ಇದರಿಂದಾಗಿ, ಒಟಿಪಿ ಜನರೇಟ್ ಆಗಿಲ್ಲ. ಸಮಸ್ಯೆಯನ್ನು ಕೂಡಲೇ ಪರಿಣಿತರ ಗಮನಕ್ಕೆ ತರಲಾಯಿತು. ಕೆಲ ಹೊತ್ತಿನ ಬಳಿಕ ಸಮಸ್ಯೆ ಬಗೆಹರಿದು ಸಮೀಕ್ಷೆ ಮುಂದುವರಿದಿದೆ’ ಎಂದು ಬಿಲಾಲ್ ತಿಳಿಸಿದರು.
‘ಮೊದಲ ದಿನ ಎಷ್ಟು ಮನೆಗಳ ಸಮೀಕ್ಷೆ ಮಾಡಲಾಗಿದೆ ಎಂಬ ಮಾಹಿತಿಯು ರಾಜ್ಯಮಟ್ಟದಲ್ಲಿ ಕೇಂದ್ರಿಕೃತವಾಗಿ ಸಂಗ್ರಹಿಸಲಾಗಿರುತ್ತದೆ. ಜಿಲ್ಲಾವಾರು ಮಾಹಿತಿ ನಮಗಿನ್ನೂ ಸಿಕ್ಕಿಲ್ಲ’ ಎಂದು ಹೇಳಿದರು.
ಕೈಪಿಡಿ ಕೊರತೆ; ಮುಗಿಯದ ತರಬೇತಿ
ಸಮೀಕ್ಷೆ ಶುರುವಾದರೂ ಕನಕಪುರ ಚನ್ನಪಟ್ಟಣ ಸೇರಿದಂತೆ ಕೆಲವೆಡೆ ಗಣತಿದಾರರಿಗೆ ಇನ್ನೂ ಕೈಪಿಡಿ ತಲುಪಿಲ್ಲ. ಇದರಿಂದಾಗಿ ಹಲವರು ಮೊದಲ ದಿನ ಸಮೀಕ್ಷೆಯನ್ನೇ ಶುರು ಮಾಡಲಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಕೆಲ ಗಣತಿದಾರರು ತಿಲಿಸಿದರು. ಸಮೀಕ್ಷೆ ಸಂದರ್ಭದಲ್ಲೇ ಹಲವು ಗಣತಿದಾರರಿಗೆ ಆನ್‌ಲೈನ್ ಮೂಲಕ ಸೋಮವಾರವೂ ತರಬೇತಿ ನೀಡಲಾಯಿತು. ಅವರೂ ಸಹ ಸಮೀಕ್ಷೆ ಆರಂಭಿಸಲಿಲ್ಲ. ‘ಸಮೀಕ್ಷೆಗೆ ನಿಯೋಜನೆಗೊಂಡಿರುವ ಗಣತಿದಾರರಲ್ಲಿ ತರಬೇತಿಗೆ ತಪ್ಪಿಸಿಕೊಂಡಿದ್ದವರಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ತರಬೇತಿ ನೀಡಲಾಗಿದೆ. ಕೈಪಿಡಿಗಳ ಕೊರತೆಯಿಂದಾಗಿ 350ಕ್ಕೂ ಹೆಚ್ಚು ಗಣತಿದಾರರಿಗೆ ತಲುಪಿಲ್ಲ. ಅಂತಹವರಿಗೆ ಮಂಗಳವಾರ ಬೆಳಿಗ್ಗೆ ಸಮೀಕ್ಷೆ ಶುರುವಾಗುವ ಹೊತ್ತಿಗೆ ಕೈಪಿಡಿಗಳನ್ನು ತಲುಪಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಬಿಲಾಲ್ ಮೊಹಮ್ಮದ್ ಹೇಳಿದರು.
ಗಣತಿದಾರರಿಗೆ ‘ಬ್ಲಾಕ್’ ಗೊಂದಲ
ಜಿಲ್ಲೆಯಲ್ಲಿ ಸಮೀಕ್ಷೆಗಾಗಿ 3166 ಬ್ಲಾಕ್‌ಗಳನ್ನು ಗುರುತಿಸಿ ಪ್ರತಿ ಬ್ಲಾಕ್‌ಗೂ ಒಬ್ಬ ಗಣತಿದಾರರನ್ನು ನಿಯೋಜಿಸಲಾಗಿದೆ. ಆದರೆ ಮೊದಲ ದಿನ ಗಣತಿದಾರರಿಗೆ ತಮ್ಮ ಬ್ಲಾಕ್ ಯಾವುದು ಯಾವ ಮನೆಗೆ ಹೋಗಿ ಸಮೀಕ್ಷೆ ಮಾಡಬೇಕೆಂದು ತೋಚದೆ ಪರದಾಡಿ ಮೇಲ್ವಿಚಾರಕರ ಗಮನಕ್ಕೆ ತಂದರು. ಗಣತಿದಾರರಿಗೆ ವಹಿಸಿರುವ ಬ್ಲಾಕ್‌ಗಳ ಗೊಂದಲವನ್ನು ಮೇಲ್ವಿಚಾರಕರು ಪರಿಹರಿಸಿದರು. ಬಳಿಕ ಗಣತಿದಾರರು ತಮಗೆ ವಹಿಸಿದ ಬ್ಲಾಕ್‌ಗಳಲ್ಲಿ ಕೆಲ ಮನೆಗಳ ಸಮೀಕ್ಷೆ ಮುಗಿಸಿದರು ಎಂದು ಬಿಸಿಎಂ ಇಲಾಖೆ ಅಧಿಕಾರಿಗಳು ತಿಳಿಸಿದರು.
ಮೊದಲ ದಿನ ಎದುರಾಗಿರುವ ಎಲ್ಲಾ ತೊಡಕುಗಳನ್ನು ಬಹುತೇಕ ನಿವಾರಣೆ ಮಾಡಲಾಗಿದೆ. ಮಂಗಳವಾರದಿಂದ ಸಮೀಕ್ಷೆಯು ಯಾವುದೇ ಅಡಚಣೆ ಇಲ್ಲದೆ ಸರಾಗವಾಗಿ ನಡೆಯಲಿದೆ. ಅದಕ್ಕೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ.–ಬಿಲಾಲ್ ಮೊಹಮ್ಮದ್, ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.