ರಾಮನಗರ: ರಂಗಭೂಮಿಯ ಹಿರಿಯ ಕಲಾವಿದ ತಾಲ್ಲೂಕಿನ ಕೂಟಗಲ್ ಹೋಬಳಿಯ ಯರೇಹಳ್ಳಿಯವರಾದ ಡಾ. ವೈ.ಎಚ್. ಸಿದ್ದರಾಮೇಗೌಡ ಅವರು, ಕರ್ನಾಟಕ ನಾಟಕ ಅಕಾಡೆಮಿಯ 2025-26ನೇ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮೂರು ದಶಕದಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಸಿದ್ದರಾಮೇಗೌಡ ಅವರು, ನಾಡಪ್ರಭು ಕೆಂಪೇಗೌಡ ರಂಗಭೂಮಿ ಕಲಾವಿರದ ಸಂಘದ ಅಧ್ಯಕ್ಷ ಕೂಡ. 1969ರಲ್ಲಿ ಯರೇಹಳ್ಳಿಯಲ್ಲಿ ಜನಿಸಿದ ಸಿದ್ದರಾಮೇಗೌಡರು, 1980ರಲ್ಲಿ ರಂಗಭೂಮಿ ಪ್ರವೇಶಿಸಿದರು. ಅಂದಿನಿಂದ ಇಂದಿನವರೆಗೆ ರಂಗಸೇವೆ ಮಾಡುತ್ತಲೇ ಬಂದಿದ್ದಾರೆ.
ಪೌರಾಣಿಕ ನಾಟಕಗಳಲ್ಲಿನ ಅಭಿನಯದಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕುರುಕ್ಷೇತ್ರ ನಾಟಕದಲ್ಲಿ ಕರ್ಣನ ಪಾತ್ರ, ರಾಮಾಯಣದಲ್ಲಿ ವಶಿಷ್ಟ, ಮಾಯಾ ರಾವಣ, ರಾಜಾ ವಿಕ್ರಮ ನಾಟಕದಲ್ಲಿ ಬೃಹಸ್ಪತಾಚಾರ್ಯ, ರಾಜಾಸೂಯಯಾಗ ನಾಟಕದಲ್ಲಿ ಜರಾಸಂಧ, ಸಿದ್ದಾಪ್ಪಾಜಿ ಪವಾಡ ನಾಟಕದಲ್ಲಿ ಮಂಟೇಸ್ವಾಮಿ ಪಾತ್ರ ಸೇರಿದಂತೆ ಹಲವು ಪಾತ್ರಗಳಿಗೆ ಸಿದ್ದರಾಮೇಗೌಡ ಅವರು ಜೀವ ತುಂಬಿದ್ದಾರೆ. ರಂಗಗೀತೆಯಲ್ಲೂ ಅವರದ್ದು ಎತ್ತಿದ ಕೈ.
ರಂಗಭೂಮಿ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿಯೂ ಸಿದ್ದರಾಮೇಗೌಡ ಅವರು ಕೆಲಸ ಮಾಡಿದ್ದಾರೆ. ರಂಗಭೂಮಿ ಕಲಾವಿದರು, ಸ್ವಾತಂತ್ರ್ಯ ಹೋರಾಟಗಾರರು, ಬಾಲ ಕಲಾವಿದರು, ಪ್ರಗತಿಪರ ರೈತರು, ಸಮಾಜ ಸೇವಕರ ಸೇವೆ ಗುರುತಿಸಿ ಸಂಘದಿಂದ ಸನ್ಮಾನಿಸುವ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ.
ಸಿದ್ದರಾಮೇಗೌಡ ಅವರ ಸೇವೆ ಗುರುತಿಸಿ ಜಿಲ್ಲಾಡಳಿತ ಸೇರಿದಂತೆ ಹಲವು ಸಂಘ–ಸಂಸ್ಥೆಗಳು ಸನ್ಮಾನ ಮಾಡಿವೆ. ಪ್ರಶಸ್ತಿ ಹಾಗೂ ಬಿರುದುಗಳನ್ನು ನೀಡಿ ಗೌರವಿಸಿವೆ. ಕರ್ನಾಟಕ ಕಲಾ ಕೇಸರಿ, ಕಲಾ ಚತುರ, ಉತ್ತಮ ರಂಗಭೂಮಿ ಕಲಾವಿದ, ಜಿಲ್ಲಾಡಳಿತರಿಂದ ಎರಡು ಬಾರಿ ರಾಜ್ಯೋತ್ಸವ ಪ್ರಶಸ್ತಿ, ರಂಗ ರತ್ನ, ಮಾಗಡಿ ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಧ್ರುವತಾರೆ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳು ಅವರ ಕಲಾ ಸಾಧನೆಗೆ ಸಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.