ADVERTISEMENT

ಕಾವೇರಿ ಕಿಚ್ಚು; ನಾಳೆ ರಾಮನಗರ ಬಂದ್

ವಿವಿಧ ಸಂಘಟನೆಗಳು, ಸಂಘ–ಸಂಸ್ಥೆಗಳ ಬೆಂಬಲ; ಹೋರಾಟಗಾರರಿಂದ ಮೌನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2023, 14:13 IST
Last Updated 25 ಸೆಪ್ಟೆಂಬರ್ 2023, 14:13 IST
<div class="paragraphs"><p>ರಾಮನಗರ ಬಂದ್ –ಸಾಂದರ್ಭಿಕ ಚಿತ್ರ</p></div>

ರಾಮನಗರ ಬಂದ್ –ಸಾಂದರ್ಭಿಕ ಚಿತ್ರ

   

ರಾಮನಗರ: ಕಾವೇರಿ ನೀರಿನ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಹಾಗೂ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಮಂಗಳವಾರ ಜಿಲ್ಲೆ ಬಂದ್‌ಗೆ ಕರೆ ಕೊಟ್ಟಿದೆ.

ಸಮಿತಿಯ ಬಂದ್ ಕರೆಗೆ ರೈತ ಸಂಘ, ಕನ್ನಡಪರ ಸಂಘಟನೆಗಳು, ಶಾಶ್ವತ ನೀರಾವರಿ ಹೋರಾಟ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳು ಸಹ ಬೆಂಬಲ ಕೊಟ್ಟಿವೆ. ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟ ನೈತಿಕ ಬೆಂಬಲ ವ್ಯಕ್ತಪಡಿಸಿದೆ. ಹಲವು ವರ್ತಕರು ಸಹ ಬೆಂಬಲ ನೀಡಿದ್ದಾರೆ.

ADVERTISEMENT

ಪಕ್ಷಗಳ ಬೆಂಬಲ: ಬಂದ್‌ಗೆ ಜೆಡಿಎಸ್, ಎಎಪಿ, ಎಸ್‌ಡಿಪಿಐ ಬೆಂಬಲ ವ್ಯಕ್ತಪಡಿಸಿವೆ. ಪ್ರತಿಭಟನಾ ಮೆರವಣಿಗೆಯಲ್ಲೂ ಪಾಲ್ಗೊಳ್ಳುವ ಸಾಧ್ಯತೆ ಇದೆ. ಬಿಜೆಪಿ ನೈತಿಕ ಬೆಂಬಲ ನೀಡಿದ್ದರೂ, ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ.

‘ರೈತಪರ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಬಂದ್‌ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಹಾಗಾಗಿ, ಬಂದ್‌ ಬೆಂಬಲಿಸುವೆ. ಮೌನ ಪ್ರತಿಭಟನೆಯಲ್ಲಿ ಭಾಗಿಯಾಗುವೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ‘ಪ್ರಜಾವಾಣಿ’ಗೆ ಹೇಳಿದರು.

‘ಬಂದ್‌ಗೆ ಸಂಬಂಧಿಸಿದಂತೆ ನಡೆದ ಸಭೆಗಳಿಗೆ ನಮಗೆ ಆಹ್ವಾನ ನೀಡಿಲ್ಲ. ಕರೆ ಕೊಡುವಾಗ ನಮ್ಮನ್ನು ವಿಶ್ವಾಸಕ್ಕೂ ತೆಗೆದುಕೊಂಡಿಲ್ಲ. ನೀರಿನ ವಿಷಯವಾಗಿದ್ದರಿಂದ ನಮ್ಮ ನೈತಿಕ ಬೆಂಬಲವಿದೆ. ಆದರೆ, ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸುವುದಿಲ್ಲ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಶಾಂತಿಯುತ: ‘ನಾವು ನಡೆಸುವ ಬಂದ್‌ ಶಾಂತಿಯುತವಾಗಿರಲಿದೆ. ಒತ್ತಾಯಪೂರ್ವಕವಾಗಿ ಅಂಗಡಿ–ಮುಂಗಟ್ಟು ಮುಚ್ಚುವಂತೆ ಯಾರಿಗೂ ಒತ್ತಡ ಹೇರುವುದಿಲ್ಲ. ನಾಡಿನ ಜೀವನದಿ ಕಾವೇರಿ ನೀರು ಕುಡಿಯುವವರೆಲ್ಲರೂ ಬಂದ್‌ ಅನ್ನು ಬೆಂಬಲಿಸುವ ವಿಶ್ವಾಸವಿದೆ. ನಗರ ಮತ್ತು ಪಟ್ಟಣದ ವರ್ತಕರು ತಮ್ಮ ಅಂಗಡಿ–ಮುಂಗಟ್ಟುಗಳನ್ನು ಮುಚ್ಚಿ ಸಹಕಾರ ನೀಡಬೇಕು. ನಾಗರಿಕ ಸಂಘಟನೆಗಳು, ಸಂಘ–ಸಂಸ್ಥೆಗಳು ಸಹ ನಮ್ಮೊಂದಿಗೆ ಕೈ ಜೋಡಿಸಿ ಬಂದ್ ಯಶಸ್ವಿಗೆ ಸಹಕರಿಸಬೇಕು’ ಎಂದು ರೈತ ಮುಖಂಡ ಸಿ. ಪುಟ್ಟಸ್ವಾಮಿ ಅವರು ಮನವಿ ಮಾಡಿದರು.

ಬಂದ್‌ಗೆ ಬೆಂಬಲ ಸೂಚಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ನಾಗೇಶ್, ‘ನಾಡು-ನುಡಿ-ಜಲ-ನೆಲದ ಪ್ರಶ್ನೆ ಬಂದಾಗ ಪರಿಷತ್ತು ಕನ್ನಡಿಗರ ಪರವಾಗಿ ಸದಾ ನಿಲ್ಲಲಿದೆ. ಬಂದ್ ಶಾಂತಿಯುತವಾಗಿ ನಡೆದು ಕಾವೇರಿ ಜಲ ವಿವಾದಕ್ಕೆ ತಾರ್ಕಿಕ ಅಂತ್ಯ ಕಾಣುವಂತಾಗಲಿ’ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

‘ಮಳೆ ಕೊರತೆಯಿಂದಾಗಿ ಕಾವೇರಿ ಕಣಿವೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಕರ್ನಾಟಕದ ಜಲಾಶಯಗಳಿಗೆ ಹರಿದು ಬಂದ ನೀರಿನ ಪ್ರಮಾಣ ಶೇ 50ಕ್ಕಿಂತಲೂ ಕಡಿಮೆಯಾಗಿದೆ. ಇದರ ಪರಿಣಾಮವಾಗಿ, ತಮಿಳುನಾಡಿಗೆ ಅದರ ಪಾಲಿನ ಕಾವೇರಿ ನದಿ ನೀರನ್ನು ಬಿಡುವ ಭರವಸೆ ನೀಡಲು ಕರ್ನಾಟಕಕ್ಕೆ ಸಾಧ್ಯವಿಲ್ಲವಾಗಿದೆ. ಈವಿಷಯದಲ್ಲಿ ಜನಪ್ರತಿನಿಧಿಗಳು ಸಹ ಸಂಘಟಿತ ಹೋರಾಟ ಮಾಡಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಬಂದ್‌ಗೆ ಬಿಜೆಪಿ–ಜೆಡಿಎಸ್ ಬಹಿರಂಗವಾಗಿ ಬಂದ್ ಬೆಂಬಲಿಸಿ, ಪಾಲ್ಗೊಳ್ಳುತ್ತಿರುವುದರಿಂದ ರಾಮನಗರದಿಂದ ಅಲ್ಲಿಗೆ ಸಂಚರಿಸುವ ಬಸ್ ಹಾಗೂ ಇತರ ವಾಹನಗಳ ಓಡಾಟಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ.

ಬಂದ್ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.