ADVERTISEMENT

ರಾಮನಗರ | ಜಿಲ್ಲೆಯಲ್ಲಿ ಮುಂದುವರಿದ ವರುಣ ಸಿಂಚನ

ಕೆಲವೆಡೆ ಮಳೆ ನೀರು ನಿಂತು ಸೃಷ್ಟಿಯಾಗಿದ್ದ ಆವಾಂತರ ತಹಬದಿಗೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 2:10 IST
Last Updated 11 ಆಗಸ್ಟ್ 2025, 2:10 IST
ರಾಮನಗರದಲ್ಲಿ ಭಾನುವಾರ ಸಂಜೆ ಸಾಧಾರಣ ಮಳೆ ಸುರಿಯಿತು
ರಾಮನಗರದಲ್ಲಿ ಭಾನುವಾರ ಸಂಜೆ ಸಾಧಾರಣ ಮಳೆ ಸುರಿಯಿತು   

ರಾಮನಗರ: ಜಿಲ್ಲೆಯ ವಿವಿಧೆಡೆ ಭಾನುವಾರ ಸಾಧಾರಣ ಮಳೆಯಾಗಿದೆ. ರಾಮನಗರ, ಚನ್ನಪಟ್ಟಣ ಹಾಗೂ ಕನಕಪುರ ತಾಲ್ಲೂಕಿನ ವಿವಿಧೆಡೆ ಮಳೆಯಾಗಿದೆ. ಮಾಗಡಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ರಾತ್ರಿ ಮಳೆಯಾಗುವ ಸಾಧ್ಯತೆ ಇದೆ.

ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಬಿಡದಿ, ರಾಮನಗರ, ಚನ್ನಪಟ್ಟಣ ಸೇರಿದಂತೆ ಕೆಲವೆಡೆ ಕೆಲ ಹೊತ್ತು ಸಾಧಾರಣವಾಗಿ ಸುರಿದ ಮಳೆ, ಸಂಜೆ ಕೆಲ ಹೊತ್ತು ನಿಧಾನವಾಗಿ ಬಂತು. ಸಂಜೆ ನಂತರವೂ ಮೋಡ ಕವಿದ ವಾತಾವರಣ ಮುಂದುವರಿದಿರುವುದರಿಂದ ರಾತ್ರಿ ಮಳೆ ಬರುವ ಸಾಧ್ಯತೆ ಇದೆ.

ಈಗ ಸುರಿದಿರುವ ಮಳೆಯು ರಾಗಿ ಸೇರಿದಂತೆ ಇತರ ಬೆಳೆಗಳ ಬಿತ್ತನೆಗೆ ಪೂರಕವಾಗಿದೆ. ರೈತರು ಸಹ ಖುಷಿಯಾಗಿದ್ದಾರೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಬೆಳೆ ಸೇರಿದಂತೆ ಇತರ ಯಾವುದೇ ಹಾನಿಯಾಗಿರುವ ಕುರಿತು ವರದಿಯಾಗಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ತಗ್ಗಿದ ನೀರು: ಜಿಲ್ಲೆಯ ಚನ್ನಪಟ್ಟಣ, ರಾಮನಗರ, ಬಿಡದಿ, ಹಾರೋಹಳ್ಳಿ ಸೇರಿದಂತೆ ವಿವಿಧೆಡೆ ಶನಿವಾರ ಸುರಿದ ಮಳೆಯಿಂದಾಗಿ ರಸ್ತೆ, ಅಂಡರ್‌ಪಾಸ್‌ಗಳಲ್ಲಿ ಸಂಗ್ರಹವಾಗಿದ್ದ ಮಳೆ ನೀರು ಅಂದೇ ರಾತ್ರಿ ಮತ್ತು ಭಾನುವಾರ ಬೆಳಿಗ್ಗೆ ಹೊತ್ತಿಗೆ ಹರಿದು ಹೋಯಿತು. ಇದರಿಂದಾಗಿ ವಾಹನ ಸವಾರರು ಸೇರಿದಂತೆ ಸಾರ್ವಜನಿಕರು ನಿಟ್ಟುಸಿರು ಬಿಟ್ಟರು.

ADVERTISEMENT

ಚನ್ನಪಟ್ಟಣದಲ್ಲಿ ಯುಜಿಡಿ ಸಮಸ್ಯೆಯಿಂದಾಗಿ ಬೆಂಗಳೂರು–ಮೈಸೂರು ಹಳೆ ಹೆದ್ದಾರಿಯಲ್ಲಿರುವ ಪೆಟ್ರೋಲ್ ಬಂಕ್ ಆವರಣ ಸಂಪೂರ್ಣ ಜಲಾವೃತಗೊಂಡಿತ್ತು. ಸಾರ್ವಜನಿಕ ಆಸ್ಪತ್ರೆ, ತಗ್ಗು ಪ್ರದೇಶದ ಮನೆಗಳಿಗೂ ನೀರು ಹರಿದು ಆವಾಂತರ ಸೃಷ್ಟಿಯಾಗಿತ್ತು. ಭಾನುವಾರ ಬೆಳಿಗ್ಗೆ ಹೊತ್ತಿಗೆ ನೀರು ಹರಿದು ಹೋಗಿ ಯಥಾಸ್ಥಿತಿ ಇತ್ತು.

ರಾಮನಗರ ತಾಲ್ಲೂಕಿನ ಕುಂಬಾಪುರದ ರೈಲ್ವೆ ಕೆಳಸೇತುವೆಯಲ್ಲಿ ನೀರು ಕಟ್ಟಿಕೊಂಡಿದ್ದರಿಂದ ಕೆಲ ತಾಸು ಊರಿನ ಸಂಪರ್ಕ ಕಡಿತಗೊಂಡಿತ್ತು. ಬಳಿಕ, ಸ್ಥಳೀಯರೇ ನೀರು ಬೇರೆಡೆಗೆ ಹರಿದು ಹೋಗುವಂತೆ ಮಾಡಿದರು. ಬಳಿಕ, ಊರಿಗೆ ವಾಹನಗಳು ಹಾಗೂ ಜನರು ಓಡಾಡುವಂತಾಯಿತು. ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯು ರೈತರ ಮೊಗದಲ್ಲಿ ಹರ್ಷ ಮೂಡಿಸಿದ್ದು, ಕೆಲವೆಡೆ ನೀರು ನಿಂತು ಆವಾಂತರ ಸೃಷ್ಟಿಯಾಯಿತು.

ರಾಮನಗರ ತಾಲ್ಲೂಕಿನಲ್ಲಿ ಶನಿವಾರ ಸಂಜೆ ಸುರಿದ ಮಳೆಗೆ ಕುಂಬಾಪುರಕ್ಕೆ ಹೋಗುವ ರೈಲ್ವೆ ಕೆಳ ಸೇತುವೆ ಜಲಾವೃತಗೊಂಡಿದ್ದರಿಂದ ವಾಹನ ಮತ್ತು ಜನ ಸಂಚಾರ ಬಂದ್ ಆಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.