ADVERTISEMENT

ಜ. 12ರಿಂದ ಕೆಂಗಲ್ ಆಂಜನೇಯ ಜಾತ್ರೆ

ಅಧಿಕಾರಿಗಳ ಜೊತೆ ಪೂರ್ವಸಿದ್ಧತಾ ಸಭೆ ನಡೆಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಚಂದ್ರಯ್ಯ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 2:55 IST
Last Updated 31 ಡಿಸೆಂಬರ್ 2025, 2:55 IST
<div class="paragraphs"><p>ರಾಮನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ತಮ್ಮ ಕಚೇರಿಯಲ್ಲಿ ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರು ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆಯ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದ ‌ಸ್ವಾಮಿ ಜಾತ್ರಾ ಮಹೋತ್ಸವದ ಕುರಿತು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು. </p></div>

ರಾಮನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ತಮ್ಮ ಕಚೇರಿಯಲ್ಲಿ ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರು ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆಯ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದ ‌ಸ್ವಾಮಿ ಜಾತ್ರಾ ಮಹೋತ್ಸವದ ಕುರಿತು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.

   

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆಯ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಜ. 12ರಿಂದ 22ರವರೆಗೆ ಕೆಂಗಲ್ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ, ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಹಾಗೂ ಜಾನುವಾರುಗಳ ಜಾತ್ರೆ ನಡೆಯಲಿದೆ.

ಜಾತ್ರೆಯ ಪೂರ್ವಸಿದ್ಧತೆಗೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ತಮ್ಮ ಕಚೇರಿಯಲ್ಲಿ ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರು ಸಭೆ ನಡೆಸಿ, ಜಾತ್ರೆ ಹಾಗೂ ರಥೋತ್ಸವಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ತಯಾರಿಗಳ ಕುರಿತು ಪರಸ್ಪರ ಸಮನ್ವತೆಯಿಂದ ಕೆಲಸ ಮಾಡುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

‘ಬ್ರಹ್ಮ ರಥೋತ್ಸವ ಹಾಗೂ ಜಾನುವಾರು ಜಾತ್ರೆ ಪ್ರಯುಕ್ತ ಹೆಚ್ಚಿನ ಭಕ್ತರು ಹಾಗೂ ಸಾರ್ವಜನಿಕರು ದೇವಸ್ಥಾನಕ್ಕೆ ಬರುತ್ತಾರೆ. ಆ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕು. ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿ ವ್ಯವಸ್ಥಿತವಾಗಿ ಬಂದೋಬಸ್ತ್ ನಿರ್ವಹಿಸಬೇಕು’ ಎಂದು ಚಂದ್ರಯ್ಯ ಸೂಚಿಸಿದರು.

‘ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಪೊಲೀಸರು ಸ್ಥಳದಲ್ಲಿದ್ದು ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಲು ಸೂಕ್ತ ಸ್ಥಳವನ್ನು ಪರಿಶೀಲಿಸಿ, ಈಗಲೇ ಅಗತ್ಯ ವ್ಯವಸ್ಥೆ ಮಾಡಬೇಕು. ಈ ಕುರಿತು, ಪೊಲೀಸರು ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಬೇಕು’ ಎಂದರು.

‘ಜಾತ್ರಾ ಸ್ಥಳದಲ್ಲಿ ಆರೋಗ್ಯ ಇಲಾಖೆಯಿಂದ ತಾತ್ಕಾಲಿಕವಾಗಿ ಚಿಕಿತ್ಸಾ ಕೇಂದ್ರ ತೆರೆಯಬೇಕು. ಅಲ್ಲಿ ವ್ಶೆದ್ಯರು, ಸಿಬ್ಬಂದಿ, ಅಗತ್ಯ ಪರಿಕರಗಳು, ಔಷಧ ಇರಬೇಕು. ತುರ್ತು ಸಮಯಕ್ಕೆ ಅನುಕೂಲವಾಗುವಂತೆ ಸ್ಥಳದಲ್ಲೇ ಸಿದ್ಧ ಸ್ಥಿತಿಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ದನಗಳ ಜಾತ್ರೆಯಂದು ರಾಸುಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಪಶುಪಾಲನಾ ಇಲಾಖೆ ವತಿಯಿಂದ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆಯಬೇಕು. ರಾಸುಗಳಿಗೆ ಅಗತ್ಯವಿರುವ ಔಷಧ ಇಟ್ಟುಕೊಂಡಿರಬೇಕು. ಮುಖ್ಯವಾಗಿ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಲು ರಾಮನಗರ ನಗರಸಭೆ ವತಿಯಿಂದ ಪೌರ ಕಾರ್ಮಿಕರನ್ನು ನಿಯೋಜಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಸ್ಥಳದಲ್ಲಿ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯಗಳು, ದನಗಳ ಗೊಬ್ಬರವನ್ನು ಸ್ವಚ್ಛ ಮಾಡಲು, ಅಗ್ನಿ ಅವಘಡಗಳು ಸಂಭವಿಸದಂತೆ ಆಯಾ ಇಲಾಖೆಯವರು ಕ್ರಮ ವಹಿಸಬೇಕು. ಬೆಸ್ಕಾಂನಿಂದ ನಿರಂತರ ಹಾಗೂ ರಾತ್ರಿ ವೇಳೆ ಅನಿಯಮಿತವಾಗಿ ವಿದ್ಯುತ್ ಸರಬರಾಜು ಮಾಡಬೇಕು’ ಎಂದು ತಿಳಿಸಿದರು.

‘ಜಾತ್ರೆಯ ದಿನದಂದು ಪ್ರಸಾದ ತಯಾರಿಕಾ ವೇಳೆ ಪ್ರಸಾದಕ್ಕೆ ಬಳಸುವ ಪದಾರ್ಥಗಳನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಪರಿಶೀಲಿಸಬೇಕು. ಬ್ರಹ್ಮ ರಥವು ಸಂಚರಿಸುವ ಸ್ಥಳಗಳಲ್ಲಿ ಅರಣ್ಯ ಇಲಾಖೆಯಿಂದ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸಬೇಕು. ಲೋಕೋಪಯೋಗಿ ಇಲಾಖೆಯಿಂದ ರಥವನ್ನು ಪರಿಶೀಲಿಸಿ ದೃಢೀಕರಣ ವರದಿ ನೀಡಬೇಕು’ ಎಂದು ನಿರ್ದೇಶನ ನೀಡಿದರು.

ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಕೆ. ರಘು, ದೇವಸ್ಥಾನದ ಪ್ರಧಾನ ಅರ್ಚಕ ರವೀಂದ್ರ ಕುಮಾರ್, ಅರ್ಚಕ ರಾಜು, ಧಾರ್ಮಿಕ ದತ್ತಿ ಇಲಾಖೆಯ ತಹಶೀಲ್ದಾರ್ ಎಂ. ಜಿಶಾನ್ ಖಾನ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್, ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.