ADVERTISEMENT

ಉಸ್ತುವಾರಿ ಬಗ್ಗೆ ಯಾರಲ್ಲೂ ಅಸಮಾಧಾನ ಇಲ್ಲ: ಸಚಿವ ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 7:10 IST
Last Updated 26 ಜನವರಿ 2022, 7:10 IST
ಡಾ. ಸಿ.ಎನ್. ಅಶ್ವತ್ಥನಾರಾಯಣ
ಡಾ. ಸಿ.ಎನ್. ಅಶ್ವತ್ಥನಾರಾಯಣ   

ರಾಮನಗರ: ಹೊರ ಜಿಲ್ಲೆಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಪದ್ಧತಿಯು ರಾಜ್ಯಕ್ಕೆ ಹೊಸತಾಗಿದ್ದು, ಈ ಬಗ್ಗೆ ಒಂದಿಷ್ಟು ಗೊಂದಲ ಸಹಜ. ಆದರೆ ಯಾರಲ್ಲೂ ಅಸಮಾಧಾನ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟನೆ ನೀಡಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಧ್ವಜಾರೋಹಣದ ಬಳಿಕ ಪತ್ರಕರ್ತರ ಜೊತೆ ಅವರು ಮಾತನಾಡಿದರು. ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಈ ಪದ್ಧತಿ ಅನುಸರಿಸುತ್ತಿದೆ. ನಮ್ಮಲ್ಲಿ ಈ ಮೊದಲು ಆಯಾ ಜಿಲ್ಲೆಯ ಸಚಿವರಿಗೇ ಉಸ್ತುವಾರಿ ನೀಡಲಾಗುತ್ತಿತ್ತು. ಆದರೆ ಪಕ್ಷದ ಹೈಕಮಾಂಡ್ ಈಗ ಈ ಪದ್ಧತಿ ಬದಲಿಸಿದೆ ಎಂದರು.

ಬಿಜೆಪಿ ಬಿಡುವುದಿಲ್ಲ: ಇಡೀ ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ಅಪ್ರಸ್ತುತ ಆಗುತ್ತಿದ್ದು, ಅಲ್ಲಿ ಇಲ್ಲಿ ಉಳಿಸಿಕೊಂಡಿರುವ ಅಲ್ಪ ನೆಲೆಯನ್ನೂ ಕಳೆದುಕೊಳ್ಳುತ್ತಿದೆ. ಆ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಿಸಲು ಹುಡುಕಾಟ ನಡೆದೇ ಇದೆ. ಅಲ್ಲಿರುವವರಿಗೇ ನೆಲೆ ಇಲ್ಲ. ರಾಜ್ಯದ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಹುದ್ದೆಗೆ ಕಚ್ಚಾಡುತ್ತ ಹಗಲು ಕನಸು ಕಾಣುತ್ತಿದ್ದಾರೆ. ಹೀಗಿರುವಾಗ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗುವ ಪರಿಸ್ಥಿತಿ ಯಾರಿಗೂ ಬಂದಿಲ್ಲ. ನಮ್ಮ ಪಕ್ಷದಿಂದ ಯಾರೂ ಅಲ್ಲಿಗೆ ಹೋಗುವುದಿಲ್ಲ. ಡಿಕೆಶಿ ಅವರನ್ನು ನಮ್ಮ ಕೆಲ ಸಚಿವರು ಭೇಟಿ ಮಾಡಿದ್ದಾರೆ ಎಂಬುದೆಲ್ಲ ಗಾಳಿ ಸುದ್ದಿ ಎಂದು ಹೇಳಿದರು.

ADVERTISEMENT

ಸಂಪುಟ ವಿಸ್ತರಣೆ ಇಲ್ಲವೇ ಪುನರ್‌ ರಚನೆ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಚಾರ. ಅವರಿಗೆ ಯಾವಾಗ ಅಗತ್ಯ ಇದೆ ಎನ್ನಿಸುತ್ತದೆಯೋ ಆಗ ಹೈಕಮಾಂಡ್‌ ಅನುಮತಿ ಪಡೆದು ಮಾಡುತ್ತಾರೆ ಎಂದರು. ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಯೋಚನೆಯೇ ಇಲ್ಲ. ಬೊಮ್ಮಾಯಿ ಅವರೇ ಆಡಳಿತಾವಧಿ ಪೂರ್ಣಗೊಳಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.

ರಾಗಿ ಖರೀದಿ: ಈ ಹಿಂದೆ ಪಡಿತರ ವ್ಯವಸ್ಥೆ ಅಡಿ ರಾಗಿ ಕೊಡುವ ಪದ್ಧತಿಯೇ ರಾಜ್ಯದಲ್ಲಿ ಇರಲಿಲ್ಲ. ನಂತರ ಸರ್ಕಾರ ಅದನ್ನು ಜಾರಿಗೆ ತಂದು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ರೈತರಿಂದ ರಾಗಿ ಖರೀದಿಸುತ್ತಿದೆ. ಈಗ ರಾಜ್ಯದಲ್ಲೂ ರಾಗಿ ಬೆಳೆಯುವ ಪ್ರಮಾಣ ಹೆಚ್ಚಿದೆ. ಹೀಗಾಗಿ ರಾಜ್ಯದ ಜನರಿಗೆ ಹೆಚ್ಚು ಅಗತ್ಯ ಇದೆಯೋ ಅಷ್ಟು ಪ್ರಮಾಣದ ರಾಗಿ ಖರೀದಿಸಲಾಗುವುದು ಎಂದರು.

ಮೇಕೆದಾಟು ಅಣೆಕಟ್ಟೆ ನಿರ್ಮಾಣ ಬಿಜೆಪಿಯಿಂದ ಸಾಧ್ಯವೇ ಹೊರತು ಕಾಂಗ್ರೆಸ್‌ನಿಂದ ಅಲ್ಲ. ಕಾಂಗ್ರೆಸ್ ಡಿಎಂಕೆ ಬೆಂಬಲ ಆಧರಿತ ಪಕ್ಷ. ಇಂದು ಕೇಂದ್ರದಲ್ಲಿ ಅಸ್ತಿತ್ವ ಕಳೆದುಕೊಂಡು ಪ್ರಾದೇಶಿಕ ಪಕ್ಷದ ಮಟ್ಟಕ್ಕೆ ಬಂದಿದೆ. ನೀರಿನ ವಿಚಾರವನ್ನು ರಾಜಕಾರಣ ಮಾಡುತ್ತಿದೆ. ಸದನದಲ್ಲಿ ಈ ಬಗ್ಗೆ ಚರ್ಚಿಸಿಲ್ಲ. ಆದರೆ ಬೀದಿಗೆ ಇಳಿದು ಪ್ರತಿಭಟನೆ ರಾಜಕಾರಣ ಮಾಡುತ್ತಿದೆ. ಇದಕ್ಕೆ ರಾಜಕೀಯ ಹಾಗೂ ಆಡಳಿತಾತ್ಮಕವಾಗಿಯೂ ಉತ್ತರ ನೀಡುತ್ತೇವೆ ಎಂದರು.

ಮಾರ್ಚ್‌ನಲ್ಲಿ ಭೂಮಿಪೂಜೆ: ಮಾರ್ಚ್‌ ಮೊದಲ ವಾರದಲ್ಲಿ ರಾಮನಗರದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿ.ವಿ. ಕ್ಯಾಂಪಸ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಸಚಿವರು ತಿಳಿಸಿದರು. ಸದ್ಯ ಯಾವುದೇ ಕಾನೂನಿನ ಅಡೆತಡೆ ಇಲ್ಲ. ಭೂ ಪರಿಹಾರ ಸಂಬಂಧ ಇದ್ದ ವ್ಯಾಜ್ಯಗಳನ್ನು ಪರಿಹರಿಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.